ಇದ್ದ ಜಮೀನೆಲ್ಲ ಕೊಟ್ಟು ಈಗ ಸ್ಮಶಾನಕ್ಕೆ ಜಾಗ ಸಿಗದೆ ಸರ್ಕಾರವೇ ಜಾಗಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ಓಡಾಡುವ ಸ್ಥಿತಿ ಬಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ವಿಧಾನಸಭೆ (ಮಾ.17): ಇದ್ದ ಜಮೀನೆಲ್ಲ ಕೊಟ್ಟು ಈಗ ಸ್ಮಶಾನಕ್ಕೆ ಜಾಗ ಸಿಗದೆ ಸರ್ಕಾರವೇ ಜಾಗಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ಓಡಾಡುವ ಸ್ಥಿತಿ ಬಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಪ್ರಭು ವಿ.ಚೌವ್ಹಾಣ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲಾ ಸರ್ಕಾರಗಳು ವಸತಿ ಪ್ರದೇಶಗಳು, ತಾಂಡಾಗಳಿಗೆ ಸ್ಮಶಾನಕ್ಕೆ ಭೂಮಿ ನೀಡಲು ಪ್ರಯತ್ನಿಸಿವೆ. ಆದರೂ ಕೆಲ ಕಡೆ ಸ್ಮಶಾನಕ್ಕೆ ಭೂಮಿ ಸಿಗುತ್ತಿಲ್ಲ. ರೈತರು ಸೇರಿ ಬೇರೆ ಉದ್ದೇಶಗಳಿಗೆ ಸರ್ಕಾರಿ ಭೂಮಿ ಕೊಟ್ಟು ಈಗ ಸ್ಮಶಾನಕ್ಕೆ ಭೂಮಿ ಲಭ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸ್ಮಶಾನಕ್ಕಾಗಿ ₹58 ಕೋಟಿ ವೆಚ್ಚದಲ್ಲಿ ಖಾಸಗಿ ಭೂಮಿ ಖರೀದಿಸಲಾಗಿದೆ ಎಂದು ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭವಿಷ್ಯಕ್ಕಾಗಿ ಜಾಗ ಮೀಸಲಿಡಿ: ಈ ವೇಳೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಮುಂದಿನ ಜನಾಂಗದ ಭವಿಷ್ಯದ ದೃಷ್ಟಿಯಿಂದ ಇನ್ನು ಮುಂದೆ ಭೂ ಮಂಜೂರಾತಿ ಮಾಡುವ ಮುನ್ನ ಮುಂದಿನ 20-30 ವರ್ಷ ಗಮನಿಸಿ ಶಾಲೆ, ಆಸ್ಪತ್ರೆ, ಸ್ಮಶಾನ ಇತರೆ ಉದ್ದೇಶಗಳಿಗೆ ಸರ್ಕಾರಿ ಭೂಮಿ ಮೀಸಲಿಡಬೇಕು. ಈ ನಿಟ್ಟಿನಲ್ಲಿ ನೀವು ಕೆಲಸ ಮಾಡಿದರೆ ದಾಖಲೆಯಾಗಿ ಉಳಿಯಲಿದೆ ಎಂದು ಕಂದಾಯ ಸಚಿವರಿಗೆ ಸಲಹೆ ನೀಡಿದರು. ರಾಜ್ಯದಲ್ಲಿ ಖಾಸಗಿ ಜಾಗ ಖರೀದಿಸಲು ಸಿಗುತ್ತಿಲ್ಲ. ವಿವಿಧ ಯೋಜನೆಗಳಡಿ ಸರ್ಕಾರವೇ ಜನರಿಗೆ ಜಮೀನು ಕೊಟ್ಟಿದೆ. ಕೆಲ ಕಡೆ ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಸಿಗುತ್ತಿಲ್ಲ. ನಾನು ಕಂದಾಯ ಸಚಿವನಾಗಿದ್ದಾಗ ಸಾಕಷ್ಟು ಪ್ರಯತ್ನ ಮಾಡಿದ್ದೆ.

ಮೀಸಲಿಡಲು ಅಗತ್ಯ ಕ್ರಮ

ಇದಕ್ಕೆ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿ, ವಿರೋಧ ಪಕ್ಷದ ನಾಯಕರ ಮಾತಿಗೆ ಸಹಮತವಿದೆ. ಸರ್ಕಾರಿ ಜಮೀನು ಬೇರೆ ಬೇರೆ ಕಾರಣಗಳಿಗೆ ಕೊಟ್ಟೂ ಕೊಟ್ಟೂ ಈಗ ಸ್ಮಶಾನಕ್ಕೆ ಜಾಗ ಸಿಗದೆ ಸರ್ಕಾರವೇ ಜಾಗಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ಓಡಾಡುವ ಸ್ಥಿತಿ ಬಂದಿದೆ. ಹಿಂದೂ ಸಮುದಾಯದಲ್ಲಿ ಶವ ಸುಡುವ ಮತ್ತು ಹೂಳುವ ಪದ್ಧತಿಯಿದೆ. ಬೆಂಗಳೂರು ಸುತ್ತಮುತ್ತ ಹೂಳಲೂ ಜಾಗ ಸಿಗದೆ ಸುಡಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಹೂಳುವ ಪದ್ಧತಿಯಿದೆ. ಸ್ಮಶಾನಕ್ಕೆ ಜಾಗ ಇಲ್ಲ ಎಂದರೆ ಸಿಟ್ಟಾಗುತ್ತಾರೆ. ಸ್ಮಶಾನ, ಶಾಲೆ, ಆಟದ ಮೈದಾನ, ಪಾರ್ಕ್‌ ಇಂತಹ ಸೌಲಭ್ಯಗಳಿಗೆ ಜಾಗ ಕೊಡಬೇಕು.

ಮುಂದಿನ ದಿನಗಳಲ್ಲಿ ಶಾಲೆ, ಸ್ಮಶಾನ, ಆಟದ ಮೈದಾನ, ಉದ್ಯಾನವನಕ್ಕೆ ಮೊದಲು ಸರ್ಕಾರಿ ಜಮೀನು ಮೀಸಲಿಟ್ಟು ಬಳಿಕ ಬೇರೆ ಉದ್ದೇಶಗಳಿಗೆ ಜಮೀನು ನೀಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಔರಾದ್‌ ತಾಲೂಕಿನಲ್ಲಿ 95 ಗ್ರಾಮಗಳ ಪೈಕಿ 88 ಗ್ರಾಮಗಳಿಗೆ ಮತ್ತು ಕಮಲಾನಗರ ತಾಲೂಕಿನಲ್ಲಿ 54 ಗ್ರಾಮಗಳ ಪೈಕಿ 50 ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ನೀಡಲಾಗಿದೆ. ಎರಡೂ ತಾಲೂಕುಗಳಿಂದ ಉಳಿದ 9 ಗ್ರಾಮಗಳ ಪೈಕಿ 2 ಗ್ರಾಮಗಳಿಗೆ ಸರ್ಕಾರಿ ಜಾಗ ಲಭ್ಯವಿದೆ. ಉಳಿದ 7 ಗ್ರಾಮಗಳಿಗೆ ಪಕ್ಕದ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕಾಯ್ದಿರಿಸಲಾಗುವುದು. 15 ದಿನಗಳೊಳಗೆ ಈ ಕೆಲಸ ಮಾಡಲು ಡಿಸಿಗಳಿಗೆ ಸೂಚಿಸುವುದಾಗಿ ತಿಳಿಸಿದರು.