Live Blog: ಸಿಎಂ ಸಿದ್ದರಾಮಯ್ಯಗೆ ರಿಲೀಫ್ ಸಿಕ್ಕರೂ ಆತಂಕ ದೂರವಾಗಿಲ್ಲ
ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಕೇಳಿಬಂದಿರುವ ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ವಜಾ ಮಾಡಿದೆ. ಆದರೆ ಲೋಕಾಯುಕ್ತದಲ್ಲಿ ತನಿಖೆ ಮುಂದುವರಿಯಲಿದೆ. ಇದು ಸಿಎಂ ಸಿದ್ದರಾಮಯ್ಯ ಆತಂಕಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪೋಕ್ಸೋ ಕೇಸ್‌ನಲ್ಲಿ ಹೈಕೋರ್ಟ್ ತೀರ್ಪು ನೀಡಿದ್ದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರ್‌ಬಿಐ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ರೇಪೋ ರೇಟ್ಅನ್ನು 25 ಬೇಸಿಸ್ ಪಾಯಿಂಟ್ಸ್ ಕಡಿಮೆ ಮಾಡುವ ನಿರ್ಧಾರ ಮಾಡಲಾಗಿದ್ದು, ಗೃಹಸಾಲ ಪಡೆದುಕೊಳ್ಳುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇಂದು ರಾಜ್ಯ ಹಾಗೂ ರಾಷ್ಟ್ರದಲ್ಲಿ ನಡೆಗ ಪ್ರಮುಖ ಬೆಳವಣಿಗೆಯ ಸಂಕ್ಷಿಪ್ತ ವಿವರಣೆ ಇಲ್ಲಿದೆ.
08:33 PM (IST) Feb 07
ಬೆಂಗಳೂರು: ನಡು ರಸ್ತೆಯಲ್ಲಿ ಹೊತ್ತಿ ಉರಿದ ಕಾರು; ಪ್ರಯಾಣಿಕರು ಸ್ವಲ್ಪದರಲ್ಲೇ ಪಾರು!
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ನಡುರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಟಿನ್ ಫ್ಯಾಕ್ಟರಿಯ ಕಸ್ತೂರಿನಗರ ಬ್ರಿಡ್ಜ್ ಮೇಲೆ ನಡೆದಿದೆ. ಬೆಂಕಿಯ ತೀವ್ರತೆಗೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿಗೆ ಬೆಂಕಿ ತಗುಲಿದ ಹಿನ್ನೆಲೆ ರಿಂಗ್ ರಸ್ತೆಯಲ್ಲಿ ಟಿನ್ ಫ್ಯಾಕ್ಟರಿ ಕಡೆಯಿಂದ ಹೆಬ್ಬಾಳ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ದಾವಿಸಿದ ಕೆಆರ್ ಪುರ ಸಂಚಾರ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
07:44 PM (IST) Feb 07
ಅಜ್ಜಂಪುರ ಅಂತರಘಟ್ಟೆ ಜಾತ್ರೆ ಎತ್ತಿನಗಾಡಿ ಓಡಿಸುವಾಗ ದುರಂತ, ಕೆಳಗೆ ಬಿದ್ದು ವ್ಯಕ್ತಿ ಸಾವು
ಅಜ್ಜಂಪುರ ಅಂತರಘಟ್ಟೆ ಜಾತ್ರೆಗೆ ಗಾಡಿ ಓಡಿಸುವಾಗ ನಡೆದ ದುರಂತ ನಡೆದಿದೆ. ಎತ್ತಿನಗಾಡಿ ಓಡಿಸುವಾಗ ಗಾಡಿಯಿಂದ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ. ಎತ್ತಿನಗಾಡಿ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ 35 ವರ್ಷದ ಯುವಕ ರವಿ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಅಜ್ಜಂಪುರ ತಾಲೂಕು ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.
06:51 PM (IST) Feb 07
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ನೆರವಿಗೆ ಬಂದ ಸಚಿವ ಸಂತೋಷ್ ಲಾಡ್
ಬೈಕ್ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯ ನೆರವಿಗೆ ಸಚಿವ ಸಂತೋಷ್ ಲಾಡ್ ಧಾವಿಸಿದ ಘಟನೆ ನಡೆದಿದೆ. ಮುಧೋಳ ತಾಲೂಕಿನ ಸಿಮೆಂಟ್ ಕಾರ್ಖಾನೆ ಬಳಿ ನಡೆದ ಅಪಘಾತದಲ್ಲಿ ಸತೀಶ್ ವೆಂಕಪ್ಪ ಮಾದರ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಹೆದ್ದಾರಿಯಲ್ಲಿ ಹೊರಟಿದ್ದ ಸಚಿವ ಸಂತೋಷ್ ಲಾಡ್ ಅಪಘಾತ ಗಮನಿಸಿ ತಕ್ಷಣವೇ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆ ದಾಖಲಿಸಿದ್ದಾರೆ.
06:27 PM (IST) Feb 07
ಫೆಬ್ರವರಿಯಲ್ಲಿ ಮೋದಿ ಫ್ರಾನ್ಸ್- ಅಮೆರಿಕ ಭೇಟಿ, ಟ್ರಂಪ್ ಜೊತೆ ಮಾತುಕತೆ
ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 12 ಹಾಗೂ 13 ರಂದು ಎರಡು ದಿನಗಳ ಅಮೆರಿಕ ಪ್ರವಾಸ ಮಾಡುತ್ತಿದ್ದಾರೆ. ಡೋನಾಲ್ಡ್ ಟ್ರಂಪ್ 2ನೇ ಬಾರಿಗೆ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮೋದಿ ಅಮೆರಿಕ ಪ್ರವಾಸ ಮಾಡುತ್ತಿದಾರೆ. ಈ ವೇಳೆ ಮೋದಿ, ಡೋನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಡೆಸಲಿದ್ದಾರೆ. ಫೆಬ್ರವರಿ 10 ರಂದು ಮೋದಿ ಫ್ರಾನ್ಸ್ ಪ್ರವಾಸ ಮಾಡಲಿದ್ದಾರೆ. ಅಲ್ಲಿಂದ ಅಮೆರಿಕಾಗೆ ತೆರಳಲಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಹತ್ವದ ಮಾಹಿತಿ ನೀಡಿದ್ದಾರೆ.
04:31 PM (IST) Feb 07
ಸ್ಯಾಲರಿ ಹೈಕ್ ಮರುದಿನ ಇನ್ಫೋಸಿಸ್‌ನಲ್ಲಿ ಉದ್ಯೋಗ ಕಡಿತ, ಮೈಸೂರು ಕ್ಯಾಂಪಸ್‌ನಲ್ಲಿ ಹೈಡ್ರಾಮ
ಇನ್ಫೋಸಿಸ್ ವಾರ್ಷಿಕ ವೇತನ ಹೆಚ್ಚಳ ಘೋಷಣೆ ಮಾಡಿದ ಮರುದಿನ ಮೈಸೂರು ಕ್ಯಾಂಪಸ್‌ನಲ್ಲಿ ಹೈಡ್ರಾಮ ನಡೆದಿದೆ. ಬರೋಬ್ಬರಿ 700 ನೌಕರರ ಉದ್ಯೋಗ ಕಡಿತಗೊಳಿಸಿರು ವರದಿ ಬಹಿರಂಗವಾಗಿದೆ. ಇಷ್ಟೇ ಅಲ್ಲ ವಜಾ ಮಾಡಿದ ಉದ್ಯೋಗಿಗಳ ಕಚೇರಿಯಿಂದ ಹೊರದಬ್ಬಲು ಬೌನ್ಸರ್ಸ್, ಸೆಕ್ಯೂರಿಟಿ ಗಾರ್ಡ್ ಬಳಕೆ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ.
ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ನಂತರ, ಬೆಳಗಾವಿಯಿಂದ ಕುಂಭಮೇಳಕ್ಕೆ ಹೋಗುತ್ತಿದ್ದ ವಾಹನ ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯು ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಸಂಭವಿಸಿದೆ.
