ಹುಲಿ ದಾಳಿಯಿಂದ ಸ್ಥಗಿತಗೊಂಡಿದ್ದ ಬಂಡೀಪುರ ಸಫಾರಿಯು, ರೈತ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಪೊಲೀಸ್ ಸರ್ಪಗಾವಲಿನಲ್ಲಿ ಪುನರಾರಂಭಗೊಂಡಿದೆ. ಶೇ. 50ರಷ್ಟು ವಾಹನ ಬಳಕೆ ಮತ್ತು ಪರಿಷ್ಕೃತ ಸಮಯದಂತಹ ಮಾರ್ಪಾಡುಗಳೊಂದಿಗೆ ಆರಂಭವಾದ ಮೊದಲ ದಿನವೇ ಪ್ರವಾಸಿಗರು ಹುಲಿ, ಆನೆಗಳನ್ನು ಕಂಡು ಸಂತಸಪಟ್ಟರು.

ವರದಿ - ಪುಟ್ಟರಾಜು. ಆರ್ ಸಿ ಏಷಿಯಾನೆಟ್ ಸುವರ್ಣ ಚಾಮರಾಜನಗರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಾಮರಾಜನಗರ (ಫೆ.22): ಪರ-ವಿರೋಧ ಹೋರಾಟಗಳ ನಡುವೆ ಬಂಡೀಪುರದಲ್ಲಿ ಸಫಾರಿ ಪುನರಾರಂಭಗೊಂಡಿದೆ. ಸಫಾರಿಗೆ ರೈತ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪೊಲೀಸ್ ಸರ್ಪಗಾವಲಿನಲ್ಲಿ ಸಫಾರಿ ಪುನರಾರಂಭ ಮಾಡಲಾಗಿದ್ದು ಪ್ರವಾಸಿಗರು ಸಂತಸಗೊಂಡಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಬಂಡೀಪುರ ಹಾಗು ನಾಗರಹೊಳೆ ವ್ಯಾಪ್ತಿಯಲ್ಲಿ ಹುಲಿಗಳ ದಾಳಿಗೆ ಮೂವರು ರೈತರು ಬಲಿಯಾದ ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಮತ್ತೆ ಆರಂಭಿಸಲಾಗಿದೆ. ಸಫಾರಿ ಪುನಾರಂಭಕ್ಕೆ ರೈತ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಬಂಡೀಪುರ ಸಫಾರಿ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದ್ದು ಪೊಲೀಸ್ ಸರ್ಪಗಾವಲಿನಲ್ಲಿ ಸಫಾರಿ ಆರಂಭಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದಿಂದ ಬಂಡೀಪುರ ಅರಣ್ಯ ಪ್ರವೇಶ ದ್ವಾರದವರೆಗು ಸಫಾರಿ ವಾಹನಗಳಿಗೆ ಪೊಲೀಸ್ ಎಸ್ಕಾರ್ಟ್ ನೀಡಲಾಗುತ್ತಿದೆ. ಕೆಲವು ಮಾರ್ಪಾಡುಗಳೊಂದಿಗೆ ಸಫಾರಿ ಆರಂಭಿಸಲಾಗಿದ್ದು ಶೇಕಡಾ 50 ರಷ್ಟು ವಾಹನಗಳನ್ನು ಮಾತ್ರ ಬಳಸಲಾಗುತ್ತಿದೆ. ಹಿಂದೆ ಎಂಟು ಗಂಟೆ ಇದ್ದ ಸಫಾರಿ ಅವಧಿಯನ್ನು 5 ಗಂಟೆಗೆ ಇಳಿಸಲಾಗಿದೆ. ಬೆಳಿಗ್ಗೆ 6.30 ರಿಂದ 9 ಹಾಗು ಸಂಜೆ 3.30 ರಿಂದ 6 ಗಂಟೆಯವರೆಗೆ ಸಮಯ ನಿಗಧಿಗೊಳಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ನವೀನ್ಕುಮಾರ್ ತಿಳಿಸಿದರು..

ಮೂರು ತಿಂಗಳ ಬಳಿಕ ಪುನರಾರಂಭಗೊಂಡ ಸಫಾರಿಗೆ ಮೊದಲ ದಿನವೇ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಪ್ರವಾಸಿಗರ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಸಫಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪ್ರಾಕೃತಿಕವಾಗಿ ವನ್ಯಪ್ರಾಣಿ ಗಳನ್ನು ವೀಕ್ಷಿಸಲು ಪ್ರವಾಸಿಗರು ತುಂಬಾನೆ ಕಾತುರರಾಗಿದ್ದುದ್ದು ಕಂಡು ಬಂತು.ಇಂದಿನಿಂದ ಪ್ರಾರಂಭವಾದ ಮೊದಲ ಸಫಾರಿಯಲ್ಲೆ ಪ್ರಮುಖ ಆಕರ್ಷಣೆ ಹುಲಿ, ಆನೆ ನವಿಲು ಕಂಡು ಪ್ರವಾಸಿಗರು ಸಂತಸಗೊಂಡರು.

ಅಂತೂ ಇಂತು ಹಲವು ಜಿಜ್ಞಾಸೆಗಳ ನಡುವೆ ಸಫಾರಿ ಪುನಾರರಂಭಗೊಂಡಿದ್ದು ಸ್ಥಳೀಯರು ಸಂತಸಗೊಂಡಿದ್ದರೆ ಸಫಾರಿಗೆ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಿದೆ.

YouTube video player