ತಿಂಥಿಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಡಿ ಮಠದ ಶ್ರೀಗಳು, ಸಿಎಂ ಸಿದ್ದರಾಮಯ್ಯರ ಯಶಸ್ಸಿಗೆ ದೈವಕೃಪೆಯೇ ಕಾರಣ ಎಂದಿದ್ದಾರೆ. ಹಾಲುಮತ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದರೆ ಸರ್ವನಾಶ ತಪ್ಪಿದ್ದಲ್ಲ ಎಂದು ಎಚ್ಚರಿಸಿದ ಅವರು, ಬಜೆಟ್ ಮುಗಿಯುವವರೆಗೂ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಭವಿಷ್ಯ
ತಿಂಥಿಣಿ (ಜ.12): ರಾಯಚೂರು ಜಿಲ್ಲೆಯ ದೇವದುರ್ಗದ ತಿಂಥಿಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡ ಕೋಡಿ ಮಠದ ಶ್ರೀಗಳು, ಹಾಲುಮತ ಸಮಾಜದ ಶಕ್ತಿ ಮತ್ತು ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಹತ್ವದ ಮಾತುಗಳನ್ನು ಆಡಿದ್ದಾರೆ. ದೆಹಲಿಯಿಂದ ಬಂದ ಫೋನ್ ಕರೆ ಹಾಗೂ ಸಿದ್ದರಾಮಯ್ಯ ಅವರ ದಾಖಲೆಗಳ ಬಗ್ಗೆ ಶ್ರೀಗಳು ವಿವರಿಸಿದ್ದಾರೆ.
ಸಿದ್ದರಾಮಯ್ಯ ಅವರದ್ದು ದೈವಕೃಪೆ
ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದ ಶ್ರೀಗಳು, ಅವರಿಗೆ ದೈವ ಕೃಪೆ ಇದೆ. ಆ ಸಮಾಜದಲ್ಲಿ ಹುಟ್ಟಿದ ವ್ಯಕ್ತಿಯೊಬ್ಬರು ಏಕೈಕವಾಗಿ ಬಂದು ಸಿಎಂ ಆದರು, ಈಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಇದು ಸಾಮಾನ್ಯ ವಿಷಯವಲ್ಲ. ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ದಾಖಲೆಯನ್ನೇ ಮುರಿದಿದ್ದಾರೆ. ಈ ಹಿಂದೆ ಅವರು ಬಂದಾಗ 120-130 ಸೀಟು ಗೆದ್ದು ನೀವು ಸಿಎಂ ಆಗ್ತೀರಿ ಎಂದು ನಾನು ಹೇಳಿದ್ದೆ. ಆಗ ಅವರು ನೀವು ಸುಳ್ಳು ಹೇಳೋದು ಯಾವಾಗ ಕಲಿತ್ರಿ ಎಂದು ತಮಾಷೆ ಮಾಡಿದ್ದರು. ಆದರೆ ನನ್ನ ಮಾತು ನಿಜವಾಗಿತ್ತು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು.
ಹಾಲುಮತದ ಬಗ್ಗೆ ಮಾತನಾಡಿದರೆ ಸರ್ವನಾಶ: ಕೋಡಿಶ್ರೀ ಎಚ್ಚರಿಕೆ
ಸಮಾಜದ ಶಕ್ತಿಯ ಬಗ್ಗೆ ಎಚ್ಚರಿಕೆ ನೀಡಿದ ಶ್ರೀಗಳು, ನಾನೊಬ್ಬ ರಾಜಕಾರಣಿಗೆ ಹೇಳಿದ್ದೆ, ಹುಷಾರಾಗಿ ಮಾತಾಡು, ನೀನು ಅಸ್ತಿತ್ವ ಕಳೆದುಕೊಳ್ಳುತ್ತೀಯಾ. ನೀನು ಹಾಲುಮತ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದರೆ ಸಂಪೂರ್ಣ ನಾಶವಾಗುತ್ತೀಯಾ. ಈ ಸಮುದಾಯ ಬೆಂಗಳೂರಿನಿಂದ ಬೀದರ್‌ವರೆಗೂ ಹರಡಿದೆ. ಇವರು ಮನಸ್ಸು ಮಾಡಿದರೆ ಗೆಲ್ಲಿಸುವುದಕ್ಕಲ್ಲ, ಸೋಲಿಸುವುದಕ್ಕಂತೂ ಇದ್ದಾರೆ. ಈ ಸಮುದಾಯದ ಜೊತೆ ವಿರೋಧ ಕಟ್ಟಿಕೊಳ್ಳಬೇಡಿ ಎಂದು ಹೇಳಿದ್ದೆ ಎಂದರು.
ಬಜೆಟ್ ಮುಗಿಯುವವರೆಗೂ ಏನೂ ಆಗಲ್ಲ
ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಶ್ರೀಗಳು, ಸಂಕ್ರಾಂತಿ, ಯುಗಾದಿ ಅಂತ ಅಲ್ಲ, ಬಜೆಟ್ ಆಗುವವರೆಗೂ ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ಸ್ಥಿರತೆಯ ಬಗ್ಗೆ ಭವಿಷ್ಯ ನುಡಿದರು. ಅಲ್ಲದೆ, ಹಾಲುಮತ ಸಮಾಜವು ಸನಾತನವಾದುದ್ದಲ್ಲ, ಇದು ಜಗತ್ತಿನ ಮೊದಲ ಪುರಾತನ ಸಮಾಜ. ಮನುಷ್ಯ ದೇವರೆಂದು ನಂಬಿದ್ದೇ ಈ ಸಮಾಜದಿಂದ ಎಂದು ಬಣ್ಣಿಸಿದರು.
ಬಸವಣ್ಣ ಕೂಡ ಹಾಲುಮತದವರು?
ಬಸವಣ್ಣನವರ ಕುರಿತಾದ ಪ್ರಸಂಗವೊಂದನ್ನು ಉಲ್ಲೇಖಿಸಿದ ಶ್ರೀಗಳು, ಬಸವಣ್ಣನವರು ಹಾಲುಮತ ಸಮುದಾಯದವರು ಎಂದು ಪತ್ರಿಕೆಯೊಂದರಲ್ಲಿ ಓದಿದ್ದೆ. ಇದನ್ನು ಸಿದ್ದರಾಮಯ್ಯ ಅವರಿಗೆ ಕೇಳಿದಾಗ, ಅವರು ಹೌದು ಬುದ್ಧಿ, ಮುದಕ ಹೇಳುತ್ತಿದ್ದ ಬಸವಣ್ಣ ನಮ್ಮವನು ಕಣಲೇ ಅಂತ ಒಪ್ಪಿಕೊಂಡಿದ್ದರು ಎಂದರು. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರ ನಂತರ ಈ ಸಮಾಜದ ಸ್ಥಾನ ತುಂಬಲು ಬಿಎಂಟಿಸಿ ಉಪಾಧ್ಯಕ್ಷ ನಿಕಿತ್ ರಾಜ್ ಮೌರ್ಯ ಮುಂದೆ ಬರಬೇಕು ಎಂದು ಕರೆ ನೀಡಿದರು.

