ಧಾರವಾಡ ಜಿಲ್ಲೆಯ ಶಿಥಿಲ ಶಾಲಾ ಕಟ್ಟಡಗಳ ಬಗ್ಗೆ ಮಾಹಿತಿ ನೀಡದ ಡಿಡಿಪಿಐ ವಿರುದ್ಧ ಜಿಲ್ಲಾಡಳಿತ ಮತ್ತು ಸಚಿವ ಸಂತೋಷ್ ಲಾಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಧಾರವಾಡ (ಜೂ.17): ಧಾರವಾಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಶಾಲೆಗಳಿಗೆ ಉಂಟಾದ ಹಾನಿಯ ಬಗ್ಗೆ ಸೂಕ್ತ ಮಾಹಿತಿ ನೀಡದಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಎಸ್. ಎಸ್. ಕೆಳದಿಮಠ ವಿರುದ್ಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಡಿಡಿಪಿಐಗೆ ಎಚ್ಚರಿಕೆ ನೀಡಿದೆ.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ನಾಳೆ ಸೋರುವ ಶಾಲೆಗಳಲ್ಲಿ ಮಕ್ಕಳನ್ನು ಕೂರಿಸಿದ್ದೇ ಆದರೆ ಯಾವುದೇ ಅನಾಹುತ ಸಂಭವಿಸಿದರೆ, ಇದಕ್ಕೆ ಡಿಡಿಪಿಐ ಕೆಳದಿಮಠ ಅವರೇ ನೇರ ಹೊಣೆಗಾರರಾಗಿರುತ್ತಾರೆ. ಗೋಡೆ ಕುಸಿದು ಮಕ್ಕಳಿಗೆ ಏನಾದರೂ ಆಗಿ, ದುರಂತ ಸಂಭವಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಇದರಿಂದ ಎ1 ಆರೋಪಿಯಾಗಿ ಡಿಡಿಪಿಐ ಅವರೇ ಗುರುತಿಸಲ್ಪಡುತ್ತಾರೆ. ಈ ವಿಷಯವನ್ನು ತೀವ್ರವಾಗಿ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದರು.

ಶಿಥಿಲಾವಸ್ಥೆಯಲ್ಲಿರುವ ಶಾಲೆಗಳಿಗೆ ಡಿಡಿಪಿಐ ಕೆಳದಿಮಠ ಅವರು ಸ್ವತಃ ಭೇಟಿ ನೀಡಿ, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ತಾಕೀತು ಮಾಡಿದೆ. 'ಕೇವಲ ಶಾಲೆಗಳ ಶಿಥಿಲಾವಸ್ಥೆಯ ಬಗ್ಗೆ ಮಾಹಿತಿ ನೀಡಿ ಸುಮ್ಮನೆ ಕುಳಿತಿದ್ದೀರಿ. ಆದರೆ ಈ ಶಾಲೆಗಳ ದುರಸ್ತಿ ಅಗತ್ಯವಿರುವ ಅನುದಾನಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅನುದಾನ ಕೇಳದಿರುವುದು ಗಂಭೀರ ಲೋಪವಾಗಿದೆ ಎಂದು ಸಭೆಯೊಂದಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಡಿಡಿಪಿಐ ವಿರುದ್ಧ ಕಿಡಿಕಾರಿದರು.

ಸಚಿವ ಸಂತೋಷ್ ಲಾಡ್ ಕೂಡ ಈ ವಿಷಯದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಶಾಲೆಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತದಿಂದ ಈ ವಿಷಯದ ಬಗ್ಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸಭೆ ಕರೆಯಲಾಗಿದ್ದು, ಶಾಲೆಗಳ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.