ವಾರಾಂತ್ಯದ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸುತ್ತಿದೆ. ಅಕ್ಟೋಬರ್ 1 ರಂದು ಬೆಂಗಳೂರಿನಿಂದ ಹೊರಟು, ಅಕ್ಟೋಬರ್ 4 ರಂದು ಮಡಗಾಂವ್‌ನಿಂದ ಹಿಂದಿರುಗಲಿದೆ.ಎಲ್ಲೆಲ್ಲಿ ನಿಲುಗಡೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಮಂಗಳೂರು (ಸೆ.29): ವಾರಾಂತ್ಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಿಸಲು, ನೈಋತ್ಯ ರೈಲ್ವೆ ಬೆಂಗಳೂರು ಕಂಟೋನ್ಮೆಂಟ್ ಮತ್ತು ಮಡಗಾಂವ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ.
ಬೆಂಗಳೂರು ಕಂಟೋನ್ಮೆಂಟ್ - ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು
ರೈಲು ಸಂಖ್ಯೆ 06597 ಬೆಂಗಳೂರು ಕಂಟೋನ್ಮೆಂಟ್ - ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅ.1ರಂದು ರಾತ್ರಿ 11.50ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು, ಮರುದಿನ ಅ.2ರಂದು ಸಂಜೆ 6.10ಕ್ಕೆ ಮಡಗಾಂವ್ ತಲುಪಲಿದೆ. ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 06598 ಮಡಗಾಂವ್ - ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅ.4ರಂದು ಬೆಳಗ್ಗೆ 8.40ಕ್ಕೆ ಮಡಗಾಂವ್‌ನಿಂದ ಹೊರಟು, ಅದೇ ದಿನ ರಾತ್ರಿ 11.55ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ವಿಶೇಷ ಎಕ್ಸ್‌ಪ್ರೆಸ್ ರೈಲು ಎಲ್ಲೆಲ್ಲಿ ನಿಲುಗಡೆ?
ಎರಡೂ ಮಾರ್ಗಗಳಲ್ಲಿ ಎಸ್ಎಮ್ವಿಟಿ ಬೆಂಗಳೂರು(SMVT Bengaluru), ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ಮತ್ತು ಕನಕೋನ ನಿಲ್ದಾಣಗಳಲ್ಲಿ ನಿಲ್ಲಲಿದೆ.


