ಬೆಂಗಳೂರು-ಮಂಗಳೂರು-ಕಾರವಾರ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್‌ಗಳ ಮೂಲಕ ಓಡಿಸಲು ನೈಋತ್ಯ ರೈಲ್ವೆ ಮುಂದಾಗಿದೆ. ಘಟ್ಟ ಪ್ರದೇಶಗಳಲ್ಲಿಯೂ ಎಲೆಕ್ಟ್ರಿಕ್ ಗೂಡ್ಸ್ ಎಂಜಿನ್‌ಗಳನ್ನು ಬಳಸಲಾಗುವುದು. ಇದರಿಂದ ರೈಲ್ವೆ ಇಲಾಖೆಗೆ ಡೀಸೆಲ್ ವೆಚ್ಚದಲ್ಲಿ ಭಾರಿ ಉಳಿತಾಯವಾಗಲಿದೆ.
ಮಂಗಳೂರು (ಅ.11): ಮಂಗಳೂರು ಮಾರ್ಗವಾಗಿ ರಾಜಧಾನಿ ಬೆಂಗಳೂರು-ಮಡಗಾವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆಯು ಸಿದ್ಧತೆ ನಡೆಸುತ್ತಿರುವ ನಡುವೆಯೇ ಬೆಂಗಳೂರು-ಮಂಗಳೂರು-ಕಾರವಾರ ಮಾರ್ಗದಲ್ಲಿ ಹಾಲಿ ಡೀಸೆಲ್ ಎಂಜಿನ್ ಮೂಲಕ ಸಂಚರಿಸುತ್ತಿರುವ ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್‌ಗಳಲ್ಲಿ ಓಡಿಸುವ ಪ್ರಸ್ತಾವನೆಗೆ ನೈಋತ್ಯ ರೈಲ್ವೆ ಮುಂದಾಗಿದೆ.
ರೈಲುಗಳ ಸಂಚಾರಕ್ಕೆ ಹೆಚ್ಚುವರಿ ಶಕ್ತಿ
ಪರಿಣಾಮ ಈ ಮಾರ್ಗದ 7 ರೈಲುಗಳಿಗೆ ಶುರುವಿನಿಂದ ಕೊನೆವರೆಗೂ ಎಲೆಕ್ಟ್ರಿಕ್ ಎಂಜಿನ್‌ಗಳೇ ಸಾರಥ್ಯ ವಹಿಸಲಿವೆ. ಇದರಿಂದಾಗಿ ರೈಲ್ವೆಗೆ ಡೀಸೆಲ್ ಮೇಲಿನ ಹಣ ಭಾರಿ ಉಳಿತಾಯವಾಗಲಿದೆ. ಈ ರೈಲುಗಳಿಗೆ ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ಮಧ್ಯೆ ಹಾಲಿ 2 ಡೀಸೆಲ್ ಎಂಜಿನ್‌ಗಳನ್ನು ಬ್ಯಾಂಕರ್‌ಗಳಾಗಿ ಜೋಡಿಸಿ ಸಂಚಾರ ನಡೆಸಲಾಗುತ್ತಿದ್ದು, ಇದರ ಬದಲಿಗೆ 2 ಎಲೆಕ್ಟ್ರಿಕ್ ಗೂಡ್ಸ್ ಎಂಜಿನ್‌ಗಳನ್ನು (ಡಬ್ಲ್ಯುಎಜಿ 9ಎಚ್‌ಸಿ) ಜೋಡಿಸಲಾಗುತ್ತದೆ. ಘಟ್ಟ ಪ್ರದೇಶಗಳಲ್ಲಿ ರೈಲುಗಳ ಸಂಚಾರಕ್ಕೆ ಹೆಚ್ಚುವರಿ ಶಕ್ತಿಯ ನೆರವು ಒದಗಿಸುವ ಉದ್ದೇಶ ಈ ವ್ಯವಸ್ಥೆಯ ಹಿಂದಿದೆ.


