Asianet Suvarna News Asianet Suvarna News

ಮಾಧ್ಯಮಗಳಿಗೆ ‘AI’ ತಂತ್ರಜ್ಞಾನ ವರವೋ? ಶಾಪವೋ?: ಕೆ.ವಿ.ಪ್ರಭಾಕರ್ ವಿಶೇಷ ಲೇಖನ

ಕಂಪ್ಯೂಟರ್ ಕಂಡು ಹಿಡಿದಾಗ, ಇಂಟರ್ ನೆಟ್ ಬಂದಾಗ, ಗೂಗಲ್ ಕೈಗೆ ಸಿಕ್ಕಾಗಲೂ ಪತ್ರಿಕೋದ್ಯಮದಲ್ಲಿ ಆತಂಕಗಳು ಸೃಷ್ಟಿ ಆಗಿದ್ದವು. ಇವೆಲ್ಲಾ ಪತ್ರಿಕೋದ್ಯಮಕ್ಕೆ ಶಾಪ ಆಗಬಹುದು, ಪತ್ರಕರ್ತರ ಕೆಲಸ ಕಿತ್ತುಕೊಳ್ಳುತ್ತವೆ ಎನ್ನುವುದೂ ಸೇರಿ ಹಲವು ಆತಂಕಗಳು ಎದುರಾಗಿದ್ದವು. ಆದರೆ ಈ ಎಲ್ಲಾ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪತ್ರಿಕೋದ್ಯಮದ ವೇಗ ಬದಲಾಗಿದೆ.

KV Prabhakar Specieal Article Over AI Technology For Media gvd
Author
First Published Nov 18, 2023, 7:23 AM IST

- ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರು

ಯಾವುದೇ ಸಂಶೋಧನೆ ಮತ್ತು ತಂತ್ರಜ್ಞಾನ ಬೆಂಕಿ ಇದ್ದಂತೆ. ಬೆಂಕಿಯಲ್ಲಿ ನಾವು ಅನ್ನವನ್ನೂ ಮಾಡಬಹುದು. ಮನೆಯನ್ನೂ ಸುಡಬಹುದು. ಅದನ್ನು ನಾವು ಹೇಗೆ? ಯಾವುದಕ್ಕೆ ಬಳಸುತ್ತೇವೆ ಎನ್ನುವುದರ ಮೇಲೆ ಆ ತಂತ್ರಜ್ಞಾನ ಒಳ್ಳೆಯದ್ದೋ, ಕೆಟ್ಟದ್ದೋ ಎನ್ನುವುದು ನಿರ್ಧಾರ ಆಗುತ್ತದೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮತ್ತು ಕತ್ರಿನಾ ಕೈಫ್ ಅವರ ಡೀಪ್ ಫೇಕ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಅನಾಹುತಗಳು ಕಣ್ಣ ಮುಂದಿವೆ. ಅವು ಡೀಪ್ ಫೇಕ್ ವಿಡಿಯೋಗಳು ಎಂದು ಗೊತ್ತಾಗುವುದರ ಒಳಗೆ ಲಕ್ಷಾಂತರ ಮಂದಿ ಫೇಕ್ ವಿಡಿಯೋವನ್ನು ರಿಯಲ್ ಅಂತಲೇ ನಂಬಿದ್ದರು. ಹೀಗೆ ನಂಬಿದವರೆಲ್ಲಾ‌ ಅತ್ಯಂತ ವಿದ್ಯಾವಂತರು ಎನ್ನುವುದು ಆತಂಕದ ವಿಷಯ. 

