ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲು ನಿರ್ಧರಿಸಿದೆ. ಮೀಸಲಾತಿ ಗೊಂದಲವನ್ನು ತಪ್ಪಿಸಲು ಸದ್ಯಕ್ಕೆ 50% ಮೀಸಲಾತಿ ಮಿತಿಯಲ್ಲೇ ನೇಮಕಾತಿ ನಡೆಸಲು ಸಂಪುಟ ತೀರ್ಮಾನಿಸಿದ್ದು, ಇದು ಎಸ್‌ಸಿ ಒಳ ಮೀಸಲಾತಿ ಹಂಚಿಕೆ ಕುರಿತು ಸಚಿವರಲ್ಲೇ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಫೆ.26): ರಾಜ್ಯದಲ್ಲಿ ಸರ್ಕಾರಿ ಕೆಲಸಕ್ಕಾಗಿ ಕಾದು ಕುಳಿತಿರುವ ಲಕ್ಷಾಂತರ ಯುವಜನತೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದೊಡ್ಡ ಸಿಹಿ ಸುದ್ದಿಯೊಂದನ್ನು ನೀಡಿದೆ. ಕಳೆದ ಹಲವು ತಿಂಗಳಿಂದ ಮೀಸಲಾತಿ ಗೊಂದಲಗಳಿಂದಾಗಿ ನೆನೆಗುದಿಗೆ ಬಿದ್ದಿದ್ದ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಒಟ್ಟು 56,432 ವಿವಿಧ ಹುದ್ದೆಗಳ ನೇಮಕಾತಿಗೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಲಿದೆ.

50% ಮೀಸಲಾತಿ ಅಡಿಯಲ್ಲಿ ನೇಮಕಾತಿ:

ಇಂದಿನ ಸಚಿವ ಸಂಪುಟ ಸಭೆಯಲ್ಲಿ ನೇಮಕಾತಿ ವಿಳಂಬದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಮೀಸಲಾತಿ ಪ್ರಮಾಣವನ್ನು 56% ಗೆ ಏರಿಸುವ ಪ್ರಸ್ತಾವನೆ ಇದ್ದರೂ, ಅದು ಕಾನೂನು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಆದ್ದರಿಂದ, ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡಬಾರದು ಎಂಬ ಉದ್ದೇಶದಿಂದ ಸದ್ಯಕ್ಕೆ 50% ಮೀಸಲಾತಿ ಮಿತಿಯಲ್ಲೇ ನೇಮಕಾತಿ ನಡೆಸಲು ಸಂಪುಟ ನಿರ್ಧರಿಸಿದೆ. ಈ ಮೂಲಕ ಹಲವು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಎದುರಾಗಿದ್ದ ಅಡೆತಡೆ ನಿವಾರಣೆಯಾದಂತಾಗಿದೆ.

ಒಳ ಮೀಸಲಾತಿ ಮತ್ತು ಎಸ್‌ಸಿ ಕೋಟಾ:

ಸಂಪುಟದ ಈ ತೀರ್ಮಾನದಿಂದ ಒಳ ಮೀಸಲಾತಿ ಜಾರಿಯಲ್ಲಿ ಸಣ್ಣ ಬದಲಾವಣೆಯಾಗುವ ಸಾಧ್ಯತೆಯಿದೆ. ಪರಿಶಿಷ್ಟ ಜಾತಿಯ (SC) ಮೀಸಲಾತಿಯನ್ನು 17% ಕ್ಕೆ ಏರಿಸಲಾಗಿದ್ದರೂ, ಒಟ್ಟು ಮೀಸಲಾತಿಯನ್ನು 50% ಗೆ ಸೀಮಿತಗೊಳಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಪ್ರಸ್ತುತ ಹೊರಡಿಸಲಿರುವ ಅಧಿಸೂಚನೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಹಳೆಯ 15% ಮೀಸಲಾತಿ ಆಧಾರದ ಮೇಲೆ ಒಳ ಮೀಸಲಾತಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. 17% ಮೀಸಲಾತಿ ಅನ್ವಯಿಸಿದರೆ ಒಟ್ಟು ಮಿತಿ 50% ಮೀರುವುದರಿಂದ ಈ ಕ್ರಮ ಅನಿವಾರ್ಯ ಎಂದು ಸರ್ಕಾರ ಭಾವಿಸಿದೆ.

