ಕಾಂಗ್ರೆಸ್ ಸೇಡಿನ ರಾಜಕೀಯಕ್ಕೆ ಜಗ್ಗೋಲ್ಲ, ಯಾವ ತನಿಖೆಗೂ ಸಿದ್ಧ: ಎಚ್‌ಡಿಕೆ ಸವಾಲ್
ಕಾಂಗ್ರೆಸ್ ಸರ್ಕಾರವು ನನ್ನ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳಲು ಹೊರಟಿದ್ದು, ಬಿಡದಿಯ ಜಮೀನು ಮತ್ತು ಜಂತಕಲ್ ಮೈನಿಂಗ್ ಕುರಿತು ತನಿಖೆ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ನ.18): ಕಾಂಗ್ರೆಸ್ ಸರ್ಕಾರವು ನನ್ನ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳಲು ಹೊರಟಿದ್ದು, ಬಿಡದಿಯ ಜಮೀನು ಮತ್ತು ಜಂತಕಲ್ ಮೈನಿಂಗ್ ಕುರಿತು ತನಿಖೆ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ರಾಜಕೀಯ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಇದಕ್ಕೆಲ್ಲಾ ಜಗ್ಗುವ ಪೈಕಿ ನಾನಲ್ಲ. ಇದನ್ನೆಲ್ಲ ಎದುರಿಸುವ ಶಕ್ತಿ ನನಗಿದೆ ಎಂದರು. ಜಂತಕಲ್ ಮೈನಿಂಗ್ ಇರಬಹುದು ಅಥವಾ ಬಿಡದಿಯ ನನ್ನ ಜಮೀನು ಇರಬಹುದು. ಯಾವುದರ ಬಗ್ಗೆಯಾದರೂ ತನಿಖೆ ಮಾಡಿಸಬಹುದು. ಆದಷ್ಟು ಬೇಗ ಇದರ ಬಗ್ಗೆ ತನಿಖೆ ಮಾಡಸಲಿ, ನಾನೂ ಕಾಯುತ್ತಿದ್ದೇನೆ. ಹೆದರಿಸಿದರೆ ಕುಮಾರಸ್ವಾಮಿ ಹೆದರಿಕೊಳ್ಳುತ್ತಾನೆ, ಹೆದರಿಸಿ ಅವರ ಬಾಯಿ ಮುಚ್ಚಿಸಬಹುದು ಎಂದು ಯಾರಾದರೂ ನಂಬಿದ್ದರೆ ಅವರ ಮೂರ್ಖತನವಷ್ಟೇ ಎಂದು ಸರ್ಕಾರಕ್ಕೆ ತಿರುಗೇಟು ನೀಡಿದರು.
ಬಿಡದಿ ಜಮೀನಿನ ತನಿಖೆ ಮಾಡಿಸಿ: ಬಿಡದಿ ತೋಟದ ಮನೆ ಜಮೀನು ಒತ್ತುವರಿಯಾಗಿದೆ. ಈ ಬಗ್ಗೆ ತನಿಖೆ ಮಾಡಿಸಬೇಕು ಎಂದು ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬೇಗ ತನಿಖೆ ಮಾಡಿಸಬೇಕು. ನನ್ನ ಒಟ್ಟಾರೆ ಭೂಮಿಯಲ್ಲಿ ಮೂರ್ನಾಲ್ಕು ಎಕರೆ ಕಡಿಮೆ ಬರುತ್ತಿದೆ. ಅವರು ಹುಡುಕಿಸಿ ಕೊಡಲಿ. ನನ್ನನ್ನು ಕಟ್ಟಿಹಾಕಲು ತಂತ್ರ ರೂಪಿಸಲಾಗುತ್ತಿದೆ. ಆ ಜಾಗವನ್ನು ಖರೀದಿ ಮಾಡಿ 38 ವರ್ಷವಾಗಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಕಾಲದಿಂದಲೂ ಈ ಬಗ್ಗೆ ಎಷ್ಟು ತನಿಖೆ ಆಗಿದೆ ಎನ್ನುವುದರ ಬಗ್ಗೆ ಗ್ರಂಥವನ್ನೇ ಬರೆಯಬಹುದು ಎಂದು ಟಾಂಗ್ ಕೊಟ್ಟರು.
ವಿದ್ಯುತ್ ಕಳ್ಳತನ ಪ್ರಕರಣ: ಕುಮಾರಸ್ವಾಮಿ-ಶಿವಕುಮಾರ್ ವಾಕ್ಸಮರ
ಜಂತಕಲ್ ಗಣಿ ತನಿಖೆಯೂ ಆಗಲಿ: ಇನ್ನು, ಜಂತಕಲ್ ಮೈನಿಂಗ್ ಪ್ರಕರಣದ ಮರು ತನಿಖೆ ಮಾಡುವುದಾದರೆ ಮಾಡಬಹುದು. ಇದು 13 ವರ್ಷದ ಹಿಂದಿನ ಪ್ರಕರಣ. ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧದ ಆರೋಪಗಳನ್ನು ಮುಚ್ಚಿಕೊಳ್ಳಲು ಈಗ ನನ್ನ ವಿಷಯ ಕೆದಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಸಿಬಿ ರಚನೆ ಮಾಡಿದ್ದು, ಎಷ್ಟು ಪ್ರಕರಣ ತನಿಖೆ ಮಾಡಿ ಮುಗಿಸಿದ್ದಾರೆ? ಆ ಪೈಕಿ ರೀಡೂ ಪ್ರಕರಣ ಎಲ್ಲಿಗೆ ಬಂತು? ಕೆಂಪಣ್ಣ ವರದಿ ಏನಾಯಿತು? ನನಗೆ 14 ತಿಂಗಳು ಕಾಂಗ್ರೆಸ್ ಬೆಂಬಲ ನೀಡಿತ್ತು. ಆಗ ನನ್ನ ಪ್ರಕರಣವನ್ನು ಮುಚ್ಚಿ ಹಾಕಿದ್ದೇನಾ? ಕೆಲ ಸತ್ಯಗಳನ್ನು ಇಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಈ ವ್ಯವಸ್ಥೆ ಹೇಗಿದೆ ಎಂದು ಹೇಳಲು ಬೇಸರವಾಗುತ್ತದೆ ಎಂದು ಕಿಡಿಕಾರಿದರು.
ವಿದ್ಯುತ್ ಕಳ್ಳತನ ವಿವಾದಕ್ಕೆ ಸಿಲುಕಿದ ಎಚ್‌ಡಿಕೆ: ಜೈಲು ಇಲ್ಲ ದಂಡಕ್ಕೆ ಸೀಮಿತ ಎಂದ ಬೆಸ್ಕಾಂ
ಈಗಲೂ ಸವಾಲು ಹಾಕಲಿದ್ದು, ನನ್ನನ್ನು ಬಂಧನ ಮಾಡಲಿ ನೋಡೋಣ. ಏನೇನು ಇದೆ ಈ ಕೇಸಿನಲ್ಲಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಜಂತಕಲ್ ಕೇಸನ್ನು ಆದಷ್ಟು ಬೇಗ ತನಿಖೆ ಮಾಡಿ ಸತ್ಯವನ್ನು ಜನರಿಗೆ ತಿಳಿಸಲಿ ಎಂದರು. ಕಾಸಿಗಾಗಿ ಹುದ್ದೆ’ ವಿಡಿಯೋ ವಿವಾದಕ್ಕೆ ಡಿಕೆಶಿ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರು ಸಿಎಸ್‌ಆರ್ ಅನುದಾನದ ಕತೆ ಸೃಷ್ಟಿ ಮಾಡಿದ್ದಾರೆ. ವಿಡಿಯೋ ಬಿಡುಗಡೆಯಾದ ಕೂಡಲೇ ಸಿಎಸ್‌ಆರ್ ಬಗ್ಗೆ ಏಕೆ ಹೇಳಲಿಲ್ಲ? ಯತೀಂದ್ರ ಪ್ರಕರಣವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದರು. ಬೆಂಗಳೂರಲ್ಲಿ ಲುಲು ಮಾಲ್ ನಿರ್ಮಾಣಕ್ಕೆ ಮಿನರ್ವ ಮಿಲ್‌ನ 24 ಎಕರೆ ಖರಾಬ್ ಜಮೀನು ಕಬಳಿಸಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ಶೀಘ್ರದಲ್ಲೇ ಅಗತ್ಯ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.