ಇದೇ ಡೀಪ್ ಫೇಕ್ ವಿಡಿಯೋವನ್ನು ರಶ್ಮಿಕಾ ಮಂದಣ್ಣ ಬದಲಿಗೆ ಯಾವುದೋ ಧಾರ್ಮಿಕ ನಾಯಕ, ವಿವಾದಾಸ್ಪದ ರಾಜಕೀಯ ನಾಯಕರ ಹೆಸರಲ್ಲಿ ಮಾಡಿ ವಿವಾದಾತ್ಮಕ ಹೇಳಿಕೆ ಕೊಟ್ಟಂತೆ ಫೇಕ್ ವಿಡಿಯೋ ಮಾಡಿಸಿದ್ದರೆ ಏನು ಗತಿ? ಅದು ಫೇಕ್ ಎಂದು ಗೊತ್ತಾಗುವುದರ ಒಳಗೆ ಹತ್ತಾರು ಕೊಲೆಗಳು ನಡೆದು, ಅಶಾಂತಿ ಸೃಷ್ಟಿ ಆಗುವ ಅಪಾಯ ಇತ್ತು.ಮಾಧ್ಯಮ ಎದುರಿಸಿದ ಆತಂಕಗಳು: ಯುದ್ಧದಂತಹ ತುರ್ತು ಪರಿಸ್ಥಿತಿಗಳಲ್ಲಿ ಡೀಪ್ ಫೇಕ್ ಮತ್ತು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಸಿ ಯಾವುದೋ ನಾಯಕನ, ಯಾವುದೋ ದೇಶದ ಪ್ರಧಾನಿಯ ಫೇಕ್ ವಿಡಿಯೋ ಮಾಡಿಸಿ ಭೀಕರ ಅನಾಹುತಗಳನ್ನೇ ಸೃಷ್ಟಿಸಬಹುದು. ಅದಕ್ಕೇ ಈ ತಂತ್ರಜ್ಞಾನಗಳು ಯಾರ ಕೈಯಲ್ಲಿ, ಹೇಗೆ ಬಳಸಲ್ಪಡುತ್ತವೆ ಎನ್ನುವುದರ ಮೇಲೆ ಅದು ಒಳ್ಳೆಯದ್ದೋ, ಕೆಟ್ಟದ್ದೋ ಎಂದು ಗೊತ್ತಾಗುತ್ತದೆ. 

ಕಾಂಗ್ರೆಸ್‌ ಸೇಡಿನ ರಾಜಕೀಯಕ್ಕೆ ಜಗ್ಗೋಲ್ಲ, ಯಾವ ತನಿಖೆಗೂ ಸಿದ್ಧ: ಎಚ್‌ಡಿಕೆ ಸವಾಲ್‌

ಸೈಬರ್ ತಂತ್ರಜ್ಞಾನ‌ ಇಂದು ಜಗತ್ತಿಗೆ ಅನುಕೂಲ ಆಗಿರುವಂತೆಯೇ ದೊಡ್ಡ ಶಾಪ ಕೂಡ ಆಗಿದೆ. ಸೈಬರ್ ದಾಳಿ ಮೂಲಕ ಇಡೀ ದೇಶದ ಬ್ಯಾಂಕ್‌ಗಳ ಹಣವನ್ನು ಕೆಲವೇ ನಿಮಿಷಗಳಲ್ಲಿ ಖಾಲಿ ಮಾಡಬಹುದು. ಇಂದು ಬೆಂಗಳೂರಿನಲ್ಲಿ ಅತಿ ಹೆಚ್ಚು ದಾಖಲಾಗುತ್ತಿರುವ ಪ್ರಕರಣಗಳೆಂದರೆ ಸೈಬರ್ ಕಳ್ಳತನ ಮಾತ್ರ. ಪ್ರತಿ ದಿನ ನೂರಾರು ದೂರುಗಳು ಬರುತ್ತಿವೆ. ಪತ್ರಿಕೋದ್ಯಮ ವಿಚಾರಕ್ಕೆ ಬರುವುದಾದರೆ, ಕಂಪ್ಯೂಟರ್ ಕಂಡು ಹಿಡಿದಾಗ, ಇಂಟರ್ ನೆಟ್ ಬಂದಾಗ, ಗೂಗಲ್ ಕೈಗೆ ಸಿಕ್ಕಾಗಲೂ ಆತಂಕಗಳು ಸೃಷ್ಟಿ ಆಗಿದ್ದವು. ಇವೆಲ್ಲಾ ಪತ್ರಿಕೋದ್ಯಮಕ್ಕೆ ಶಾಪ ಆಗಬಹುದು, ಪತ್ರಕರ್ತರ ಕೆಲಸ ಕಿತ್ತುಕೊಳ್ಳುತ್ತವೆ ಎನ್ನುವುದೂ ಸೇರಿ ಹಲವು ಆತಂಕಗಳು ಎದುರಾಗಿದ್ದವು. ಆದರೆ ಈ ಎಲ್ಲಾ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪತ್ರಿಕೋದ್ಯಮದ ವೇಗ ಬದಲಾಗಿದೆ.