ಉಜ್ಜೈನಿ ಮಹಾಕಾಲ ದರ್ಶನ ಮುಗಿಸಿ ಬರುತ್ತಿದ್ದ ಬೆಳಗಾವಿಯ ಇಬ್ಬರು ದುರ್ಮರಣ!
ಇಂದೋರ್‌ನ ಮಹೂನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ 6 ಜನರು ಸಾವನ್ನಪ್ಪಿದ್ದಾರೆ ಮತ್ತು 16 ಜನರು ಗಾಯಗೊಂಡಿದ್ದಾರೆ. ಮಿನಿಬಸ್, ಟ್ರೇಲರ್ ಟ್ರಕ್ ಮತ್ತು ಬೈಕ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಸಂಪೂರ್ಣ ಸುದ್ದಿ ಓದಿ.
Breaking: ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ; ಉಜ್ಜೈನಿ ಮಹಾಕಾಲ ದರ್ಶನ ಮುಗಿಸಿ ಬರುತ್ತಿದ್ದ ಬೆಳಗಾವಿಯ ಇಬ್ಬರು ದುರ್ಮರಣ!
ಬೆಳಗಾವಿ (ಫೆ.7). ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮಹೂ ತಾಲೂಕಿನ ಮಾನ್ಪುರ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 16 ಜನರು ಗಾಯಗೊಂಡಿದ್ದಾರೆ. ಮೋಟಾರ್ ಸೈಕಲ್, ಮಿನಿಬಸ್ ಮತ್ತು ಟ್ರೇಲರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಗಣೇಶಪುರ ನಿವಾಸಿ ಆದ ಸಾಗರ (55) ನೀತಾ (50) ಅಪಘಾತದಲ್ಲಿ ಮೃತರಾದವರು. ಟಿಟಿ ವಾಹನದಲ್ಲಿ ಎರಡು ದಿನಗಳ ಹಿಂದೆ ಪ್ರಯಾಣ ಬೆಳೆಸಿದ್ದ ಯಾತ್ರಾರ್ಥಿಗಳು.
02:32 PM (IST) Feb 07
3 ವರ್ಷದ ವಿದ್ಯುತ್ ದರ ಏರಿಕೆಗೆ ಸಿದ್ಧತೆ: ಕೆಇಆರ್‌ಸಿಯಿಂದ ಸಭೆ
ಮುಂದಿನ ಮೂರು ವರ್ಷಗಳಲ್ಲಿ ವಿದ್ಯುತ್ ದರವನ್ನು ಯುನಿಟ್‌ಗೆ 67 ಪೈಸೆಯಿಂದ 91 ಪೈಸೆಗೆ ಏರಿಕೆ ಮಾಡಲು ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿವೆ. ಈ ಹಿನ್ನೆಲೆಯಲ್ಲಿ ಕೆಇಆರ್‌ಸಿ ಫೆಬ್ರವರಿ 17 ರಿಂದ 27 ರವರೆಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಗಳನ್ನು ಆಯೋಜಿಸಿದೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಕಡಿವಾಣ ಹಾಕಲು ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ತಣ್ಣೀರೆರಚಿದ್ದಾರೆ. ಹಲವು ಸ್ಪಷ್ಟನೆಗಳನ್ನು ಕೇಳಿ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿದ್ದಾರೆ.
Haveri: ದೇವಸ್ಥಾನದ ಮೇಲೆ ಕಳಸ ಕೂರಿಸುವಾಗ ಕೇನ್ ಬಕೆಟ್ ಕಟ್ ಆಗಿ ವ್ಯಕ್ತಿಯ ಸಾವು!
