ಕಳೆದ ಆರು ವರ್ಷಗಳಲ್ಲಿ ಲೋಕಾಯುಕ್ತ ಪೊಲೀಸರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ₹2,357.92 ಕೋಟಿ ಮೊತ್ತದ ಭ್ರಷ್ಟಾಚಾರವನ್ನು ಪತ್ತೆಹಚ್ಚಿದ್ದಾರೆ.  ನಾಲ್ವರು ಐಎಎಸ್ ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ಧ ತನಿಖೆಗೆ ಲೋಕಾಯುಕ್ತರು ಸರ್ಕಾರದ ಅನುಮತಿ ಕೋರಿದ್ದಾರೆ. 

  •  4 ಐಎಎಸ್‌ಗಳ ತನಿಖೆಗೆ ಅನುಮತಿ ಕೇಳಿದ್ದ ಲೋಕಾಯುಕ್ತ
  •  ಪದೇ ಪದೇ ನೆನಪು ಮಾಡಿದರೂ ಸರ್ಕಾರದ ಅನುಮತಿ ಇಲ್ಲ, ವಿಪರ್ಯಾಸ

--

ಗಿರೀಶ್ ಮಾದೇನಹಳ್ಳಿ 

ಬೆಂಗಳೂರು (ಜೂ.10): ಕಳೆದ ಆರು ವರ್ಷಗಳಲ್ಲಿ ಕರುನಾಡಿನ ‘ಸರ್ಕಾರಿ ಬಾಬು’ಗಳ ಭ್ರಷ್ಟಾಚಾರದ ಗಣಿ ಶೋಧಿಸಿ 2,357.92 ಕೋಟಿ ರುಪಾಯಿ ಮೊತ್ತದ ಹಗರಣವನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದು, ಕಂದಾಯ ಇಲಾಖೆಯೊಂದರಲ್ಲೇ ಪ್ರತ್ಯೇಕವಾಗಿ ಸುಮಾರು 1,500 ಕೋಟಿ ಮೊತ್ತದ ಅಕ್ರಮಗಳು ನಡೆದಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಅಕ್ರಮದಲ್ಲಿ ಪಾತ್ರ ವಹಿಸಿರುವ ಭ್ರಷ್ಟ ಅಧಿಕಾರಿಗಳ ಬೇಟೆಗೆ ಸಿದ್ಧವಾಗಿರುವ ಪೊಲೀಸರು, ಕಳಂಕ ಹೊತ್ತಿರುವ ನಾಲ್ವರು ಐಎಎಸ್ ಅಧಿಕಾರಿಗಳು ಸೇರಿ ಇತರ ಅಧಿಕಾರಿಗಳ ವಿರುದ್ಧ ತನಿಖೆಗೆ ಸರ್ಕಾರದ ಪೂರ್ವಾನುಮತಿ ಕೋರಿದ್ದಾರೆ. ಆದರೆ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಪದೇ ಪದೆ ‘ನೆನಪಿನೋಲೆ’ ಕಳುಹಿಸಿದರೂ ತನಿಖೆಗೆ ಹಸಿರು ನಿಶಾನೆ ತೋರಿಸದೆ ಸಕ್ಷಮ ಪ್ರಾಧಿಕಾರದ ಕಡತಗಳಲ್ಲೇ ಪ್ರಾಸಿಕ್ಯೂಷನ್ ಕೋರಿಕೆಯ ವರದಿ ಧೂಳು ಹಿಡಿಯುತ್ತಿದೆ ಎನ್ನಲಾಗಿದೆ.

2020-2026 ವರೆಗೆ ಕಂದಾಯ, ನಗರಾಭಿವೃದ್ಧಿ, ಮುದ್ರಾಂಕ ಮತ್ತು ನೋಂದಣಿ, ಲೋಕೋಪಯೋಗಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿ 5 ಇಲಾಖೆಗಳಲ್ಲಿ ಲೋಕಾಯುಕ್ತ ಪೊಲೀಸರು ಅಕ್ರಮ ಪತ್ತೆ ಹಚ್ಚಿದ್ದಾರೆ. ರಹಸ್ಯವಾಗಿ ಕಾರ್ಯಾಚರಣೆ ನಡೆಸಿ ಪುರಾವೆ ಸಂಗ್ರಹಿಸಿರುವ ಪೊಲೀಸರು, ಭ್ರಷ್ಟಾಚಾರದ ಕುರಿತು ಅಧಿಕೃತವಾಗಿ ಆರೋಪಿತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಗೆ ಆಯಾ ಇಲಾಖೆಗಳಿಗೆ ಅನುಮತಿ ಕೋರಿದ್ದಾರೆ.

ಸರ್ಕಾರದ ಅನುಮತಿ ಯಾಕೆ?:

ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿ-ಸಿಬ್ಬಂದಿ ಅಥವಾ ಚುನಾಯಿತ ಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್‌ 17 (ಎ) ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರಿಗೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯ. ಅಧಿಕಾರ ದುರ್ಬಳಕೆ ಮಾಡಿ ಸರ್ಕಾರಕ್ಕೆ ಆರ್ಥಿಕನಷ್ಟ ಉಂಟು ಮಾಡಿದ್ದಲ್ಲದೆ, ಆರೋಪಿ ಸ್ವಂತ ಲಾಭ ಮಾಡಿಕೊಂಡಿರುವುದಕ್ಕೆ ಸೂಕ್ತ ಪುರಾವೆ ಒದಗಿಸಬೇಕಾಗುತ್ತದೆ. ಈ ವರದಿ ಆಧರಿಸಿ ಆರೋಪಿತರ ವಿರುದ್ಧ ಸಕ್ಷಮ ಪ್ರಾಧಿಕಾರವು ಪ್ರಾಸಿಕ್ಯೂಷನ್ ಅನುಮತಿ ನೀಡಲಿದೆ. ಅಂತೆಯೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಸಂಬಂಧಪಟ್ಟವರ ಮುಂದೆ ಲೋಕಾಯುಕ್ತ ಪೊಲೀಸರು ತನಿಖೆಗೆ ಅನುಮತಿ ಕೋರಿದ್ದಾರೆ.

