ಸಿದ್ದರಾಮಯ್ಯ ಸ್ಥಾನ ತುಂಬಬಲ್ಲ ಶಕ್ತಿ ಈ ನಾಯಕನಿಗಿದೆ, ಪುತ್ರ ಯತೀಂದ್ರ ಮಾತಿನಿಂದ ಸಂಚಲನ ಸೃಷ್ಟಿಯಾಗಿದೆ. 2028ರ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧಿಸಲ್ಲ, ಅವರ ಸ್ಥಾನ ತುಂಬಬಲ್ಲ ಶಕ್ತಿ ಯಾರಿಗಿದೆ ಅನ್ನೋದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿ (ಅ.22) ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ , ಸಂಪುಟ್ ಪುನರ್ ರಚನೆ ಸೇರಿದಂತೆ ಹಲವು ಚರ್ಚೆಗಳು ಮುನ್ನಲೆಗೆ ಬಂದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 2028ರ ವಿಧಾನಸಭೆ ಚುನಾವಣೆಗೆ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಿಲ್ಲ. ಹೀಗಾಗಿ ಜಾತ್ಯಾತೀತ ಕಾಂಗ್ರೆಸ್ ಸಿದ್ದಾಂತ ಇಟ್ಟುಕೊಂಡ ನಾಯಕರನ್ನು ಸತೀಶ್ ಜಾರಕಿಹೊಳಿ ಮುನ್ನಡೆಸಲಿ. ಸಿದ್ದರಾಮಯ್ಯ ಸ್ಥಾನ ತುಂಬಬಲ್ಲ ಶಕ್ತಿ ಸತೀಶ್ ಜಾರಕಿಹೊಳಿಗೆ ಇದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
2028ರ ನಂತರ ಮುನ್ನಡೆಸುವ ನಾಯಕ
ಬೆಳಗಾವಿಯಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ತಂದೆ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡವರು. ಅದೇ ಸಿದ್ದಾಂತದಲ್ಲಿ ಸತೀಶ್ ಜಾರಕಿಹೊಳಿಯವರು ನಂಬಿಕೆ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. 2028ರ ಚುನಾವಣೆಯಲ್ಲಿ ತಂದೆಯವರು ಸ್ಪರ್ಧಿಸಲ್ಲ ಅಂದಿದ್ದಾರೆ.ಸಿದ್ದರಾಮಯ್ಯ ಹೊರತುಪಡಿಸಿದ್ರೇ ಅವರ ಸ್ಥಾನ ತುಂಬವ ಶಕ್ತಿ ಸತೀಶ್ ಜಾರಕಿಹೊಳಿಗೆ ಖಂಡಿತ ಇದೆ. ತಂದೆಯವರು ರಾಜಕೀಯ ನಿವೃತ್ತಿಯಾದ ಬಳಿಕ ಆ ಸ್ಥಾನ ತುಂಬುವ ಶಕ್ತಿ ಕೆಲವೇ ನಾಯಕರಲ್ಲಿ ಸತೀಶ್ ಜಾರಕಿಹೊಳಿ ಒಬ್ಬರು ಎಂದಿದ್ದಾರೆ. ಜಾತ್ಯಾತೀತ ಕಾಂಗ್ರೆಸ್ ಸಿದ್ದಾಂತ ಇಟ್ಟುಕೊಂಡ ಎಷ್ಟೋ ಜನ ರಾಜಕಾರಣಿಗಳಿದ್ದಾರೆ. ಅವರನ್ನು ಸತೀಶ್ ಜಾರಕಿಹೊಳಿ ಮುನ್ನಡೆಸಲಿದೆ. ಕಾರಣ 2028ರ ನಂತರ ಮುನ್ನಡೆಸುವ ನಾಯಕ ಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಉತ್ತರಾಧಿಕಾರಿ ಕುರಿತು ಯತೀಂದ್ರ ಸ್ಪಷ್ಟನೆ
ಮುಂದಿನ ರಾಜಕೀಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬ ವಿಚಾರ ಚರ್ಚೆಯಾಗುತ್ತಿದ್ದಂತೆ ಈ ಕುರಿತು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. 2028 ಗಮನದಲ್ಲಿಟ್ಟುಕೊಂಡು ಹೇಳಿದ್ದೇನೆ, ಆದರೆ ರಾಜಕೀಯ ಉತ್ತರಾಧಿಕಾರಿ ಬಗ್ಗೆ ನಾನು ಮಾತನಾಡಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ರೀತಿ ಸೈದಾಂತಿಕವಾಗಿ ರಾಜಕಾರಣ ಮಾಡುವವರು ಮುನ್ನಡೆಸಲಿ ಅನ್ನೋ ಉದ್ದೇಶ ಇಟ್ಟುಕೊಂಡು ಹೇಳಿದ್ದೇನೆ ಎಂದು ಯತೀಂದ್ರ ಸ್ಪಷ್ಟಪಡಿಸಿದ್ದಾರೆ.
ನವೆಂಬರ್‌ನಲ್ಲಿ ಆಗುತ್ತಾ ಕ್ರಾಂತಿ
ನವೆಂಬರ್ ತಿಂಗಳಲ್ಲಿ ಸಿಎಂ ಬದಲಾವಣೆ, ಸಂಪುಟ ಪುನರ್ ರಚನೆ ಕುರಿತು ಮಾತುಗಳು ಕೇಳಿಬರುತ್ತಿದೆ. ಈ ಕುರಿತು ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ನವೆಂಬರ್ ಕ್ರಾಂತಿ ಬರೀ ಊಹಾಪೋಹ . ಯಾವುದೇ ನಾಯಕತ್ವದ ಬದಲಾವಣೆ ಪ್ರಶ್ನೆ ಇಲ್ಲ, ಈ ರೀತಿ ಚರ್ಚೆ ಪಕ್ಷದಲ್ಲಿ ನಡೆದಿಲ್ಲ ಎಂದಿದ್ದಾರೆ. ಇದೇ ವೇಳೆ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂಬ ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಯತೀಂದ್ರ, ಸಿಎಂ ಆಗುವ ಅರ್ಹತೆ ಇದ್ದವರು ಅನೇಕ ನಾಯಕರು ಇದ್ದಾರೆ. ಈ ಬಗ್ಗೆ ಎಲ್ಲ ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸದ್ಯಕ್ಕೆ ಸಿಎಂ ಬದಲಾವಣೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