ಜಿಲ್ಲೆಯ ಗಂಗಾಪರಮೇಶ್ವರಿ ಕಳಸಾರೋಹಣ ಸಂದರ್ಭದಲ್ಲಿ ಭಾರೀ ಅವಗಢ ಸಂಭವಿಸಿದೆ. ಕಳಸಾರೋಹಣ ಸಂದರ್ಭದಲ್ಲಿ ಕ್ರೇನ್ ಬಕೇಟ್ ಕಟ್ ಆಗಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವು ಕಂಡಿದ್ದು, ಇನ್ನೋರ್ವ ವ್ಯಕ್ತಿಗೆ ಗಾಯವಾಗಿದೆ.
ಬಿಹಾರದ ಸಮಷ್ಟಿಪುರದ ಮಹಿಳೆಯೊಬ್ಬರು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಹಾಯದಿಂದ ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದ ರೈಲು ಬೋಗಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಗುರುವಾರ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಸಬ್-ಇನ್ಸ್‌ಪೆಕ್ಟರ್ ನವೀನ್ ಕುಮಾರಿ ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸಿದರು, ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಸಹ ಪ್ರಯಾಣಿಕರೊಂದಿಗೆ ಸಮನ್ವಯ ಸಾಧಿಸಿ ತಾಯಿ ಮತ್ತು ಮಗುವನ್ನು ಹೆಚ್ಚಿನ ಆರೈಕೆಗಾಗಿ ಆಸ್ಪತ್ರೆಗೆ ವರ್ಗಾಯಿಸಲು ವ್ಯವಸ್ಥೆ ಮಾಡಿದರು.
12:05 PM (IST) Feb 07
ಸಿಖ್ ವಿರೋಧಿ ಗಲಭೆ: ಸಜ್ಜನ್ ಕಮಾರ್ ತೀರ್ಪು ಮುಂದೂಡಿಕೆ
ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ವಿರುದ್ಧದ 1984 ರ ಸಿಖ್ ವಿರೋಧಿ ಗಲಭೆ ಕೊಲೆ ಪ್ರಕರಣದ ತೀರ್ಪನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಫೆಬ್ರವರಿ 12 ಕ್ಕೆ ಮುಂದೂಡಿದೆ. ಶುಕ್ರವಾರ ಆದೇಶ ಹೊರಡಿಸಬೇಕಿದ್ದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಘೋಷಣೆಯನ್ನು ಮುಂದೂಡಿದರು. ಈ ಪ್ರಕರಣವು 1984 ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಇಲ್ಲಿನ ಸರಸ್ವತಿ ವಿಹಾರ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳ ಹತ್ಯೆಗೆ ಸಂಬಂಧಿಸಿದೆ.
11:22 AM (IST) Feb 07
ಪ್ರಯಾಗ್‌ರಾಜ್‌ನಲ್ಲಿ ಮತ್ತೆ ಬೆಂಕಿ ಅವಘಡ
ಮಹಾ ಕುಂಭಮೇಳ ಕ್ಷೇತ್ರದ ಶಂಕರಾಚಾರ್ಯ ಮಾರ್ಗದಲ್ಲಿ ಅವಘಡ ಸಂಭವಿಸಿದೆ. ಸೆಕ್ಟರ್ 18 ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟೆಂಟ್ ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಬೆಂಕಿ ನಂದಿಸುವ ಕೆಲಸ ಮುಂದುವರಿದಿದೆ.
#WATCH | Prayagraj | A fire breaks out in Sector 18, Shankaracharya Marg of Maha Kumbh Mela Kshetra. Fire tenders are at the spot. More detail awaited pic.twitter.com/G4hTeXyRd9
ಮಹಾ ಕುಂಭ: ಫೆಬ್ರವರಿ 6 ರವರೆಗೆ 39.74 ಕೋಟಿ ಭಕ್ತರ ಪುಣ್ಯ ಸ್ನಾನ
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ 39.74 ಕೋಟಿಗೂ ಹೆಚ್ಚು ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಫೆ.6ರವರೆಗಿನ ಮಾಹಿತಿಯನ್ನು ಉತ್ತರ ಪ್ರದೇಶ ಸರ್ಕಾರ ಹಂಚಿಕೊಂಡಿದೆ.
