ಕರ್ನಾಟಕದಲ್ಲಿ ನೂತನ ಸರ್ಕಾರ ರಚನೆಯ ಭಾಗವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯಲಿದ್ದು, ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಿದ್ದರಾಮಯ್ಯನವರು ನಾಯಕನ ಹೆಸರನ್ನು ಪ್ರಸ್ತಾಪಿಸಲಿದ್ದು, ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಾಗುತ್ತದೆ.
ಬೆಂಗಳೂರು (ಮೇ 30): ಕರ್ನಾಟಕ ರಾಜಕೀಯದ (Karnataka Politics) ಕುತೂಹಲದ ಕೇಂದ್ರಬಿಂದುವಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಗೆ ಈಗ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲಿ ನೂತನ ಸರ್ಕಾರ ರಚನೆಯ ಪ್ರಕ್ರಿಯೆಯ ಭಾಗವಾಗಿ ನಡೆಯುತ್ತಿರುವ ಈ ಸಭೆಯು ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಅಧಿಕೃತ ಮುದ್ರೆ ಬೀಳಲಿದೆ.
ವಿಧಾನಸೌಧದಲ್ಲಿ (Vidhana Soudha) ನಡೆಯಲಿರುವ ಈ ಹೈವೋಲ್ಟೇಜ್ ಸಭೆಯು ಹಂತ ಹಂತವಾಗಿ ಸಾಗಲಿದ್ದು, ಹೈಕಮಾಂಡ್ ಸೂಚನೆಯಂತೆ (Congress High Command) ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಭೆ ಆರಂಭವಾಗುತ್ತಿದ್ದಂತೆ ಮೊದಲಿಗೆ ಎಲ್ಲಾ ನೂತನ ಶಾಸಕರ ಹಾಜರಾತಿ (MLAs Attendance) ಪಡೆಯುವ ಪ್ರಕ್ರಿಯೆ ನಡೆಯಲಿದೆ. ಪ್ರತಿಯೊಬ್ಬ ಶಾಸಕರು ಸಭೆಗೆ ಹಾಜರಿರುವ ಬಗ್ಗೆ ಸಹಿ ಸಂಗ್ರಹಿಸಲಾಗುತ್ತದೆ. ಶಾಸಕರ ಒಗ್ಗಟ್ಟನ್ನು ಪ್ರದರ್ಶಿಸಲು ಮತ್ತು ನಾಯಕನ ಆಯ್ಕೆಗೆ ಬಹುಮತದ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಈ ಪ್ರಕ್ರಿಯೆ ಅನಿವಾರ್ಯವಾಗಿದೆ.
ಸ್ವಾಗತ ಮತ್ತು ಹೈಕಮಾಂಡ್ ನಾಯಕರ ಭಾಷಣ:
ಶಾಸಕರ ಹಾಜರಾತಿ ಪ್ರಕ್ರಿಯೆ ಮುಗಿದ ತಕ್ಷಣ, ಸಿಎಲ್‌ಪಿ ಕಾರ್ಯದರ್ಶಿ ಅಲ್ಲಮ ಪ್ರಭು ಪಾಟೀಲ್ (Allama Prabhu Patil) ಅವರು ಎಲ್ಲ ನಾಯಕರು ಮತ್ತು ಶಾಸಕರನ್ನು ಅಧಿಕೃತವಾಗಿ ಸ್ವಾಗತಿಸಲಿದ್ದಾರೆ. ತದನಂತರ, ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ (Ranadeep Singh Surjewala) ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (KC Venugopal) ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೈಕಮಾಂಡ್ ನಿರ್ಧಾರ ಮತ್ತು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರು ಹೇಗೆ ಒಗ್ಗಟ್ಟಿನಿಂದ ಸಾಗಬೇಕು ಎಂಬುದರ ಕುರಿತು ಇವರು ಮಾರ್ಗದರ್ಶನ ನೀಡಲಿದ್ದಾರೆ.
ಸಿದ್ದರಾಮಯ್ಯರಿಂದ ನೂತನ ನಾಯಕನ ಹೆಸರಿನ ಪ್ರಸ್ತಾವ:
ಸಭೆಯ ಅತ್ಯಂತ ಪ್ರಮುಖ ಘಟ್ಟವೆಂದರೆ ಅದು ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ. ಈ ಜವಾಬ್ದಾರಿಯನ್ನು ಹಿರಿಯ ನಾಯಕ ಸಿದ್ದರಾಮಯ್ಯ ಅವರು ವಹಿಸಿಕೊಳ್ಳಲಿದ್ದಾರೆ. ಸಿದ್ಧರಾಮಯ್ಯ ಅವರು ಸಭೆಯಲ್ಲಿ ನೂತನ ಸಿಎಲ್‌ಪಿ ನಾಯಕನ ಹೆಸರನ್ನು ಪ್ರಸ್ತಾವಿಸಲಿದ್ದಾರೆ. ಈ ಪ್ರಸ್ತಾವನೆಗೆ ಸಭೆಯಲ್ಲಿದ್ದ ಇಬ್ಬರು ಶಾಸಕರು ಅನುಮೋದನೆ (Second the proposal) ನೀಡಲಿದ್ದಾರೆ. ಎಲ್ಲ ಶಾಸಕರ ಒಪ್ಪಿಗೆಯ ನಂತರ, ಸಿದ್ದರಾಮಯ್ಯ ಅವರೇ (Siddaramaiah) ಅಧಿಕೃತವಾಗಿ ನೂತನ ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಘೋಷಣೆ ಮಾಡಲಿದ್ದಾರೆ.
ಡಿಕೆ ಶಿವಕುಮಾರ್ ಅಭಿನಂದನೆ ಮತ್ತು ಧನ್ಯವಾದ:
ನೂತನ ಸಿಎಲ್‌ಪಿ ನಾಯಕನ ಘೋಷಣೆಯಾದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು ಈ ನಿರ್ಧಾರವನ್ನು ಸ್ವಾಗತಿಸಿ, ಶಾಸಕರಿಗೆ ಮತ್ತು ಹೈಕಮಾಂಡ್ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸಲಿದ್ದಾರೆ. ಮೂಲಗಳ ಪ್ರಕಾರ, ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಒಳಗೊಂಡ ಅಧಿಕೃತ ಪತ್ರವನ್ನು ಸಿದ್ಧಪಡಿಸಲಾಗುತ್ತದೆ.
ರಾಜಭವನದತ್ತ ಪಯಣ – ಸರ್ಕಾರ ರಚನೆಗೆ ಹಕ್ಕು ಮಂಡನೆ:
ಸಿಎಲ್‌ಪಿ ಸಭೆ ಮುಗಿಯುತ್ತಿದ್ದಂತೆ, ಡಿ.ಕೆ. ಶಿವಕುಮಾರ್ ಅವರ ಹೆಸರಿರುವ ಅಥವಾ ಅವರು ಸಹಿ ಮಾಡಿರುವ ಅಧಿಕೃತ ಶಾಸಕಾಂಗ ಪಕ್ಷದ ನಿರ್ಣಯದ ಪತ್ರವನ್ನು ರಾಜಭವನಕ್ಕೆ ರವಾನಿಸಲಾಗುತ್ತದೆ. ನೂತನವಾಗಿ ಆಯ್ಕೆಯಾದ ಶಾಸಕಾಂಗ ಪಕ್ಷದ ನಾಯಕರು ಕೂಡಲೇ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ತಮಗೆ ಬಹುಮತ ಇರುವ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿ, ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಲಿದ್ದಾರೆ.


