ಇಂದೋರ್‌ನ ಮಹೂನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ 6 ಜನರು ಸಾವನ್ನಪ್ಪಿದ್ದಾರೆ ಮತ್ತು 16 ಜನರು ಗಾಯಗೊಂಡಿದ್ದಾರೆ. ಮಿನಿಬಸ್, ಟ್ರೇಲರ್ ಟ್ರಕ್ ಮತ್ತು ಬೈಕ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಸಂಪೂರ್ಣ ಸುದ್ದಿ ಓದಿ.

ಬೆಳಗಾವಿ (ಫೆ.7). ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮಹೂ ತಾಲೂಕಿನ ಮಾನ್ಪುರ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 16 ಜನರು ಗಾಯಗೊಂಡಿದ್ದಾರೆ. ಮೋಟಾರ್ ಸೈಕಲ್, ಮಿನಿಬಸ್ ಮತ್ತು ಟ್ರೇಲರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ 6 ಸಾವು, 16 ಗಾಯ

ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಇಂದೋರ್ ಗ್ರಾಮೀಣ) ರೂಪೇಶ್ ದ್ವಿವೇದಿ ಅವರು ಈ ದುರ್ಘಟನೆಯಲ್ಲಿ ಮೋಟಾರ್ ಸೈಕಲ್ ಸವಾರರಾದ ಇಬ್ಬರು ಪುರುಷರು ಮತ್ತು ಮಿನಿಬಸ್‌ನಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇನ್ನಿಬ್ಬರು ಸರ್ಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡ 16 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಮಹಾಕಾಲ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಪ್ರಯಾಣಿಕರು

ಪೊಲೀಸರ ಪ್ರಕಾರ, ಮಿನಿಬಸ್‌ನಲ್ಲಿದ್ದ ಪ್ರಯಾಣಿಕರು ಉಜ್ಜೈನ್‌ನಲ್ಲಿರುವ ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಕರ್ನಾಟಕದ ಬೆಳಗಾವಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಮಾನ್ಪುರ ಪ್ರದೇಶದಲ್ಲಿ ಮಿನಿಬಸ್ ಒಂದು ಇಳಿಜಾರಿನಲ್ಲಿ ಟ್ರೇಲರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ದಾರಿಯಲ್ಲಿ ಹೋಗುತ್ತಿದ್ದ ಜನರು ಈ ಘಟನೆಯನ್ನು ಗಮನಿಸಿ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದರು.

ಸ್ಥಳೀಯ ಆಡಳಿತದಿಂದ ಕ್ಷಿಪ್ರ ಕಾರ್ಯಾಚರಣೆ

ಅಪಘಾತದ ಸುದ್ದಿ ತಿಳಿದ ತಕ್ಷಣ ಪೊಲೀಸ್ ಮತ್ತು ಆಡಳಿತದ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿತು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕಳುಹಿಸಲಾಯಿತು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಪ್ರಯಾಣಿಕರ ಮೃತದೇಹಗಳನ್ನು ಗುರುತಿಸಲಾಗಿದೆ. ಬಳಿಕ ಪಂಚನಾಮೆ ನಡೆಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಅಪಘಾತದ ಕಾರಣ ಪತ್ತೆಗೆ ಪೊಲೀಸರ ಶೋಧ

ಈ ಘಟನೆ ಸ್ಥಳದಲ್ಲಿ ಸಂಬಂಧಿಕರನ್ನು ಕಳೆದುಕೊಂಡವರ ಅಕ್ರಂದನ ಮುಗಿಲುಮುಟ್ಟಿದೆ. ಮೃತರ ಕುಟುಂಬಸ್ಥರಿಗೆ ಸದ್ಯ ಪೊಲೀಸ್ ಇಲಾಖೆ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ.