ದೇಶದ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ 2 ಕೋಟಿ ರೂ. ಆರ್ಥಿಕ ನಷ್ಟ ಉಂಟುಮಾಡಿದ ಆರೋಪದ ಮೇಲೆ ಡಿವೈಎಸ್‌ಪಿ ಕಲ್ಪನಾ ವರ್ಮಾ ಅವರನ್ನು  ಅಮಾನತುಗೊಳಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಹಣ ಗಳಿಕೆ, ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿದೆ.

ನವದೆಹಲಿ (ಫೆ.07): ಛತ್ತೀಸ್‌ಗಢದಲ್ಲಿ ಉದ್ಯಮಿಯೊಬ್ಬರು ಮಾಡಿದ ಆರೋಪದ ಹಿನ್ನೆಲೆಯಲ್ಲಿ, ಡಿವೈಎಸ್‌ಪಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ಉದ್ಯಮಿ ದೂರು ನೀಡಿದ್ದರು. ಪ್ರಾಥಮಿಕ ತನಿಖೆಯ ನಂತರ, ಪೊಲೀಸ್ ಅಧಿಕಾರಿ ಕಲ್ಪನಾ ವರ್ಮಾ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿಸೆಂಬರ್ 16 ರಂದು, ಉದ್ಯಮಿ ದೀಪಕ್ ಟೋಂಡನ್ ಅವರು ದಂತೇವಾಡ ಡಿವೈಎಸ್‌ಪಿ ಕಲ್ಪನಾ ವರ್ಮಾ ವಿರುದ್ಧ ಛತ್ತೀಸ್‌ಗಢ ಪೊಲೀಸ್ ಮಹಾನಿರ್ದೇಶಕ ಅರುಣ್ ದೇವ್ ಗೌತಮ್ ಅವರಿಗೆ ಲಿಖಿತ ದೂರು ನೀಡಿದ್ದರು. ಡಿವೈಎಸ್‌ಪಿ ವರ್ಮಾ, ಅವರ ತಂದೆ ಮತ್ತು ಸಹೋದರ ತಮಗೆ ಐದು ವರ್ಷಗಳಿಂದ ಪರಿಚಯ. ಡಿವೈಎಸ್‌ಪಿ ತಮ್ಮ ಪ್ರಭಾವ ಬಳಸಿ ತಮಗೆ 2ಕೋಟಿ ರೂಪಾಯಿ ಆರ್ಥಿಕ ನಷ್ಟ ಮಾಡಿದ್ದಾರೆ ಎಂದು ಟೋಂಡನ್ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಾಥಮಿಕ ವರದಿಯಲ್ಲಿ ಸಿಕ್ಕ ಸಾಕ್ಷಿ

ದೂರಿನ ನಂತರ ತನಿಖೆ ಆರಂಭಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು. ರಾಜ್ಯದ ಹಿರಿಯ ಪೊಲಿಸ್ ಅಧಿಕಾರಿಯಾಗಿ ಅವರ ನಡವಳಿಕೆ ನಾಗರಿಕ ಸೇವೆಗೆ ಸರಿಹೊಂದುವಂತಿಲ್ಲ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ದಂತೇವಾಡ ಜಿಲ್ಲೆಯ ಡಿವೈಎಸ್‌ಪಿ ಕಲ್ಪನಾ ವರ್ಮಾ ವಿರುದ್ಧದ ದೂರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಾಗಿದೆ. 

ಅಕ್ರಮ ಹಣ ಗಳಿಕೆ ಸಾಬೀತು

ಈ ವರದಿಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿವೆ. ಹಣಕಾಸು ವ್ಯವಹಾರ, ತನಿಖೆ ವೇಳೆ ನೀಡಿದ ಹೇಳಿಕೆಗೂ ವಾಟ್ಸಾಪ್ ಚಾಟ್‌ಗೂ ಇರುವ ವ್ಯತ್ಯಾಸ, ಕರ್ತವ್ಯದಲ್ಲಿದ್ದಾಗ ಅಕ್ರಮವಾಗಿ ಹಣ ಗಳಿಸಿದ್ದು, ಹುದ್ದೆ ದುರ್ಬಳಕೆ ಮತ್ತು ಆದಾಯ ಮೀರಿ ಆಸ್ತಿ ಗಳಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅಮಾನತು ಆದೇಶದಲ್ಲಿ ಹೇಳಲಾಗಿದೆ.

ಅಮಾನತು ಅವಧಿಯಲ್ಲಿ, ನವಾ ರಾಯ್‌ಪುರದ ಅಟಲ್ ನಗರದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯೇ ಅವರ ಹೆಡ್‌ಕ್ವಾರ್ಟರ್ಸ್ ಆಗಿರುತ್ತದೆ. ಸಸ್ಪೆಂಡ್ ಆಗಿರುವ ಸಮಯದಲ್ಲಿ ನಿಯಮಗಳ ಪ್ರಕಾರ ಅವರಿಗೆ ಭತ್ಯೆ ಸಿಗಲಿದೆ ಎಂದು ಸಹ ತಿಳಿಸಲಾಗಿದೆ.