ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಈ ಹತ್ಯೆಗೆ ಸಂಬಂಧಿಸಿದಂತೆ ಕುಲಕರ್ಣಿ ಸೇರಿದಂತೆ ಒಟ್ಟು 17 ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ, ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿಗೆ ಸೇರಿ 16 ಮಂದಿ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಟಿಂಗರೀಕರ್‌ ಒಬ್ಬರಿಗೆ ಜೀವಾವಧಿ ಸಿಗದೆ 7 ವರ್ಷಗಳ ಜೈಲು ಮತ್ತು 30000 ದಂಡ ಪ್ರಕಟಿಸಲಾಗಿದೆ. ಇದರ ಜೊತೆಗೆ ಉಳಿದ ಅಪರಾಧಿಗಳಿಗೂ ಶಿಕ್ಷೆಯನ್ನು ಪ್ರಕಟ ಮಾಡಿದೆ. 16ಲಕ್ಷ ರೂ. ದಂಡದ ಮೊತ್ತ ವಿಧಿಸಲಾಗಿದ್ದು ಈ ಪರಿಹಾರವನ್ನು ಯೋಗೇಶ್ ಗೌಡ ಮಕ್ಕಳಿಗೆ ಹಾಗೂ ಸಹೋದರ ಗುರುನಾಥ್ ಗೌಡ ಗೆ ನೀಡಲು ಸೂಚನೆ ನೀಡಲಾಗಿದೆ.

ವಿನಯ್ ಕುಲಕರ್ಣಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದ ಚನ್ನಕೇಶವ ಟಿಂಗರೀಕರ್‌ ಸೇರಿದಂತೆ 17 ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಪ್ರಿಲ್ 15ರಂದು ದೋಷಿಗಳೆಂದು ಘೋಷಿಸಿ ಮಹತ್ವದ ತೀರ್ಪು ನೀಡಿತ್ತು. ಗುರುವಾರವಾಕ್ಕೆ ಶಿಕ್ಷೆಯ ಪ್ರಮಾಣ ಕಾಯ್ದಿರಿಸಿದ ನ್ಯಾಯಾಲವು ಸಿಬಿಐ ಮತ್ತು ಆರೋಪಿಗಳ ಪರ ವಕೀಲರ ವಾದ ಪ್ರತಿವಾದವನ್ನು ಆಲಿಸಿತು. ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದರು. ಬಳಿಕ ಇಂದಿಗೆ ಅಂದರೆ ಏಪ್ರಿಲ್ 17ಕ್ಕೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಪ್ರಕರಣದ 15ನೇ ಅಪರಾಧಿಯಾಗಿರುವ ಪ್ರಭಾವಿ ರಾಜಕಾರಣಿ ವಿನಯ್ ಕುಲಕರ್ಣಿ ಹತ್ಯೆಯ ಹಿಂದೆ ನಡೆದ ಒಳಸಂಚಿನಲ್ಲಿ ಭಾಗಿಯಾದ ಹಿನ್ನೆಲೆ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಉಳಿದ ಆರೋಪಿಗಳಿಗೂ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

2016ರ ಜೂನ್‌ನಲ್ಲಿ ನಡೆದ ಕೊಲೆಗೆ ಸಂಬಂಧಿಸಿ ಯೋಗೇಶ್‌ ಗೌಡ ಕೊಲೆ ಪ್ರಕರಣ ಸಂಬಂಧ ಸುಮಾರು 8 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಸಂಜೆ ಅಂತಿಮ ತೀರ್ಪು ಪ್ರಕಟಿಸಿ ಅಪರಾಧಿಗಳೆಂದು ಘೋಷಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು, 15ನೇ ಆರೋಪಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ವಿಕ್ರಮ್‌ ಬಳ‍್ಳಾರಿ, ಕೀರ್ತಿ ಕುಮಾರ್‌ ಬಸವರಾಜ್‌ ಕುರಹಟ್ಟಿ, ಸಂದೀಪ್‌ ಸವದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ ಹೊಂಗಲ್‌, ಸಂತೋಷ್‌ ಸವದತ್ತಿ, ದಿನೇಶ್‌, ಅಶ್ವತ್ಥ್, ಸುನೀಲ್‌, ನಜೀರ್ ಅಹ್ಮದ್‌, ಶಹನವಾಜ್‌, ನೂತನ್‌, ಹರ್ಷಿತ್‌, ಚಂದ್ರಶೇಖರ್‌ ಇಂಡಿ, ವಿಕಾಸ್‌ ಕಲಬುರಗಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ಚನ್ನಕೇಶವ ಬಿ.ಟಿಂಗರಿಕರ್‌ ಒಟ್ಟು 17 ಮಂದಿಗೆ ಶಿಕ್ಷೆ ಪ್ರಕಟಿಸಿದ್ದಾರೆ.

