ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಾವಧಿಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಯಾವುದೇ ಅಧಿಕಾರ ಹಂಚಿಕೆ ಸೂತ್ರ ರಚನೆಯಾಗಿಲ್ಲ ಮತ್ತು ಹೈಕಮಾಂಡ್ ಕೂಡ ಬದಲಾವಣೆ ಬಗ್ಗೆ ಮಾತನಾಡಿಲ್ಲ ಎಂದು ಅವರು ಹೇಳಿದ್ದಾರೆ.

ಮೈಸೂರು (ನ.27): ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಸೂತ್ರ ಮತ್ತು ಮುಖ್ಯಮಂತ್ರಿ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗಳ ಮಧ್ಯೆಯೇ, ಸಿಎಂ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಈ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಪೂರ್ಣಾವಧಿಗೆ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಯಾವುದೇ ಕಾರಣವಿಲ್ಲದೆ ನಾಯಕತ್ವ ಬದಲಾವಣೆ ಚರ್ಚೆ ತರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಯತೀಂದ್ರ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯಾವ ಕಾರಣಗಳೂ ಇಲ್ಲ. ಅವರ ಮೇಲೆ ಯಾವ ಆರೋಪವೂ ಇಲ್ಲ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯೇ ಬರಬಾರದಿತ್ತು. ಆದರೂ ಕೆಲವರು ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರ ಹಂಚಿಕೆ ಸೂತ್ರವೇ ರಚನೆಯಾಗಿಲ್ಲ:

ರಾಜ್ಯದಲ್ಲಿ ಮುನ್ನೆಲೆಗೆ ಬಂದಿರುವ ಅಧಿಕಾರ ಹಂಚಿಕೆ ಸೂತ್ರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯತೀಂದ್ರ, ನನಗೆ ಇರುವ ಮಾಹಿತಿ ಪ್ರಕಾರ, ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ. ನಮ್ಮ ತಂದೆಯವರಾಗಲಿ ಅಥವಾ ಕೆಲ ಹಿರಿಯ ಸಚಿವರಾಗಲಿ ಈ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಅಲ್ಲಿಗೆ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲ ಎಂದು ಅರ್ಥ ತಾನೇ? ಎಂದು ಪ್ರಶ್ನಿಸಿದರು.

ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿಲ್ಲ:

ಹೈಕಮಾಂಡ್ ಎಲ್ಲೂ ಕೂಡ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ನನಗೆ ವಿಶ್ವಾಸ ಇದೆ, ಇನ್ನು ಎರಡುವರೆ ವರ್ಷ ನಮ್ಮ ತಂದೆಯೇ ಮುಖ್ಯಮಂತ್ರಿಯಾಗಿರುತ್ತಾರೆ' ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕರ ಬೆಂಬಲದ ಕುರಿತು ಮಾತನಾಡಿ, 'ಯಾರಿಗೆ ಎಷ್ಟು ಶಾಸಕರ ಬೆಂಬಲ ಇದೆ ಎಂಬಂತಹ ಚರ್ಚೆ ಮಾಡುವುದು ಬೇಡ. ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಎಲ್ಲಾ ಶಾಸಕರ ಬೆಂಬಲ ನಮ್ಮ ತಂದೆಗೆ ಇದೆ' ಎಂದು ಸ್ಪಷ್ಟಪಡಿಸಿದರು.

ಸ್ವಾಮೀಜಿಯವರಿಗೆ ತಿರುಗೇಟು: ಹೊರಗಿನವರ ಅಭಿಪ್ರಾಯ ಅನಗತ್ಯ

ಇತ್ತೀಚೆಗೆ ಆದಿಚುಂಚನಗಿರಿ ಮಠದ ಶಾಖಾ ಮಠಾಧೀಶರಾದ ನಂಜಾವಧೂತ ಸ್ವಾಮೀಜಿ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ನೀಡುವಂತೆ ಹೈಕಮಾಂಡ್‌ಗೆ ಆಗ್ರಹಿಸಿದ್ದ ಹೇಳಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 'ಯಾರನ್ನು ಸಿಎಂ ಮಾಡಬೇಕು, ಯಾರನ್ನು ಮಾಡಬಾರದು ಎಂಬುದು ನಮ್ಮ ಪಕ್ಷದ ಆಂತರಿಕ ವಿಚಾರ. ಅದು ನಮ್ಮ ಶಾಸಕರಿಗೆ ಮತ್ತು ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅದರ ಬಗ್ಗೆ ಬೇರೆಯವರ ಅಭಿಪ್ರಾಯ ಅನಗತ್ಯ. ಈ ಮೂಲಕ ಮುಖ್ಯಮಂತ್ರಿ ಕುರ್ಚಿ ವಿಷಯದಲ್ಲಿ ಮಠಾಧೀಶರ ಮಧ್ಯಪ್ರವೇಶವನ್ನು ಪರೋಕ್ಷವಾಗಿ ತಳ್ಳಿಹಾಕಿದ್ದಾರೆ.