Mundgod school mid-day meal incident: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸೇವಿಸಿದ 22 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಆಹಾರದಲ್ಲಿ ಇಲಿ ಹಿಕ್ಕೆಗಳು ಪತ್ತೆಯಾಗಿದ್ದು, ಇದು ಮಕ್ಕಳ ಅಸ್ವಸ್ಥತೆಗೆ ಕಾರಣವೆಂದು ಶಂಕಿಸಲಾಗಿದೆ. 

ಕಾರವಾರ (ನ.29): ಬಿಸಿಯೂಟ ಸೇವಿಸಿದ ನಂತರ 22 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿರುವ ಸರ್ಕಾರಿ ಮಾದರಿ ಶಾಲೆಯೊಂದರಲ್ಲಿ ನಡೆದಿದೆ.

ಇಲಿ ಹಿಕ್ಕೆ ಪತ್ತೆ, 22 ವಿದ್ಯಾರ್ಥಿಗಳು ಆಸ್ಪತ್ರೆಗೆ

ಮುಂಡಗೋಡದ ಸರ್ಕಾರಿ ಮಾದರಿ ಶಾಲೆಯಲ್ಲಿ ಒಟ್ಟು 400 ವಿದ್ಯಾರ್ಥಿಗಳಿರುವ ಓದುತ್ತಿದ್ದಾರೆ. ಎಂದಿನಂತೆ ಮಧ್ಯಾಹ್ನದ ಬಿಸಿಯೂಟವನ್ನು ಸೇವಿಸಿದ ನಂತರ, ಹಲವು ಮಕ್ಕಳು ವಾಂತಿ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳು ಸೇವಿಸಿದ ಬಿಸಿಯೂಟದಲ್ಲಿ ಇಲಿ ಹಿಕ್ಕೆಗಳು ಪತ್ತೆಯಾಗಿರುವುದು ದೃಢಪಟ್ಟಿದೆ. ಆಹಾರದಲ್ಲಿನ ಈ ಅಶುಚಿತ್ವದಿಂದಾಗಿ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಚಿಕಿತ್ಸೆ:

ಅಸ್ವಸ್ಥಗೊಂಡ ಒಟ್ಟು 22 ವಿದ್ಯಾರ್ಥಿಗಳನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿದ ಕೂಡಲೇ ತಾಲೂಕು ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಮುಂಡಗೋಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಬಿಸಿಯೂಟ ತಯಾರಿಕೆ ಮತ್ತು ವಿತರಣೆಯಲ್ಲಿನ ನಿರ್ಲಕ್ಷ್ಯದ ಬಗ್ಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.