ಮುಡಾ ಕೇಸ್‌ನಲ್ಲಿ ಸಿಎಂ ಸಿದ್ಧರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಪ್ರಕರಣವನ್ನು ಸಿಬಿಐಗೆ ನೀಡಲು ನಿರಾಕರಿಸಿದೆ. ಇಡೀ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ನಡಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ಈ ಆದೇಶ ನೀಡಿದೆ.
Breaking: ಪೋಕ್ಸೋ ಕೇಸ್‌ನಲ್ಲಿ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್!
ಪೋಕ್ಸೋ ಕೇಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಈ ಕೇಸ್‌ನಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
10:22 AM (IST) Feb 07
ಪಿಎಸ್‌ಐ ಹಗರಣದಲ್ಲಿ ಸಿಗದ ಸಾಕ್ಷ್ಯ: ಬಿಜೆಪಿಗರಿಗೆ ಕ್ಲೀನ್‌ಚಿಟ್? ತನಿಖೆ ಮುಗಿಸಲು ಎಸ್‌ಐಟಿ ನಿರ್ಧಾರ?
ರಾಜ್ಯ ರಾಜಕಾರಣದಲ್ಲಿ ಭಾರೀ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಿಜೆಪಿ ನಾಯಕರ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ತನಿಖೆಗೆ ಅಂತ್ಯವಾಡಲು ವಿಶೇಷ ತನಿಖಾ ದಳ (ಎಸ್‌ಐಟಿ) ಮುಂದಾಗಿದೆ.
ಐದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಬಡ್ಡಿದರ ಇಳಿಸಿದ ಆರ್‌ಬಿಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಐದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಬಡ್ಡಿದರವನ್ನು ಇಳಿಕೆ ಮಾಡಿದೆ. ಇದರಿಂದಾಗಿ ಮನೆ ಕಟ್ಟುವವರಿಗೆ ಗುಡ್‌ನ್ಯೂಸ್ ಸಿಕ್ಕಂತಾಗಿದ್ದು, ಗೃಹ ಸಾಲದ ಬಡ್ಡಿದರ ಕಡಿಮೆಯಾಗಲಿದೆ. ರೇಪೋರೇಟ್‌ಅನ್ನು ಆರ್‌ಬಿಐ 25 ಬಿಪಿಎಸ್ ಪಾಯಿಂಟ್ಸ್ ಕಡಿತ ಮಾಡಿದ್ದು ಈಗ ಬಡ್ಡಿ ದರ 6.50% ಇಂದ 6.25%ಗೆ ಇಳಿಯಲಿದೆ.
10:05 AM (IST) Feb 07
ದೆಹಲಿಯ ಶಾಲಾ-ಕಾಲೇಜುಗಳಿಗೆ ಮತ್ತೆ ಬಾಂಬ್ ಬೆದರಿಕೆ ಕರೆ
ದೆಹಲಿ ಮತ್ತು ಎನ್ ಸಿ ಆರ್ ಪ್ರದೇಶದ ಶಾಲೆ-ಕಾಲೇಜು ಗಳಿಗೆ ಮತ್ತೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇಂದು ಬೆಳಿಗ್ಗೆ 07:42 ಕ್ಕೆ ಸೇಂಟ್ ಸ್ಟೀಫನ್ಸ್ ಕಾಲೇಜಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಬಾಂಬ್ ನಿಷ್ಕ್ರಿಯ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ ಎಂದು ದೆಹಲಿ ಪೊಲೀಸರ ಮಾಹಿತಿ ನೀಡಿದೆ. ಅದರೊಂದಿಗೆ ನೊಯ್ಡಾದ ಶಾಲೆಯೊಂದಕ್ಕೆ ಕೂಡ ಬಾಂಬ್ ಬೆದರಿಕೆ ಕರೆ ಬಂದಿದ್ದು ಪೊಲೀಸರಿಂದ ತಪಾಸಣೆ ನಡೆಯುತ್ತಿದೆ.