ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ಉದ್ದೇಶದಿಂದ, ಅವರ ಸಂಬಂಧಿ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ನೇತೃತ್ವದಲ್ಲಿ ತುಮಕೂರಿನ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ-ಹವನ ನಡೆಸಲಾಯಿತು.  ಮೃತ್ಯುಂಜಯ, ಶತ್ರುಸಂಹಾರ ಸೇರಿದಂತೆ ದಶ ಪ್ರಕಾರದ ಹೋಮ ನಡೆದವು.

ತುಮಕೂರು (ನ.29): ಕಾಂಗ್ರೆಸ್ ಟ್ರಬಲ್ ಶೂಟರ್ ಹಾಗೂ ಪ್ರಮುಖ ನಾಯಕರಾದ ಹಾಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಬೇಕು ಎಂಬ ಉದ್ದೇಶದಿಂದ ಅವರ ಅಭಿಮಾನಿಗಳು ಮತ್ತು ಸಂಬಂಧಿಗಳು ರಾಜ್ಯದಾದ್ಯಂತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅದರ ಮುಂದುವರಿದ ಭಾಗವಾಗಿ, ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿರುವ ಸುಪ್ರಸಿದ್ಧ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ಅದ್ದೂರಿ ದಶ ಪ್ರಕಾರದ ಹೋಮ-ಹವನ ಕಾರ್ಯಕ್ರಮ ನೆರವೇರಿತು.

ಡಿಕೆಶಿ ಸಿಎಂ ಆಗಲೆಂದು ವಿಶೇಷ ಪೂಜೆ, ಹೋಮ:

ಈ ಧಾರ್ಮಿಕ ಕಾರ್ಯವನ್ನು ಡಿಕೆ ಶಿವಕುಮಾರ್ ಅವರ ಸಂಬಂಧಿ ಹಾಗೂ ಕುಣಿಗಲ್ ಶಾಸಕರಾದ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಸಿಎಂ ಸ್ಥಾನಕ್ಕೆ ಅವರ ಹೆಸರು ಅಂತಿಮವಾಗಲೆಂದು ಹಾರೈಸಿ, ಮೃತ್ಯುಂಜಯ, ಶತ್ರುಸಂಹಾರ, ರುದ್ರ, ಸಿದ್ಧಲಿಂಗೇಶ್ವರ, ನವಗ್ರಹ ಸೇರಿದಂತೆ ಒಟ್ಟು ಹತ್ತು ಪ್ರಕಾರದ ಹೋಮಗಳನ್ನು ಭಕ್ತಿಯಿಂದ ನಡೆಸಲಾಯಿತು.

ದೇವಸ್ಥಾನದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂತ್ರಘೋಷಗಳೊಂದಿಗೆ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ದೊರಕಲಿ ಎಂದು ಉಚ್ಛಾರಣೆ ಮಾಡಲಾಯಿತು. ಅಲ್ಲದೆ, ಸಿದ್ಧಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ 1001 ತೆಂಗಿನಕಾಯಿಗಳನ್ನು ಒಡೆದು ಸಮರ್ಪಿಸಲಾಯಿತು.

ಶಕ್ತಿ ದೇವತೆಗಳ ಮೊರೆ ಹೋದ ಅಭಿಮಾನಿಗಳು:

ಶಾಸಕ ಡಾ. ರಂಗನಾಥ್ ಅವರು ಸ್ವತಃ ಈ ಪೂಜೆಯಲ್ಲಿ ಪಾಲ್ಗೊಂಡರು. ದೇವಸ್ಥಾನಕ್ಕೆ ಆಗಮಿಸಿದ ಅವರಿಗೆ ಬೆಂಬಲಿಗರು ಪೂರ್ಣಕುಂಭ ಸ್ವಾಗತ, ಪಂಚವಾದ್ಯ, ಮತ್ತು ಪಟಾಕಿ ಸಿಡಿಸುವ ಮೂಲಕ ಅದ್ದೂರಿ ಗೌರವ ಸೂಚಿಸಿದರು. ಡಿಕೆ ಶಿವಕುಮಾರ್, ಡಿಕೆ ಸುರೇಶ್ ಹಾಗೂ ಶಾಸಕ ಡಾ. ರಂಗನಾಥ್ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಶಕ್ತಿ ಹಾಗೂ ಬಲವರ್ಧನೆಗಾಗಿ ನಿರಂತರವಾಗಿ ಶಕ್ತಿ ದೇವತೆಗಳ ಮೊರೆ ಹೋಗುತ್ತಿದ್ದು, ಹೋಮ ಹವನದ ಮುಖಾಂತರ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗುವಂತೆ ಅಭಿಮಾನಿಗಳು ಶಕ್ತಿ ದೇವತೆಗಳ ಮೊರೆ ಹೋಗಿದ್ದಾರೆ.