ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) 2025-26ನೇ ಸಾಲಿಗೆ ಅನ್ವಯವಾಗುವಂತೆ ನಿಗದಿಪಡಿಸಿದ್ದ ವಿದ್ಯುತ್‌ ದರಗಳನ್ನು ಪರಿಷ್ಕರಿಸಿದ್ದು, ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್‌ ದರವನ್ನು ಪ್ರತಿ ಯುನಿಟ್‌ಗೆ 10 ಪೈಸೆಯಿಂದ ಗರಿಷ್ಠ 95 ಪೈಸೆವರೆಗೆ ಹೆಚ್ಚಳ ಮಾಡಲಾಗಿದೆ.

ಬೆಂಗಳೂರು : ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) 2025-26ನೇ ಸಾಲಿಗೆ ಅನ್ವಯವಾಗುವಂತೆ ನಿಗದಿಪಡಿಸಿದ್ದ ವಿದ್ಯುತ್‌ ದರಗಳನ್ನು ಪರಿಷ್ಕರಿಸಿದ್ದು, ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್‌ ದರವನ್ನು ಪ್ರತಿ ಯುನಿಟ್‌ಗೆ 10 ಪೈಸೆಯಿಂದ ಗರಿಷ್ಠ 95 ಪೈಸೆವರೆಗೆ ಹೆಚ್ಚಳ ಮಾಡಲಾಗಿದೆ. ಇನ್ನು ಕೃಷಿ ಪಂಪ್‌ಸೆಟ್‌ಗಳಿಗೆ ಬಳಸುವ ವಿದ್ಯುತ್‌ ದರವನ್ನು ಯೂನಿಟ್‌ಗೆ ಸರಾಸರಿ 95 ಪೈಸೆಯಷ್ಟು ಕಡಿಮೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2025-26ನೇ ಸಾಲಿಗೆ ಅನ್ವಯವಾಗುವಂತೆ ವಿದ್ಯುತ್‌ ದರ ಪರಿಷ್ಕರಣೆ ವೇಳೆ ಕೆಇಆರ್‌ಸಿಯು ಕೈಗಾರಿಕೆ, ವಾಣಿಜ್ಯ ಬಳಕೆಯ ವಿದ್ಯುತ್‌ಗೆ ನಿಗದಿ ಮಾಡಿರುವ ದರ ಸರಿಯಿಲ್ಲ ಎಂದು ಎಸ್ಕಾಂಗಳು ಮೇಲ್ಮನವಿ ಸಲ್ಲಿಸಿದ್ದವು.

ಅದರಂತೆ ಕೆಇಆರ್‌ಸಿಯು ಪರಿಷ್ಕೃತ ದರಗಳನ್ನು ಪ್ರಕಟಿಸಿದ್ದು, ಇದು ಯಾವಾಗ ಜಾರಿಯಾಗಲಿದೆ ಎಂಬ ಬಗ್ಗೆ ಆದೇಶದಲ್ಲಿ ಸ್ಪಷ್ಟತೆ ನೀಡಿಲ್ಲ.

ಈ ಬಗ್ಗೆ ಕೆಇಆರ್‌ಸಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, 2025-26ನೇ ಸಾಲಿನ ದರ ಪರಿಷ್ಕರಣೆಯಾಗಿರುವುದರಿಂದ ಏ.1, 2025ರಿಂದಲೇ ಜಾರಿಯಾಗಬೇಕು ಎಂದು ಹೇಳಿದರು.

ಹಾಗಾದರೆ, ಪೂರ್ವಾನ್ವಯವಾಗುವಂತೆ ಹೆಚ್ಚುವರಿ ಹಣವನ್ನು ಒಟ್ಟಾಗಿ ಸಂಗ್ರಹ ಮಾಡಲಾಗುತ್ತದೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ನೀಡಲಿಲ್ಲ.

ಸರ್ಕಾರಕ್ಕೆ ಉಳಿತಾಯ:

ಇನ್ನು ಕೃಷಿ ಬಳಕೆ ವಿದ್ಯುತ್‌ ದರವನ್ನು ಕಡಿಮೆ ಮಾಡಿರುವುದರಿಂದ ಸಹಾಯಧನ ರೂಪದಲ್ಲಿ ನೀಡುವ ಮೊತ್ತವು 1,254.88 ಕೋಟಿ ರು.ಸರ್ಕಾರಕ್ಕೆ ಉಳಿತಾಯವಾಗಲಿದೆ.

ಹಿಂದೆ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಒಂದೇ ರೀತಿಯ ದರವನ್ನು ನಿಗದಿಪಡಿಸಲಾಗಿತ್ತು. ಆದರೆ ಈಗ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ.

ದರ ಪಟ್ಟಿ

ವರ್ಗ- ಹಾಲಿ ದರ - ಪರಿಷ್ಕೃತ ದರ

ಎಲ್‌ಟಿ-3 (ಎ) ವಾಣಿಜ್ಯ - 7 ರು. - 7.10 ರು.

ಎಲ್‌ಟಿ -5 (ಕೈಗಾರಿಕೆ) - 4.50 ರು. - 5.20 ರು.

ಎಚ್‌ಟಿ 2 ಎ (ಕೈಗಾರಿಕೆ) - 6.60 ರು. - 6.70 ರು.

ಎಚ್‌ಟಿ 2ಬಿ (ವಾಣಿಜ್ಯ) - 5.95 - 6.90