ಮದ್ದೂರು ಶಾಸಕ ಕದಲೂರು ಉದಯ್, ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಆಪ್ತರಾಗಿದ್ದರೂ ಲಾಬಿ ಮಾಡುವುದಿಲ್ಲ, ಬದಲಿಗೆ ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸುವುದಾಗಿಯೂ, ಅದಕ್ಕಾಗಿ ₹800 ಕೋಟಿ ಅನುದಾನ ಬಳಸುವುದಾಗಿಯೂ ತಿಳಿಸಿದ್ದಾರೆ.
ಮಂಡ್ಯ (ಮೇ 30): ರಾಜ್ಯ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಬೆನ್ನಲ್ಲೇ ಸಚಿವ ಸಂಪುಟ ಸೇರ್ಪಡೆ ಕುರಿತು ಭಾರಿ ಚರ್ಚೆಗಳು ಆರಂಭವಾಗಿವೆ. ಈ ನಡುವೆ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಕದಲೂರು ಉದಯ್ 'ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಅದಕ್ಕಾಗಿ ಯಾವುದೇ ಲಾಬಿಯನ್ನೂ ನಡೆಸುತ್ತಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಡಿಕೆಶಿ ಆತ್ಮೀಯರಾದ ತಕ್ಷಣ ಮಂತ್ರಿಗಿರಿ ಕೇಳಲಾಗಲ್ಲ!
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಗೆ ಮಂತ್ರಿಗಿರಿಯ ಮೇಲೆ ಯಾವುದೇ ಆಸೆ ಇಲ್ಲ ಎಂಬುದನ್ನು ಹೇಳಿದ್ದಾರೆ. ರಾಜಕೀಯ ವಲಯದಲ್ಲಿ ಕದಲೂರು ಉದಯ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪರಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, 'ನಾನು ಡಿ.ಕೆ.ಶಿವಕುಮಾರ್ ಅವರಿಗೆ ಆತ್ಮೀಯನಾಗಿದ್ದೇನೆ ಎಂದ ಮಾತ್ರಕ್ಕೆ ಮಂತ್ರಿಗಿರಿ ಕೊಡಿ ಎಂದು ಕೇಳಲು ಸಾಧ್ಯವಿಲ್ಲ. ನಾನು ಯಾವುದೇ ಸ್ಥಾನಮಾನಗಳನ್ನು ನೀಡಿ ಎಂದು ಪಕ್ಷದ ವರಿಷ್ಠರ ಬಳಿ ಬೇಡಿಕೆ ಇಟ್ಟಿಲ್ಲ' ಎಂದರು.
ಪಕ್ಷದ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ ಶಾಸಕರು, 'ನಮ್ಮ ಪಕ್ಷದಲ್ಲಿ ಸದ್ಯ 140 ಮಂದಿ ಶಾಸಕರಿದ್ದಾರೆ. ಅವರಲ್ಲಿ 100 ಕ್ಕೂ ಹೆಚ್ಚು ಮಂದಿ ಹಿರಿಯ ಹಾಗೂ ಅನುಭವೀ ಶಾಸಕರಿದ್ದಾರೆ. ಇದರೊಂದಿಗೆ ಬೇರೆ ಬೇರೆ ಪಕ್ಷಗಳಿಂದಲೂ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರಿಗೂ ಸಹ ಸೂಕ್ತ ಸ್ಥಾನಮಾನಗಳನ್ನು ನೀಡಬೇಕಾದ ಜವಾಬ್ದಾರಿ ಪಕ್ಷದ ಮೇಲಿದೆ. ನಮ್ಮ ಮಂಡ್ಯ ಜಿಲ್ಲೆಗೆ ಒಂದು ಮಂತ್ರಿ ಸ್ಥಾನ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವೇಳೆ ಮತ್ತೊಂದು ಸಚಿವ ಸ್ಥಾನ ಸಿಕ್ಕರೆ ಅದು ಜಿಲ್ಲೆಯ ನಾಯಕರ ಅದೃಷ್ಟ' ಎಂದು ನುಡಿದರು.
ಮದ್ದೂರು ಕ್ಷೇತ್ರಕ್ಕೆ ರೂ. 800 ಕೋಟಿಗೂ ಅಧಿಕ ಅನುದಾನ
ತಮ್ಮ ಮುಂದಿನ ರಾಜಕೀಯ ನಡೆ ಹಾಗೂ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಕದಲೂರು ಉದಯ್, 'ಇನ್ನುಳಿದ ಎರಡು ವರ್ಷಗಳ ಅವಧಿಯಲ್ಲಿ ನನ್ನ ಮದ್ದೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಕ್ಷೇತ್ರದಲ್ಲಿ ರೈತರ ಪ್ರಮುಖ ಸಮಸ್ಯೆಯಾಗಿರುವ ನೀರಾವರಿ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಬೇಕಿದೆ. ಈ ಹಿಂದೆ ಕ್ಷೇತ್ರದ ಕೆರೆಗಳು ಮತ್ತು ನಾಲೆಗಳು ಸಾಕಷ್ಟು ಅಧ್ವಾನಗೊಂಡಿದ್ದವು. ಪ್ರಸ್ತುತ ಅಂದಾಜು 800 ಕೋಟಿ ರೂಪಾಯಿಗೂ ಹೆಚ್ಚಿನ ಬೃಹತ್ ಅನುದಾನದಲ್ಲಿ ಹಂತ ಹಂತವಾಗಿ ಇವುಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ' ಎಂದು ಮಾಹಿತಿ ನೀಡಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಕುರಿತು ಮಾತನಾಡಿದ ಅವರು, 'ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೆರುತ್ತಿರುವುದರಿಂದ ಮದ್ದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರೀಕ್ಷೆಗೂ ಮೀರಿ ಅನುದಾನ ಬಿಡುಗಡೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಪಕ್ಷಗಳಿಂದ ಮೊಸಳೆ ಕಣ್ಣೀರು
ವಿರೋಧ ಪಕ್ಷಗಳ ನಾಯಕರು ಸಿದ್ದರಾಮಯ್ಯ ಅವರ ಮೇಲೆ ಪ್ರತಿದಿನ ಯಾವುದಾದರೂ ಒಂದು ಸುಳ್ಳು ಆರೋಪ ಮಾಡುತ್ತಲೇ ಇದ್ದರು. ಆದರೆ ಈಗ ಅವರು ರಾಜೀನಾಮೆ ನೀಡಿದ ತಕ್ಷಣ, ಕಾಂಗ್ರೆಸ್ ಪಕ್ಷವೇ ಸಿದ್ದರಾಮಯ್ಯ ಅವರಿಗೆ ಅನ್ಯಾಯ ಮಾಡಿದೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ರಾಜಕೀಯ ಮಾಡುತ್ತಿರುವ ವಿರೋಧ ಪಕ್ಷದವರಿಗೆ ನಾಚಿಕೆ, ಮಾನ ಮರ್ಯಾದೆ ಏನಾದರೂ ಇದೆಯಾ?' ಎಂದು ಕದಲೂರು ಉದಯ್ ಕಿಡಿಕಾರಿದರು.