ಮಾಧ್ಯಮಗಳಿಗೆ ಎಐನಿಂದ ಲಾಭ ಏನು?: ಇಲ್ಲಿ ತಂತ್ರಜ್ಞಾನ ತಂತಾನೇ ಅನಾಹುತಕಾರಿ ಅಲ್ಲ. ಅದನ್ನು ಬಳಸುವವರ ಮೇಲೆ ಅವಲಂಬಿತ ಆಗಿದೆ. ಇದೇ ಇಂಟರ್ನೆಟ್ ಮತ್ತು ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹರಡಲು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇಂಥವರ ಕೈಗೆ ಡೀಪ್ ಫೇಕ್, ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನ ಸಲೀಸಾಗಿ ಸಿಕ್ಕರೆ ಆಗಬಹುದಾದ ಅನಾಹುತಗಳನ್ನು ನಾವು ಸುಲಭವಾಗಿ ಅಂದಾಜಿಸಬಹುದು.

ರಾಯಿಟರ್ಸ್ ಮತ್ತು ವಾಷಿಂಗ್ಟನ್ ಪೋಸ್ಟ್‌ನಂತಹ ಪ್ರಪಂಚದ ಕೆಲವು ದೊಡ್ಡ ಸುದ್ದಿ ಸಂಸ್ಥೆಗಳೂ ನ್ಯೂಸ್‌ರೂಮ್‌ಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೆಚ್ಚೆಚ್ಚು ಬಳಸಲು ಆರಂಭಿಸಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಸುದ್ದಿಗಳ ಸಂಗ್ರಹವನ್ನು ತ್ವರಿತಗೊಳಿಸಬಹುದು. ಉದಾಹರಣೆಗೆ ಎಲ್ಲೋ ಒಂದು ಕಡೆ ಬಾಂಬ್ ಸ್ಫೋಟ ಆದರೆ, ಕಳೆದ 5-10 ವರ್ಷಗಳಲ್ಲಿ ನಡೆದ ಬಾಂಬ್ ಸ್ಫೋಟದ ಎಲ್ಲಾ ಬಿಡಿ-ಬಿಡಿ ಘಟನೆಗಳನ್ನು ಇಡಿ ಇಡಿಯಾಗಿ ಎರಡು-ಮೂರು ನಿಮಿಷಗಳಲ್ಲಿ ಸಂಗ್ರಹಿಸಿ ಪ್ರಸಾರವನ್ನೂ ಮಾಡಿಬಿಡಬಹುದು. ನ್ಯೂಸ್‌ ರೂಮ್‌ಗಳ ಸ್ವರೂಪವನ್ನೇ ಬದಲಾಯಿಸಿ ಬಿಡಬಹುದಾದ ಎಲ್ಲಾ ಸಾಧ್ಯತೆಗಳೂ ಕೃತಕ ಬುದ್ಧಿಮತ್ತೆಗೆ ಇದೆ.

ಕೃತಕ ಬುದ್ಧಿಮತ್ತೆಯು ಸುಳ್ಳು ಸುದ್ದಿಗಳನ್ನು ಕಡಿಮೆ ಮಾಡಬಹುದು ಅಥವಾ ಇನ್ನಷ್ಟು ಪರಿಣಾಮಕಾರಿಯಾಗಿ, ಮತ್ತಷ್ಟು ವ್ಯವಸ್ಥಿತವಾಗಿ ಸುಳ್ಳನ್ನು ಹರಡಬಹುದು. ಈ ಹೊತ್ತಿನ ಪತ್ರಿಕೋದ್ಯಮದಲ್ಲಿ ಬಹುತೇಕ sideline ಆಗಿರುವ investigation ಮತ್ತು ಸಂಶೋಧನೆಯನ್ನು ಇನ್ನಷ್ಟು ಶಕ್ತಗೊಳಿಸುತ್ತದೆ ಎನ್ನುವ ಸದಭಿಪ್ರಾಯಗಳೂ ವ್ಯಕ್ತ ಆಗುತ್ತಿವೆ. ನ್ಯೂಯಾರ್ಕ್‌ ಟೈಮ್ಸ್‌ನ ವರದಿಯ ಪ್ರಕಾರ, ಬ್ಲೂಮ್‌ಬರ್ಗ್ ನ್ಯೂಸ್ ಕೃತಕ ಬುದ್ಧಿಮತ್ತೆಯನ್ನು ವ್ಯಾಪಕವಾಗಿ ಬಳಸುತ್ತಿದೆ. ಇದು ಸಾವಿರಾರು ಲೇಖನಗಳನ್ನು ಮಾಡಲು ವರದಿಗಾರರಿಗೆ ಸಹಾಯ ಮಾಡುತ್ತದೆ ಎನ್ನುವುದು ಈಗಾಗಲೇ prove ಆಗಿದೆ.

ಒಲಿಂಪಿಕ್ಸ್‌ ವರದಿ ಬರೆದಿದ್ದ ಎಐ: 2016ರಲ್ಲಿ, ವಾಷಿಂಗ್ಟನ್ ಪೋಸ್ಟ್ ರಿಯೋ ಒಲಿಂಪಿಕ್ಸ್‌ನ ವಿಶೇಷ ವರದಿಗಳನ್ನು ಬರೆಯಲು ಕೃತಕ ಬುದ್ಧಿಮತ್ತೆ ಆಧಾರಿತ ಹೆಲಿಯೋಗ್ರಾಫ್ ಸಾಫ್ಟ್‌ವೇರ್ ಅನ್ನು ಬಳಸಿತು. ಇದು ಮೊದಲು ಡೇಟಾವನ್ನು ವಿಶ್ಲೇಷಿಸಿ ಬಳಿಕ ಸ್ವಯಂಚಾಲಿತ ನಿರೂಪಣೆಯನ್ನು ರಚಿಸಿತು. ಇದಕ್ಕೆ ತೆಗೆದುಕೊಂಡ ಸಮಯ ಬಹಳ ಕಡಿಮೆ. ಏಳೆಂಟು ಮಂದಿ ಕ್ರೀಡಾ ವರದಿಗಾರರು ಹತ್ತಾರು ಗಂಟೆ ರೀಸರ್ಚ್‌ ಮಾಡಿ ಸಿದ್ಧಪಡಿಸಬೇಕಿದ್ದ story ಗಳನ್ನು ಇದು ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿತು. ಕಡಿಮೆ ಸಮಯದಲ್ಲಿ ಹೆಚ್ಚು ಕಷ್ಟದ ಕೆಲಸವನ್ನು ಅತ್ಯಂತ ಸರಳವಾಗಿ ಸಿದ್ಧಪಡಿಸಿ, ನಿರೂಪಿಸಿತು. ಈ ಸ್ವಯಂಚಾಲಿತ ಪತ್ರಿಕೋದ್ಯಮವು ಹೆಚ್ಚೆಚ್ಚು ಅಂಕಿ ಅಂಶಗಳು ಮತ್ತು ಡೇಟಾ ಸಂಗ್ರಹದ ಕ್ರೀಡೆ ಮತ್ತು ಹಣಕಾಸಿನ ವಲಯಗಳಲ್ಲಿ ಮೊದಲಿಗೆ ಹೆಚ್ಚು ಕ್ರಿಯಾಶೀಲವಾಗಿ ಬಳಕೆ ಆಗಿದೆ.

ಈ ವಲಯಗಳಲ್ಲಿ, ಕಚ್ಚಾ ಡೇಟಾವನ್ನು ಸುಲಭವಾಗಿ ಅತ್ಯಂತ ಆಕರ್ಷಕ story ಗಳನ್ನಾಗಿ ಪರಿವರ್ತಿಸಬಹುದು ಎನ್ನುವುದನ್ನು ಇದು ತೋರಿಸಿಕೊಟ್ಟಿದೆ. ಇದು Real time ನಲ್ಲಿ ಹೆಚ್ಚಿನ ಪ್ರಮಾಣದ ಡೇಟಾವನ್ನು ಹುಡುಕಲು ಸಹಾಯ ಮಾಡುತ್ತದೆ ಮತ್ತು ಜನರು, ಸ್ಥಳ, ದಿನಾಂಕಗಳು ಮತ್ತು ಘಟನೆಗಳ ಆಧಾರದ ಮೇಲೆ ಮಾಹಿತಿಗಳನ್ನು ಹೊರತೆಗೆಯಬಹುದು. ಸುದ್ದಿ live ಆಗುತ್ತಿರುವಾಗಲೇ live ಸುದ್ದಿಗಳಿಗೆ ಪೂರಕವಾದ ಹಿಂದಿನ ಘಟನಾವಳಿಗಳನ್ನು ಪಟ್ಟಿ ಮಾಡಿ live news ಜತೆಗೇ ಪ್ರಸಾರ ಆಗುವಂತೆ ಮಾಡಬಹುದು.

ಉದಾಹರಣೆಗೆ ಯಾವುದೋ‌ ಕಾಗೆ, ಇನ್ಯಾರದೋ ಕಾರಿನ ಮೇಲೆ ಕುಳಿತ live news ಕೊಡುವಾಗ ಕೃತಕ‌ ಬುದ್ಧಿಮತ್ತೆಯನ್ನು ಬಳಸಿದರೆ ಈ ಹಿಂದೆ ಕಾಗೆ ಯಾರ್ಯಾರ ಕಾರಿನ ಮೇಲೆ, ಯಾವ ದಿನಾಂಕದಂದು, ಎಷ್ಟು‌ ಗಂಟೆಗೆ ಕುಳಿತಿತ್ತು ಎನ್ನುವುದು ತಂತಾನೇ ಪ್ರಸಾರ ಆಗುತ್ತದೆ. ಜತೆಗೆ, ಈಗ ಕುಳಿತಿರುವ ಕಾಗೆ-ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕಾರಿನ‌ ಮೇಲೆ ಕುಳಿತಿದ್ದ ಕಾಗೆ ಒಂದೆನಾ, ಬೇರೆ ಬೇರೆನಾ, ಆ ಕಾಗೆಯ ವಯಸ್ಸೆಷ್ಟು? ಅದು ಗಂಡು ಕಾಗೆನಾ? ಹೆಣ್ಣು ಕಾಗೆನಾ? ಎನ್ನುವುದನ್ನೂ ಸರಳಗೊಳಿಸುವ ಮೂಲಕ ಮತ್ತಷ್ಟು ವೇಗದ ಮತ್ತು ನಿಖರವಾದ ಪರಿಶೀಲನೆಗಳನ್ನು ಒದಗಿಸುತ್ತದೆ.

ವಿದ್ಯುತ್ ಕಳವು: 68526 ರು. ದಂಡ ಕಟ್ಟಿ ಕರೆಂಟ್‌ ಕಳ್ಳ ಎನ್ನುವುದನ್ನು ನಿಲ್ಲಿಸಿ ಎಂದ ಎಚ್‌ಡಿಕೆ

ಭಾವನಾತ್ಮಕ ತೀರ್ಮಾನ ಕಷ್ಟ ಕಷ್ಟ: ಪ್ರಸ್ತುತ ಕೃತಕ ಬುದ್ಧಿಮತ್ತೆಯನ್ನು ಪತ್ರಿಕೋದ್ಯಮದಲ್ಲಿ ಹಣ ಮತ್ತು ಸಮಯವನ್ನು ಉಳಿಸಲು ಹಾಗೂ ವೇಗ ಮತ್ತು ದಕ್ಷತೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ ಎನ್ನುವ ವಿಶ್ಲೇಷಣೆಗಳು ಬರುತ್ತಿವೆ. ವೇಗವಾದ ಒಳನೋಟಗಳನ್ನು ಒದಗಿಸುತ್ತದೆ ಮತ್ತು ಗೊಂದಲಗಳನ್ನು ಕಡಿಮೆ ಮಾಡುತ್ತದೆ. ಆದರೆ ಒಂದು ಘಟನೆಯನ್ನು ಯಾವ ದೃಷ್ಟಿಕೋನದಲ್ಲಿ ನೋಡಬೇಕು ಎನ್ನುವ ಭಾವನಾತ್ಮಕ ತೀರ್ಮಾನವನ್ನು ಮಾಡುವಾಗ ಕೃತಕ‌ ಬುದ್ಧಿಮತ್ತೆಗೆ ತಾಂತ್ರಿಕ ಸವಾಲುಗಳು ಎದುರಾಗುತ್ತವೆ. ಉದಾಹರಣೆಗೆ ಪ್ಯಾಲೆಸ್ತೀನ್‌ನಲ್ಲಿ ಇನ್ನೂ ಗರ್ಭದಲ್ಲಿರುವ ಮಕ್ಕಳನ್ನು, ಆಗಷ್ಟೆ ಹುಟ್ಟಿದ ಮಕ್ಕಳನ್ನೂ ಇಸ್ರೇಲ್ ಕೊಂದಿದೆ ಎನ್ನುವ ಸುದ್ದಿಯನ್ನು ಹೇಗೆ ಪ್ರಸಾರ ಮಾಡುತ್ತದೆ? ಮಕ್ಕಳನ್ನು ಕೊಂದಿದ್ದನ್ನು ಇಸ್ರೇಲ್‌ನ ಶೌರ್ಯದ ಪ್ರತೀಕ ಅಂತಲೋ ಅಥವಾ ಅನಾಗರಿಕ ಅಂತಲೋ?

ಕಾರ್ಪೊರೇಟ್ ಹೊಣೆಗಾರಿಕೆ, ಹಕ್ಕುಸ್ವಾಮ್ಯ ಮತ್ತು ನ್ಯಾಯೋಚಿತ ಬಳಕೆಯಂತಹ ಆಡಳಿತಾತ್ಮಕ ಸವಾಲುಗಳೂ ಕೃತಕ ಬುದ್ಧಿಮತ್ತೆಯಿಂದ ಎದುರಾಗುತ್ತವೆ. ತಂತ್ರಜ್ಞಾನವು ಈ ಎಲ್ಲಾ ಅಡೆತಡೆಗಳನ್ನು ಹೇಗೆ ನಿವಾರಿಸುತ್ತದೆ ಎಂಬುದರ ಮೇಲೆ ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಭವಿಷ್ಯವು ನಿರ್ಧರಿಸಲ್ಪಡುತ್ತದೆ. ನಾವು ಎಷ್ಟೇ ಪ್ರಯತ್ನಪಟ್ಟರೂ ತಂತ್ರಜ್ಞಾನದ ಆಗಮನ ಮತ್ತು ಬಳಕೆಯನ್ನು ತಡೆಯಲು ಸಾಧ್ಯವಿಲ್ಲ. ಇದನ್ನು ನಾಗರಿಕವಾಗಿ ಬಳಸುವುದು, ಅಳವಡಿಸಿಕೊಳ್ಳುವುದು ಹೇಗೆ ಎನ್ನುವುದು ಮಾತ್ರ ನಮ್ಮ ಮುಂದಿರುವ ಆಯ್ಕೆ.

Follow Us:
Download App:
  • android
  • ios