ಹುಬ್ಬಳ್ಳಿ-ಹಾವೇರಿ ಬಸ್‌ನಲ್ಲಿ ಚಾಲಕ-ನಿರ್ವಾಹಕರು ಪ್ರಯಾಣಿಕರಿದ್ದಾಗ ನಮಾಜ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಸಾರಿಗೆ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಸೇವಾ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಶಿಸ್ತು ಕ್ರಮ ಜರುಗಿಸಲಾಗುವುದು.

ಹಾವೇರಿ/ಬೆಂಗಳೂರು (ಏ.30): ಹುಬ್ಬಳ್ಳಿಯಿಂದ ಹಾವೇರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್‌ನಲ್ಲಿ ಚಾಲಕ-ಕಂ-ನಿರ್ವಾಹಕ ಬಸ್‌ ಅನ್ನು ರಸ್ತೆ ಬದಿಗೆ ನಿಲ್ಲಿಸಿ, ಬಸ್ಸಿನೊಳಗೆ ನಮಾಜ್ ಮಾಡಿ ಸೇವಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹುಬ್ಬಳ್ಳಿಯ ಎನ್‌ಡಬ್ಲ್ಯೂಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.

ದಿನಾಂಕ 29-04-2025 ರ ಸಂಜೆ ಹುಬ್ಬಳ್ಳಿಯಿಂದ ಹಾವೇರಿಗೆ ಕಾರ್ಯಾಚರಣೆ ಯಾಗುತ್ತಿದ್ದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಚಾಲಕ-ಕಂ-ನಿರ್ವಾಹಕ ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿರುವ ಬಗ್ಗೆ ಪ್ರಯಾಣಿಕರೊಬ್ಬರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಕೆಲವೊಂದು ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗಿರುತ್ತದೆ.

ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯದ‌ ಹಕ್ಕಿದ್ದರೂ ಸಹ ಸಾರ್ವಜನಿಕ ಸೇವೆಯಲ್ಲಿರುವವರು, ಕರ್ತವ್ಯದ ವೇಳೆ ಹೊರತುಪಡಿಸಿ ತಮ್ಮ‌ ತಮ್ಮ ಧರ್ಮವನ್ನು ಪಾಲಿಸಬಹುದಾಗಿರುತ್ತದೆ. ಆದರೆ, ಕರ್ತವ್ಯದ ಸಮಯದಲ್ಲಿ ಮಾರ್ಗಮಧ್ಯದಲ್ಲಿ ಬಸ್ ಅನ್ನು ನಿಲ್ಲಿಸಿ, ಬಸ್ ನಲ್ಲಿ ಪ್ರಯಾಣಿಕರು‌ ಇದ್ದಾಗ್ಯೂ ಸಹ ನಮಾಜ್ ಮಾಡಿರುವುದು ಆಕ್ಷೇಪಾರ್ಹ. ಈ ವಿಡಿಯೋ ಬಗ್ಗೆ ಕೂಡಲೇ ತನಿಖೆ ನಡೆಸಿ, ಸಂಬಂಧಪಟ್ಟ‌ ಸಿಬ್ಬಂದಿಯು ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಸೂಕ್ತ ಶಿಸ್ತಿನ‌ ಕ್ರಮ ಜರುಗಿಸಲು ಸೂಚಿಸಿದೆ. ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವಂಯೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ.

View post on Instagram

ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ಷೇಪ: ಇನ್ನು ಸರ್ಕಾರಿ ಸಂಸ್ಥೆಯ ಸಾರಿಗೆ ಬಸ್‌ನಲ್ಲಿ ಸೇವಾ ನಿಯಮ ಉಲ್ಲಂಘನೆ ಮಾಡಿ ಪ್ರಯಾಣಿಕರು ಇರುವ ವೇಳೆಯೇ ಬಸ್ಸಿನೊಳಗೆ ನಮಾಜ್ ಮಾಡಿರುವುದು ಧಾರ್ಮಿಕತೆ ಹಿನ್ನೆಲೆಯಲ್ಲಿ ಸರಿಯೇ ಆಗಿದ್ದರೂ, ಕರ್ತವ್ಯದ ಹಿನ್ನೆಲೆಯಲ್ಲಿ ತಪ್ಪು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರಿಗೆ ಸಿಬ್ಬಂದಿಯ ನಡೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇನ್ನು ಕೆಲವರು ಮಾತ್ರ ಆತ ಧರ್ಮ ಪಾಲನೆ ವಿಚಾರದಲ್ಲಿ ಮಾಡಿದ್ದು ಸರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಕೆಲವರು ಇದು ಅತಿರೇಕದ ವರ್ತನೆ ಆಗಿದ್ದು, ಕೆಲಸದಿಂದ ವಜಾ ಮಾಡುವಂತೆಯೂ ಆಗ್ರಹ ಮಾಡಿದ್ದಾರೆ.

ಪ್ರಶ್ನೆ ಮಾಡದ ಪ್ರಯಾಣಿಕರು:
ಹುಬ್ಬಳ್ಳಿಯಿಂದ ಹಾವೇರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಸುಮಾರು 30 ಪ್ರಯಾಣಿಕರು ಇದ್ದರು. ಈ ಪ್ರಯಾಣಿಕರನ್ನು ಸರಿಯಾದ ಸಮಯಕ್ಕೆ ಊರಿಗೆ ಸೇರಿಸುವ ಬದಲು ನಮಾಜ್ ಮಾಡುತ್ತಾ ಕುಳಿತಿದ್ದಾರೆ. ಆದರೆ, ಈ ವೇಳೆ ಬಸ್ಸಿನಲ್ಲಿ ಕುಳಿತಿದ್ದ ಯಾವುದೇ ಪ್ರಯಾಣಿಕರು ಕೂಡ ಪ್ರಶ್ನೆಯನ್ನು ಮಾಡಿಲ್ಲ. ಅದರ ಜೊತೆಗೆ, ಬಸ್ ಡ್ರೈವರ್‌ಗೆ ನಮಾಜ್ ಮಾಡುವುದಕ್ಕೆ ಒಂದು ಸಂಪೂರ್ಣ ಸೀಟನ್ನು ಬಿಟ್ಟುಕೊಟ್ಟು ಬೇರೆ ಕಡೆಗೆ ಹೋಗಿ ಕುಳಿತಿದ್ದಾರೆ. ಡ್ರೈವರ್ ಸೀಟಿನ ಹಿಂದಿನ 3 ಜನರು ಕುಳಿತುಕೊಳ್ಳುವ ಸೀಟಿನಲ್ಲಿ ಟವೆಲ್ ಹಾಸಿಕೊಂಡು, ಟೊಪ್ಪಿಗೆ ಧರಿಸಿ, ಸಾಕ್ಸ್ ಬಿಚ್ಚದೇ ನಮಾಜ್ ಮಾಡಿದ್ದಾರೆ. ಜೊತೆಗೆ, ನಮಾಜ್ ಮಾಡುವುದನ್ನು ಕೆಲವು ಪ್ರಯಾಣಿಕರು ಕುತೂಹಲದಿಂದ ವೀಕ್ಷಣೆ ಮಾಡಿದ್ದಾರೆ. ಆದರೆ, ಸಾರಿಗೆ ಸಿಬ್ಬಂದಿಯ ಈ ನಡೆಯನ್ನು ಒಬ್ಬ ಪ್ರಯಾಣಿಕ ಇದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಇದು ವೈರಲ್ ಆದ ನಂತರ ನೌಕರನ ಕೆಲಸಕ್ಕೆ ಕುತ್ತು ಬಂದಿದೆ.