ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಕಟ್ಟಡದ ವಿದ್ಯುತ್ ಪರಿಶೀಲನೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಉಪ ಮುಖ್ಯ ವಿದ್ಯುತ್ ನಿರೀಕ್ಷಕ ಸಿದ್ದಪ್ಪ, 20 ಸಾವಿರ ರೂಪಾಯಿ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು (ಜೂ.08): ಬೆಂಗಳೂರಿನಲ್ಲಿ ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಬೇಟೆ ಮುಂದುವರಿದಿದೆ. ಬಾಕಿ ಇರುವ ಅಪಾರ್ಟ್ಮೆಂಟ್ ಕಟ್ಟಡವೊಂದರ ವಿದ್ಯುತ್ ಆವರ್ತಕ ಪರಿಶೀಲನೆ (Periodic Inspection) ನಡೆಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬೆಂಗಳೂರು ದಕ್ಷಿಣ ವಿಭಾಗದ ಉಪ ಮುಖ್ಯ ವಿದ್ಯುತ್ ನಿರೀಕ್ಷಕ (Deputy Chief Electrical Inspector) ಸಿದ್ದಪ್ಪ ಅವರು 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ಹಿನ್ನೆಲೆ:

ಅಪಾರ್ಟ್‌ಮೆಂಟ್ ಕಟ್ಟಡದ ವಿದ್ಯುತ್ ಪರಿಶೀಲನಾ ಕಾರ್ಯಕ್ಕೆ ಸಂಬಂಧಿಸಿದಂತೆ ಸಿದ್ದಪ್ಪ ಅವರು ಲಂಚ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ಕುರಿತು ವಿದ್ಯುತ್ ಗುತ್ತಿಗೆದಾರರಾದ ರಘುರಾಜ್ ಹಾಗೂ ನಾಗರಾಜ್ ಅವರು ಲೋಕಾಯುಕ್ತ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಜಾಗರೂಕರಾದ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಕಾರ್ಯಾಚರಣೆಗೆ ಸ್ಕೆಚ್ ಹಾಕಿದ್ದರು.

ದೂರುದಾರರಿಂದ ನಿಗದಿಪಡಿಸಿದ 20,000 ರೂಪಾಯಿ ನಗದು ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ, ಸಿದ್ದಪ್ಪ ಅವರನ್ನು ರಂಗೇ ರಾಗಿ (ರೆಡ್ ಹ್ಯಾಂಡ್ ಆಗಿ) ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಭ್ರಷ್ಟ ಅಧಿಕಾರಿಯನ್ನು ಬಂಧಿಸಿರುವ ಅಧಿಕಾರಿಗಳು ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ತೀವ್ರ ವಿಚಾರಣೆಯನ್ನು ಮುಂದುವರಿಸಿದ್ದಾರೆ.