ಇಲಾಖೆ ಅಕ್ರಮ ಮೊತ್ತ 

  • ಕಂದಾಯ 1,559 ಕೋಟಿ ರು
  • ನಗರಾಭಿವೃದ್ಧಿ 332 ಕೋಟಿ ರು
  • ಪಿಡಬ್ಲ್ಯುಡಿ 111 ಕೋಟಿ ರು
  • ಮುಂದ್ರಾಕ ಮತ್ತು ನೋಂದಣಿ 35.5

ವರ್ಷ ಇಲಾಖೆ ತನಿಖೆ ಕೋರಿದ ದಿನ ಹಗರಣದ ಮೊತ್ತ

  • 2020 ನಗರಾಭಿವೃದ್ಧಿ 23-04-2021 ಮತ್ತು 26-09-25 300 ಕೋಟಿ ರು
  • 2021 ಕಂದಾಯ 09-02022 ಮತ್ತು 26-08-25, 2801-26 115 ಕೋಟಿ ರು
  • 2021 ಕಂದಾಯ 18-09-21 ಮತ್ತು 21-4-22 800-900 ಕೋಟಿ
  • 2022 ನಗರಾಭಿವೃದ್ಧಿ 12-04-22 ಮತ್ತು 17-10-25 ---
  • 2023 ಡಿಪಿಎಆರ್‌ (5 ಇಲಾಖೆ) 7-09-23, 11-09-24, 30-10-25, 28-011-25 15 ಕೋಟಿ ರು
  • 2023 ಡಿಪಿಎಆರ್‌, ಕಂದಾಯ 28-04-23, 24ರಲ್ಲಿ 3 ಬಾರಿ 600 ಕೋಟಿ ರು
  • 2025 ಐಜಿ ಮುಂದ್ರಾಕ ಮತ್ತು ನೋಂದಣಿ 15-11025 9 ಕೋಟಿ ರು
  • 2025 ನಗರಾಭಿವೃದ್ಧಿ 11-09-25 7 ಕೋಟಿ ರು
  • 2025 ಐಜಿ ಮುಂದ್ರಾಕ ಮತ್ತು ನೋಂದಣಿ 29-11-25 1.56 ಕೋಟಿ
  • 2025 ಮುಖ್ಯಕಾರ್ಯದರ್ಶಿ ಸರ್ಕಾರ 28-011-25 300 ಕೋಟಿ ರು
  • 2025 ಐಜಿ ಸ್ಟಾಂಪ್ ಮತ್ತು ನೋಂದಣಿ 28-11-25 20 ಕೋಟಿ ರು
  • 2025 ಸರ್ಕಾರದ ಮುಖ್ಯಕಾರ್ಯದರ್ಶಿ 28-08-25 12.91 ಕೋಟಿ ರು
  • 2025 ಮುಖ್ಯ ಅಭಿಯಂತರ ಕಚೇರಿ 22-12-25 111 ಕೋಟಿ ರು
  • 2025 ಐಜಿ ಮುದ್ರಾಂಕ ಹಾಗೂ ನೋಂದಣಿ 10-12-25 5.07 ಕೋಟಿ ರು
  • 2025 ಬಿಬಿಎಂಪಿ 7-08-25 1.22 ಕೋಟಿ ರು
  • 2025 ಪ್ರಧಾನ ಕಾರ್ಯದರ್ಶಿ ಕಂದಾಯ 28-0125 44 ಕೋಟಿ
  • 2025 ಮುಖ್ಯಕಾರ್ಯದರ್ಶಿ ಸರ್ಕಾರ 28-8-25 1.31 ಕೋಟಿ ರು
  • 2025 ಮುಖ್ಯ ಕಾರ್ಯದರ್ಶಿ ಸರ್ಕಾರ 28-08-25 5.89 ಕೋಟಿ ರು
  • 2026 ನಗರಾಭಿವೃದ್ಧಿ 25-02-26 10 ಕೋಟಿ ರು.

20 ಎಕ್ರೆ ಗೋಮಾಳ ಗುಳುಂ

ಬೆಂಗಳೂರು ನಗರ ಜಿಲ್ಲೆಯಲ್ಲಿ 20 ಎಕರೆ ಸರ್ಕಾರಿ ಗೋಮಾಳವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಪರಭಾರೆ ಮಾಡಿದ್ದಾರೆ. ಈ ಜಮೀನು ಸುಮಾರು ಕೋಟ್ಯಂತರ ಬೆಲೆ ಬಾಳುತ್ತದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನಪಡಿಸಿಕೊಂಡ ಜಮೀನು ಸಂಬಂಧ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಅಧಿಕಾರಿಗಳು ಕೋಟಿ ಕೋಟಿ ಹಣ ಜೇಬಿಗಿಳಿಸಿಕೊಂಡಿದ್ದಾರೆ ಎಂಬುದನ್ನು ಪೊಲೀಸರು ಶೋಧಿಸಿದ್ದಾರೆ ಎನ್ನಲಾಗಿದೆ.