ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ನಂತರ, ಬೆಳಗಾವಿಯಿಂದ ಕುಂಭಮೇಳಕ್ಕೆ ಹೋಗುತ್ತಿದ್ದ ವಾಹನ ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯು ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಸಂಭವಿಸಿದೆ.
ಬೆಳಗಾವಿ (ಫೆ.07): ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಈಗಾಗಲೇ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಬೆಳಗಾವಿಯಿಂದ ಕುಂಭಮೇಳಕ್ಕೆ ಹೊರಟಿದ್ದ ವಾಹನ ಅಪಘಾತಕ್ಕೀಡಾಗಿದ್ದು, ಬೆಳಗಾವಿಯ ಮತ್ತೆ ನಾಲ್ವರು ಸಾವಿಗೀಡಾಗಿದ್ದಾರೆ.
ಕರ್ನಾಟಕದ ಬೆಳಗಾವಿಯಿಂದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಿ ಪವಿತ್ರ ಗಂಗಾಸ್ನಾನ ಮಾಡುವುದಕ್ಕೆ ಹೊರಟಿದ್ದರು. ಆದರೆ, ಬೆಳಗಾವಿಯಿಂದ ಮಧ್ಯಪ್ರದೇಶ ಇಂದೋರ್ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. ಜೊತೆಗೆ, 15 ಯಾತ್ರಾರ್ಥಿಗಳಿಗೆ ಗಂಬೀರ ಗಾಯಗಳಾಗಿವೆ. ಕ್ಯಾಂಟರ್, ಟಿಟಿ ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಬೆಳಗಾವಿ ಜಿಲ್ಲೆ ಗಣೇಶಪುರ ನಿವಾಸಿ ಸಾಗರ ಶಾಪುರಕರ (55), ಶಿವಾಜಿನಗರದ ಸಂಗೀತಾ ಮೇತ್ರಿ, ವಡಗಾವಿಯ ಜ್ಯೋತಿ ಖಾಂಡೇಕರ ಮತ್ತು ನೀತಾ (50) ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.
ಬೆಳಗಾವಿಯಿಂದ ಟೆಂಪೋ ಟ್ರಾವೆಲರ್ (ಟಿಟಿ) ವಾಹನದಲ್ಲಿ 2 ದಿನಗಳ ಹಿಂದೆ 15ಕ್ಕೂ ಅಧಿಕ ಯಾತ್ರಾರ್ಥಿಗಳು ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸಿದ್ದರು. ಬೆಳಗಾವಿಯ ಗಣೇಶಪುರದ ನಿವಾಸಿಗಳಿಂದ ಟಿಟಿ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ, ಇಂದು ಬೆಳಗ್ಗೆ ವಾಹನ ಭೀಕರ ಅಪಘಾತವಾಗಿದ್ದು, ಇದೀಗ ನಾಲ್ಕು ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಉಳಿದವರು ಆಸ್ಪತ್ರೆಗೆ ಸೇರಿದ್ದಾರೆ. ಕುಟುಂಬಸ್ಥರು ಅಲ್ಲಿಗೆ ತೆರಳಿದ ನಂತರ ಮೃತದೇಹಗಳನ್ನು ತೆಗೆದುಕೊಂಡು ಬರಲಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ; ಉಜ್ಜೈನಿ ಮಹಾಕಾಲ ದರ್ಶನ ಮುಗಿಸಿ ಬರುತ್ತಿದ್ದ ಬೆಳಗಾವಿಯ ಇಬ್ಬರು ದುರ್ಮರಣ!
ಕಾಲ್ತುಳಿತದಲ್ಲಿ ಬೆಳಗಾವಿಯ 4 ಜನರು ಸಾವು: ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಮೌನಿ ಅಮವಾಸ್ಯೆ ಪುಣ್ಯಸ್ನಾನದ ವೇಳೆ ಬರೋಬ್ಬರಿ 8 ಕೋಟಿಗೂ ಅಧಿಕ ಜನರು ಸೇರಿದ್ದರು. ಆದರೆ, ಇಲ್ಲಿ ಬೆಳಗ್ಗೆ 5 ಗಂಟೆ ವೇಳೆಗೆ ಸಂಭವಿಸಿದ ಕಾಲ್ತುಳಿತದಲ್ಲಿ ತಾಯಿ ಮಗಳು ಸೇರಿದಂತೆ ಬೆಳಗಾವಿಯ 4 ಜನರು ಸಾವನ್ನಪ್ಪಿದ್ದರು. ಈ ಘಟನೆಯ ಬಳಿಕ ಒಟ್ಟು ಸಾವಿನ ಸಂಖ್ಯೆ 30 ದಾಟಿರುವುದು ಕಂಡುಬಂದಿತ್ತು. ಇದಾದ ನಂತರ ಮಧ್ಯಪ್ರದೇಶ ಸರ್ಕಾರ ಮೃತರ ದೇಹಗಳನ್ನು ಗೌರವಪೂರ್ವಕವಾಗಿ ಬೆಳಗಾವಿಗೆ ಕಳುಹಿಸಿದ್ದು, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಧನವನ್ನೂ ನೀಡಿತ್ತು.
