ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಧಿಕಾರ ಹಂಚಿಕೆ ಒಪ್ಪಂದದಂತೆ ಸಿಎಂ ಪಟ್ಟಕ್ಕಾಗಿ ಈ ಭೇಟಿ ನಡೆಯುತ್ತಿದೆ ಎಂಬ ಚರ್ಚೆಗಳ ನಡುವೆಯೇ, ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸಲು ಹೋಗುತ್ತಿರುವುದಾಗಿ ಡಿಕೆಶಿ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಊಹಿಸದಂತಹ ಬೆಳೆವಣಿಗೆಗಳು ನಡೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಒಪ್ಪಂದಂತೆ ಡಿಕೆ ಶಿವಕುಮಾರ್ ಗೆ ಸಿಎಂ ಪಟ್ಟ ಸಿಗಲೇಬೇಕೆಂಬ ಹಠ ಎದ್ದು ಕಾಣುತ್ತಿದೆ. ಆದರೆ ಅದಕ್ಕಾಗಿ ತೆರೆಮರೆಯ ಕಸರತ್ತು ನಡೆಯುತ್ತಿದೆ. ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರಯಾಣ ಬೆಳೆಸುವುದು ಸ್ಪಷ್ಟವಾಗಿದೆ. ಇಂದು ಸಂಜೆ 7 ಗಂಟೆಗೆ ಡಿಕೆಶಿ ದೆಹಲಿ ವಿಮಾನ ಹತ್ತಲಿದ್ದಾರೆ. ಇದರ ನಡುವೆ ಈಗಾಗಲೇ ಡಿಕೆ ಸುರೇಶ್ ಸಹೋದರನ ಪರ ಅಖಾಡಕ್ಕೆ ಇಳಿಯಲು ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 2:45 ರ ವಿಮಾನದಲ್ಲಿ ದೆಹಲಿ ಕಡೆಗೆ ಪ್ರಯಾಣ ಬೆಳೆಸಿದ್ದು, ನಡೆದಿದೆ ಎನ್ನಲಾದ ಅಧಿಕಾರ ಹಂಚಿಕೆ ಮಾತುಕತೆ ವೇಳೆ ಡಿಕೆ ಸುರೇಶ್ ಹಾಜರಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಡಿಕೆ ಸುರೇಶ್ ದೆಹಲಿ ಭೇಟಿ ಮಹತ್ವ ಪಡೆದಿದೆ.
ಅಖಾಡಕ್ಕಿಳಿದ ಡಿಕೆ ಬ್ರದರ್ಸ್
ಇನ್ನು ಡಿಸಿಎಂ ಡಿಕೆಶಿವಕುಮಾರ್ ಕೂಡ ದೆಹಲಿ ಪ್ರಯಾಣ ಬೆಳೆಸುತ್ತಿರುವುದು ಖಚಿತವಾಗಿದೆ. ಸಹೋದರ ಡಿಕೆ ಸುರೇಶ್ ಬೆನ್ನಲ್ಲೇ ಇಂದು ಸಂಜೆಯೇ ದೆಹಲಿಗೆ ಹಾರಲಿದ್ದು, ಸಂಜೆ 7:30ರ ಏರ್ ಇಂಡಿಯ ವಿಮಾನದ ಟಿಕೆಟ್ ಬುಕ್ ಮಾಡಿರುವ ಡಿಸಿಎಂ ಡಿಕೆಶಿ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಪವರ್ ಶೇರಿಂಗ್ ಪೊಲಿಟಿಕ್ಸ್ ಕ್ಲೈಮ್ಯಾಕ್ಸ್ ಹಂತ ತಲುಪಿದೆಯಾ ಎಂಬ ಪ್ರಶ್ನೆ ಎದ್ದಿದೆ. ಯಾಕೆಂದರೆ ಹೈಕಮಾಂಡ್ ನಾಯಕರು ದೆಹಲಿಯಲ್ಲೇ ಇದ್ದು, ಡಿಸಿಎಂ ಡಿಕೆಶಿ ಇಂದೇ ಭೇಟಿಯಾಗುವ ಸಾಧ್ಯತೆ ಇದೆ. ಆದರೆ ಇದು ಹೈಕಮಾಂಡ್ ಬುಲಾವ್ ಮೇರೆಗೆ ತೆರಳುತ್ತಿರೋದಲ್ಲ. ಇವರೇ ಸ್ವಯಂಪ್ರೇರಿತವಾಗಿ ದೆಹಲಿಗೆ ಹೋಗ್ತಿರೋದು ಎಂದು ಹೇಳಲಾಗುತ್ತಿದೆ.ಇದಕ್ಕೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಆಪ್ತ ಶಾಸಕರ ಜೊತೆಗೆ ಮೀಟಿಂಗ್ ನಡೆಸಿದ್ದಾರೆ. ಕದಲೂರು ಉದಯ್, MLC ರವಿ, ಶಿವಗಂಗಾ ಬಸವರಾಜ್, ಶಾಂತನಗೌಡ, ಶಾಸಕ ದೇವೇಂದ್ರಪ್ಪ, ನೆಲಮಂಗಲ MLA ಶ್ರೀನಿವಾಸ್ ಭಾಗಿಯಾಗಿದ್ದರು.
ದೆಹಲಿಗೆ ಹೋಗ್ತೇನೆ ಎಂದ ಡಿಸಿಎಂ
ಇದಕ್ಕೂ ಮುನ್ನ ಮಾತನಾಡಿದ್ದ ಡಿಸಿಎಂ ಡಿಕೆಶಿ ದೆಹಲಿಯಲ್ಲಿ ತುಂಬಾ ಕೆಲಸ ಇದೆ ಹೀಗಾಗಿ ನಾನು ಹೋಗುತ್ತೇನೆ. ಸದ್ಯದಲ್ಲೇ ಮೇಕೆದಾಟು, ಕೃಷ್ಣ ಮೇಲ್ದಂಡೆ ಯೋಜನೆಯ ವಿಚಾರವಾಗಿ ಚರ್ಚೆ ಮಾಡಲು ನಾನು ಸಿಎಂ ಹೋಗುತ್ತೇವೆ. ದೆಹಲಿ ನಮ್ಮ ದೇವಸ್ಥಾನ. ನಾನು ಖಂಡಿತ ದೆಹಲಿಗೆ ಹೋಗುತ್ತೇನೆ. ಪಾರ್ಟಿ ಲೀಡರ್ಸ್ ಕರೆದಾಗ ಖಂಡಿತ ನಾನು ಹೋಗುತ್ತೇನೆ. ನಾನು ಸಿಎಂ ದೆಹಲಿಗೆ ಹೋಗುತ್ತೇವೆ. ದೆಹಲಿ ಭೇಟಿ ಯಾವಾಗ ಬೇಕೋ ಆಗ ಆಗುತ್ತೆ. ನಾನು ಯಾವುದಕ್ಕೂ ತರಾತುರಿಯಲ್ಲಿಲ್ಲ ಎಂದಿದ್ದರು
ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ನನಗೆ ದೆಹಲಿಯಲ್ಲಿ ಸಾಕಷ್ಟು ಕೆಲಸ ಇದೆ. ಪಾರ್ಲಿಮೆಂಟ್ ಬರ್ತಿದೆ. ನಾನು ಎಲ್ಲ ಪಾರ್ಲಿಮೆಂಟ್ ಮೆಂಬರ್ಸ್ ನ್ನು ಭೇಟಿಯಾಗಬೇಕು. ನಮ್ಮ ಪ್ರೊಜೆಕ್ಟ್ , ಆಲಮಟ್ಟಿ , ಮೇಕೆದಾಟು ವಿಚಾರವಾಗಿ ಮಾತನಾಡಬೇಕು. ಎಲ್ಲ ಪಾರ್ಟಿಯವರನ್ನು ಕರೆದು ಮಾತನಾಡಬೇಕು. ನಾನು ಸಿಎಂ ಮಾತನಾಡಿದ್ದೇವೆ ಹೋಗಿ ಮಾತನಾಡುತ್ತೇವೆ ಎಂದರು.
ಹೈಕಮಾಂಡ್ ಬುಲಾವ್ ವಿಚಾರವಾಗಿ ಮಾತನಾಡಿ, ಖಂಡಿತ ನಾನು ದೆಹಲಿಗೆ ಹೋಗುತ್ತೇನೆ. ದೆಹಲಿ ನಮ್ಮ ದೇವಸ್ಥಾನ. ದೆಹಲಿ ಇಲ್ಲದೆ ಇದ್ರೆ ಯಾರು ಏನು ಮಾಡೋಕೆ ಸಾಧ್ಯವಿಲ್ಲ. ಕಾಂಗ್ರೆಸ್ ಪಾರ್ಟಿಗೆ ತನ್ನದೇ ಇತಿಹಾಸವಿದೆ. ದೆಹಲಿ ಯಾವಾಗಲೂ ನಮಗೆ ಗೈಡ್ ಮಾಡುತ್ತೆ. ನಾವು ಇಲ್ಲಿ ಅಧಿಕಾರ ನಡೆಸುತ್ತಿದ್ದೇವೆ. ಕಾಂಗ್ರೆಸ್ ಪಾರ್ಟಿಯ ನಿಯಮ ಸಂವಿಧಾನದ ಪ್ರಕಾರ ನಾವು ಕೆಲಸ ಮಾಡಬೇಕು. ಪಾರ್ಟಿ ಲೀಡರ್ಸ್ ಯಾವಾಗ ದೆಹಲಿಗೆ ಕರೆಯುತ್ತಾರೆ ಆಗ ಖಂಡಿತ ದೆಹಲಿಗೆ ಹೋಗುತ್ತೇವೆ. ನಾನು ಮತ್ತು ಸಿಎಂ ದೆಹಲಿಗೆ ಹೋಗುತ್ತೇವೆ ಎಂದು ಒತ್ತಿ ಹೇಳಿದರು.