ಎಸ್ಸಿ ಸಮುದಾಯದ ಸಚಿವರಿಂದ ವಿರೋಧ:

ಆದರೆ, ಈ ಕ್ರಮಕ್ಕೆ ಎಸ್ಸಿ ಸಮುದಾಯದ ಸಚಿವರಾದ ಕೆ‌ಎಚ್ ಮುನಿಯಪ್ಪ, ಹೆಚ್.ಸಿ. ಮಹಾದೇವಪ್ಪ ಹಾಗೂ ಡಾ.ಜಿ. ಪರಮೇಶ್ವರ್ ವಿರೋಧ ವ್ಯಕ್ತಪಡಿಸಿ ಏರು ಧ್ವನಿಯಲ್ಲಿ ಜಟಾಪಟಿ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಕುರಿತು ಏರುಧ್ವನಿಯಲ್ಲಿ ಚರ್ಚೆ ನಡೆಯುತ್ತಿದ್ದು, ಶೇ.50 ಮೀಸಲಾತಿ ಅಡಿಯಲ್ಲೇ ನೇಮಕಾತಿ ಮಾಡೋದಾದರೆ, ಅದರಲ್ಲೇ ಒಳ ಮೀಸಲಾತಿ ಕೊಡಿ ಎಂದು ಸಚಿವ ಸಂಪುಟ ಸಭೆಯಲ್ಲಿ ಮುನಿಯಪ್ಪ ಪಟ್ಟು ಹಿಡಿಸಿದ್ದಾರೆ. ಹೀಗಾಗಿ, ಪುನಃ ಚರ್ಚೆ ಮಾಡೋಣ ಎನ್ನುತ್ತಿರುವ ಸಚಿವ ಪರಮೇಶ್ವರ್ ಕೂಡ ಸಾಥ್ ಕೊಟ್ಟಿದ್ದಾರೆ

ರಾಜ್ಯಪಾಲರ ಅಂಕಿತ:

ಈ ಬೆಳವಣಿಗೆಯ ನಡುವೆಯೇ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ. ಇತ್ತೀಚೆಗಷ್ಟೇ ಸಚಿವರ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ, ಒಳ ಮೀಸಲಾತಿ ಗೊಂದಲದಿಂದ ನೇಮಕಾತಿ ಪ್ರಕ್ರಿಯೆ ಕುಂಠಿತವಾಗುತ್ತಿರುವ ಬಗ್ಗೆ ವಿವರಿಸಿತ್ತು. ಮಸೂದೆಗೆ ಅಂಕಿತ ಹಾಕುವ ಮೂಲಕ ರಾಜ್ಯಪಾಲರು ಸರ್ಕಾರಕ್ಕೆ ಸಾಂವಿಧಾನಿಕ ಬೆಂಬಲ ನೀಡಿದ್ದಾರೆ.

ಆರ್ಥಿಕ ಇಲಾಖೆಯ ಒಪ್ಪಿಗೆ:

56,432 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯು ಈಗಾಗಲೇ ಹಸಿರು ನಿಶಾನೆ ನೀಡಿದೆ. ಶಿಕ್ಷಣ, ಆರೋಗ್ಯ, ಪೊಲೀಸ್ ಮತ್ತು ಕಂದಾಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ. ಮೀಸಲಾತಿ ಗೊಂದಲದಿಂದಾಗಿ ವಯೋಮಿತಿ ಮೀರುತ್ತಿದ್ದ ಅಭ್ಯರ್ಥಿಗಳಿಗೆ ಸರ್ಕಾರದ ಈ ನಡೆ ಹೊಸ ಭರವಸೆ ನೀಡಿದೆ.