ಹಾನಗಲ್-ವಿಶಾಲಗಡ್ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ಚಾಲಕ-ನಿರ್ವಾಹಕರು ಪ್ರಯಾಣಿಕರಿದ್ದ ಬಸ್‌ನಲ್ಲಿ ನಮಾಜ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಕರ್ತವ್ಯಲೋಪ ಹಾಗೂ ಸೇವಾ ನಿಯಮ ಉಲ್ಲಂಘನೆ ಎಂಬ ಆರೋಪ ಕೇಳಿಬಂದಿದ್ದು, ಇಲಾಖೆ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಹಾವೇರಿ (ಏ.30): ಹಾವೇರಿ ಜಿಲ್ಲೆಯ ಹಾನಗಲ್-ವಿಶಾಲಗಡ್ ಮಾರ್ಗದ ಸಾರಿಗೆ ಬಸ್‌ನಲ್ಲಿ ಕರ್ತವ್ಯದಲ್ಲಿದ್ದ ಡ್ರೈವರ್ ಕಂ ಕಂಡಕ್ಟರ್ ಮಾರ್ಗ ಮಧ್ಯದಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿದ ಘಟನೆ ನಡೆದಿದೆ. ಆದರೆ, ಈ ನಮಾಜ್ ಮಾಡುವ ದೃಶ್ಯವನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಭಾರೀ ವೈರಲ್ ಆಗುತ್ತಿದೆ. ಜೊತೆಗೆ, ಸರ್ಕಾರಿ ಕೆಲಸದ ಅವಧಿಯಲ್ಲಿ ಹತ್ತಾರು ಪ್ರಯಾಣಿಕರನ್ನು ಬಸ್‌ನಲ್ಲಿ ಕೂರಿಸಿ ನಮಾಜ್ ಮಾಡಿದ ಡ್ರೈವರ್‌ನ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
'ಈ ಘಟನೆ ನಿನ್ನೆ ಸಂಜೆ ಹುಬ್ಬಳ್ಳಿ ಹಾಗೂ ಹಾವೇರಿ ಮಾರ್ಗದ ಮಧ್ಯದಲ್ಲಿ ನಡೆದಿದೆ. ಬಸ್ ನಲ್ಲಿ ಹಲವು ಪ್ರಯಾಣಿಕರು ಇದ್ದರೂ ಕೂಡ, ಚಾಲಕನು ಬಸ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ತಾವು ನಮಾಜ್ ಮಾಡುವ ಮೂಲಕ ಧಾರ್ಮಿಕ ಆಚರಣೆ ಮಾಡಿದ್ದಾರೆ. ಈ ವೇಳೆ ಕೆಲ ಪ್ರಯಾಣಿಕರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ, ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸಾರ್ವಜನಿಕರಿಗೆ ಸೇವೆ ನೀಡುವ ಸರ್ಕಾರಿ ಸಂಸ್ಥೆಯ ಬಸ್‌ನಲ್ಲಿ ಕರ್ತವ್ಯದ ವೇಳೆ ಈ ರೀತಿಯ ಧಾರ್ಮಿಕ ಚಟುವಟಿಕೆಯನ್ನು ಮಾಡುವುದು ಸರಿಯಾದ ಚಟುವಟಿಕೆ ಅಲ್ಲ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಸಾರ್ವಜನಿಕ ಸೇವೆಯ ದುರಪಯೋಗವೆಂದು ನಿಂದಿಸಿದ್ದಾರೆ. ಇದಲ್ಲದೆ, ಬಸ್ ಸಕಾಲದಲ್ಲಿ ತಲುಪದೇ ವಿಳಂಬವಾಗಿರುವ ಬಗ್ಗೆ ಸಹ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಬಹುತೇಕ ಪ್ರಯಾಣಿಕರು ಮುಸ್ಲಿಂ ಧರ್ಮದಲ್ಲಿ ನಮಾಜ್ ಮಾಡುವುದು ಪವಿತ್ರ ಆಚರಣೆ ಆಗಿದ್ದು, 5 ನಿಮಿಷ ಸಮಯ ತೆಗೆದುಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸುಮ್ಮನೆ ಕುಳಿತುಕೊಂಡಿದ್ದರು. ಇನ್ನು ವಿಡಿಯೋದಲ್ಲಿ ಡ್ರೈವರ್ ಅವರ ನಮಾಜ್ ಮಾಡುವುದನ್ನು ಯಾರೊಬ್ಬರೂ ಪ್ರಶ್ನೆ ಮಾಡಿಲ್ಲ.
ಆದರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಹಿರಿಯ ಅಧಿಕಾರಿಗಳಿಗೆ ತಿಳಿದುಬಂದಲ್ಲಿ ನಮಾಜ್ ಮಾಡಿದ ಸಿಬ್ಬಂದಿ ಮೇಲೆ ಕಠಿಣ ಕ್ರಮವೂ ಆಗಬಹುದು ಎಂದು ಕೆಲವರು ಹೇಳಿದ್ದಾರೆ. ಆದರೆ, ಇನ್ನು ಕೆಲವರು 5 ನಿಮಿಷ ನಮಾಜ್ ಮಾಡಿದ್ದಕ್ಕೆ ಸರ್ಕಾರ ಒಂದು ನೋಟೀಸ್ ನೀಡಿ, ಎಚ್ಚರಿಕೆ ರವಾನಿಸಿ ಸುಮ್ಮನಾಗಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಸರ್ಕಾರಿ ಸೇವೆಯ ವೇಳೆ ನಮಾಜ್ ಮಾಡಿದ್ದರ ಸಂಬಂಧ ಸಾರಿಗೆ ಇಲಾಖೆಯು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಇದು ಸೇವಾ ನಿಯಮಗಳ ಉಲ್ಲಂಘನೆ ಆಗುತ್ತದೆ ಎಂದು ಸಾರಿಗೆ ಇಲಾಖೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಕೇರಳದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ, ಡ್ರೈವರ್ ಸ್ಥಿತಿ ಗಂಭೀರ:
ಕೇರಳದಲ್ಲಿ ಮೈಸೂರು ಡಿಪೋದ KSRTC ಬಸ್ ಭೀಕರ ಅಪಘಾತವಾಗಿದೆ. ಕೇರಳದ ವಯನಾಡಿನಲ್ಲಿ ಟೂರಿಸ್ಟ್ ಬಸ್ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮುಖಾಮುಖಿ ಡಿಕ್ಕಿಯಾಗಿವೆ. ವಯನಾಡಿನ ಕಾಟಿಕುಳಂ ಎಂಬಲ್ಲಿ ಅಪಘಾತ ನಡೆದಿದ್ದು, ಬಸ್ ಚಾಲಕನಿಗೆ ಗಂಭೀರ ಗಾಯವಾಗಿದೆ. ಬಸ್ ಡ್ರೈವರ್ ಸೇರಿದ ರಾಜ್ಯದ ನಾಲ್ವರಿಗೆ ಮಾರಣಾಂತಿಕ ಗಾಯವಾಗಿವೆ. ಮೈಸೂರು ಘಟಕಕ್ಕೆ ಸೇರಿದ KA 09 F 5392 ನಂಬರಿನ KSRTC ಬಸ್ ದುರಂತಕ್ಕೆ ಒಳಗಾದ ಬಸ್ ಆಗಿದೆ. ನಿನ್ನೆ ಸಂಜೆ ಕಾಟಿಕುಳಂ ಬಳಿ ಅಪಘಾತ ನಡೆದಿದ್ದು, ಗಾಯಾಳುಗಳನ್ನು ವಯನಾಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟೂರಿಸ್ಟ್ ಬಸ್ ಮುಂಭಾಗ ಸಂಪೂರ್ಣ ಜಖಂ ಆಗಿವೆ. ಸಂಜೆ ವೇಳೆ ತಿರುವು ಜಾಗದಲ್ಲಿ ಮಂಜಿನ ವಾತಾವರಣ ಇದ್ದುದರಿಂದ ವೇಗವಾಗಿ ಬರುತ್ತಿದ್ದ ಬಸ್‌ಗಳು ಚಾಲಕರ ನಿಯಂತ್ರಣ ತಪ್ಪಿ ಡಿಕ್ಕಿಯಾಗಿವೆ ಎಂದು ತಿಳಿದುಬಂದಿದೆ.