17 ಅಪರಾಧಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು

ಏಪ್ರಿಲ್ 15ರಂದು ನ್ಯಾಯಾಧೀಶರ ಸೂಚನೆಯ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋದರು. ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಹಿನ್ನೆಲೆಯಲ್ಲಿ 17 ಅಪರಾಧಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆದರೆ ವಾದ ಪ್ರತಿವಾದ ಮಾತ್ರ ನಡೆದಿತ್ತು. ಹೀಗಾಗಿ ಇಂದು ಮತ್ತೆ ಎಲ್ಲಾ ಆರೋಪಿಗಳನ್ನು ಕೋರ್ಟ್‌ಗೆ ಕರೆತಂದಿದ್ದರು.

ಈ ಪ್ರಕರಣದಲ್ಲಿ ಮೊದಲನೇ ಆರೋಪಿ ಬಸವರಾಜ್‌ ಮುತ್ತಗಿ ಮತ್ತು 17ನೇ ಆರೋಪಿ ಶಿವಾನಂದ್‌ ಅವರನ್ನು ಮಾಫಿ ಸಾಕ್ಷಿಯನ್ನಾಗಿಸಲಾಗಿದೆ. ಜತೆಗೆ 20ನೇ ಆರೋಪಿ ವಾಸುದೇವ್‌ ರಾಮ ನೀಲೆಕಣಿ ಮತ್ತು 21ನೇ ಆರೋಪಿ ಸೋಮಶೇಖರ್‌ ಬಸಪ್ಪ ನ್ಯಾಮಗೌಡ ಅವರನ್ನು ನಿರ್ದೋಷಿಗಳೆಂದು ಕೋರ್ಟ್ ಹೇಳಿದೆ.

ಯಾವ ಸೆಕ್ಷನ್‌ ಯಾರ ಮೇಲೆ?

ಪ್ರಕರಣದ 2 ರಿಂದ 16 ಮತ್ತು 18ನೇ ಆರೋಪಿಗಳು ಭಾರತೀಯ ದಂಡ ಸಂಹಿತೆ 302 (ಕೊಲೆ) ಆರೋಪದಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿ ಶಿಕ್ಷೆಗೊಳಗಾಗಿದ್ದಾರೆ. ಹಾಗೆಯೇ 2 ರಿಂದ 16 ಮತ್ತು 18 ಹಾಗೂ 19ನೇ ಆರೋಪಿಗಳು 120 (ಬಿ) (ಅಪರಾಧಿಕ ಒಳ ಸಂಚು) ರೂಪಿಸಿದ್ದಾರೆ ಮತ್ತು 201 (ಸಾಕ್ಷ್ಯ ನಾಶ ಪಡಿಸಿದ್ದಾರೆ). ಇನ್ನು ಆರೋಪಿ 2 ರಿಂದ 14 ಮತ್ತು 18ನೇ ಆರೋಪಿಗಳು 143, 149 (ಅಕ್ರಮ ಕೂಟ), 147 (ಗಲಭೆ), 148 (ಆಯುಧಗಳಿಂದ ಕೃತ್ಯ) ಎಸಗಿದ್ದಾರೆ. 19ನೇ ಆರೋಪಿ 218 ಅಡಿಯಲ್ಲಿ ಸಾರ್ವಜನಿಕ ಸೇವೆಯಲ್ಲಿದ್ದು ತಪ್ಪುದಾಖಲೆಗಳನ್ನು ಸೃಷ್ಟಿಸಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ.