ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗುದೆ. ಅಕ್ರಮ ವಿದೇಶಿ ಪಾರ್ಟಿಗಳು, ಕಲ್ಲು ಗಣಿಗಾರಿಕೆ, ಮತ್ತು ಅನ್ನ ಭಾಗ್ಯ ಅಕ್ಕಿ ದಂಧೆಯಂತಹ ಸರಣಿ ಅಕ್ರಮಗಳನ್ನು ತಡೆಯಲು ವಿಫಲರಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಕೊಪ್ಪಳ (ಏ.01): ಕರ್ತವ್ಯ ಲೋಪ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್‌ಐ (PSI) ಸುನೀಲ್ ಅವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಾಮ್ ಅರಸಿದ್ದಿ ಅವರು ಈ ಖಡಕ್ ಆದೇಶವನ್ನು ಹೊರಡಿಸಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಅಕ್ರಮ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮಾನತ್ತಿಗೆ ಕಾರಣಗಳೇನು?:

ಕಳೆದ ಎರಡು ವರ್ಷಗಳಿಂದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುನೀಲ್ ಅವರ ವಿರುದ್ಧ ಇತ್ತೀಚಿನ ದಿನಗಳಲ್ಲಿ ದೂರುಗಳು ಕೇಳಿಬರುತ್ತಿದ್ದವು. ಕಚೇರಿಯ ಆಡಳಿತಾತ್ಮಕ ವಿಚಾರಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಶಿಸ್ತು ಕ್ರಮ ಜರುಗಿಸಲಾಗಿದೆ.

ಸರಣಿ ಅಕ್ರಮಗಳ ಸುಳಿವು:

ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹಲವಾರು ಅಕ್ರಮ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದು ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿತ್ತು.

ಪ್ರಮುಖವಾಗಿ:

ವಿದೇಶಿಗರ ಪಾರ್ಟಿ: ಅನುಮತಿ ಇಲ್ಲದೆ ವಿದೇಶಿ ಪ್ರಜೆಗಳು ಭಾಗವಹಿಸಿದ್ದ ಪಾರ್ಟಿಗಳು ನಡೆದಿದ್ದು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಅಕ್ರಮ ಕಲ್ಲು ಗಣಿಗಾರಿಕೆ: ಮುನಿರಾಬಾದ್ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಪೊಲೀಸರು ಮೌನಕ್ಕೆ ಶರಣಾಗಿದ್ದರು ಎಂಬ ಆರೋಪವಿತ್ತು.

ಅನ್ನ ಭಾಗ್ಯ ಅಕ್ಕಿ ದಂಧೆ: ಸರ್ಕಾರದ ಮಹತ್ವಾಕಾಂಕ್ಷಿ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲವೊಂದು ಇಲ್ಲಿ ಸಕ್ರಿಯವಾಗಿತ್ತು.

ಈ ಎಲ್ಲಾ ಪ್ರಕರಣಗಳು ಒಂದಾದ ಮೇಲೊಂದರಂತೆ ಬೆಳಕಿಗೆ ಬಂದಾಗ, ಸ್ಥಳೀಯ ಪೊಲೀಸರ ಶಾಮೀಲಾತಿ ಅಥವಾ ನಿರ್ಲಕ್ಷ್ಯದ ಬಗ್ಗೆ ಮೇಲಧಿಕಾರಿಗಳಿಗೆ ಶಂಕೆ ವ್ಯಕ್ತವಾಗಿತ್ತು.

ಎಸ್ಪಿ ಖಡಕ್ ಎಚ್ಚರಿಕೆ:

ಆಡಳಿತಾತ್ಮಕ ವಿಚಾರದಲ್ಲಿ ವಿಫಲರಾದ ಸುನೀಲ್ ಅವರಿಗೆ ಈ ಹಿಂದೆಯೇ ಎಚ್ಚರಿಕೆಗಳನ್ನು ನೀಡಲಾಗಿತ್ತು ಎನ್ನಲಾಗಿದೆ. ಆದರೂ ಕೆಲಸದಲ್ಲಿ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ, ಎಸ್ಪಿ ರಾಮ್ ಅರಸಿದ್ದಿ ಅವರು ಅಮಾನತ್ತಿನ ಅಸ್ತ್ರ ಪ್ರಯೋಗಿಸಿದ್ದಾರೆ. ಈ ಆದೇಶವು ಜಿಲ್ಲೆಯ ಇತರೆ ಪೊಲೀಸ್ ಅಧಿಕಾರಿಗಳಿಗೂ ಒಂದು ಎಚ್ಚರಿಕೆಯ ಸಂದೇಶವಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಅಕ್ರಮಗಳಿಗೆ ಅವಕಾಶ ನೀಡುವ ಅಥವಾ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂಬ ಸೂಚನೆಯನ್ನು ಈ ಮೂಲಕ ನೀಡಲಾಗಿದೆ. ಪ್ರಸ್ತುತ ಪಿಎಸ್‌ಐ ಸುನೀಲ್ ಅವರನ್ನು ಅಮಾನತ್ತುಗೊಳಿಸಲಾಗಿದ್ದು, ಇಲಾಖಾ ತನಿಖೆ ಮುಂದುವರಿಯಲಿದೆ.