ಚಿಕ್ಕಮಗಳೂರಿನ ಕಡಬಗೆರೆಯಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ನಂತರ, ಆನೆ ಹಾವಳಿಗೆ ಶಾಶ್ವತ ಪರಿಹಾರ ಕೋರಿ ಸ್ಥಳೀಯರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯು ವಿಕೋಪಕ್ಕೆ ತಿರುಗಿ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ, ಕಲ್ಲು ತೂರಾಟ ಹಾಗೂ ಲಾಠಿ ಚಾರ್ಜ್.
ಚಿಕ್ಕಮಗಳೂರು (ಫೆ.22): ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯಲ್ಲಿ ನಡೆದ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ಘಟನೆ ಈಗ ಮಲೆನಾಡಿಗರ ಆಕ್ರೋಶದ ಕಟ್ಟೆಯೊಡೆಯುವಂತೆ ಮಾಡಿದೆ. ಕಳೆದ ಆರು ಗಂಟೆಗಳಿಂದ ರಾಜ್ಯ ಹೆದ್ದಾರಿ ತಡೆದು ನಡೆಸುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಪೊಲೀಸರು ಮತ್ತು ಸಾರ್ವಜನಿಕರ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಒಂದೇ ವಾರದಲ್ಲಿ ಎರಡನೇ ಬಲಿ ಪಡೆದ ಆನೆ ಹಾವಳಿಗೆ ಶಾಶ್ವತ ಪರಿಹಾರ ಬೇಕೆಂದು ಆಗ್ರಹಿಸಿ ರೈತಾಪಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ರಸ್ತೆಯಲ್ಲೇ ಶಾಮಿಯಾನ ಹಾಕಿ ಧರಣಿ
ಕಾಡಾನೆ ದಾಳಿಗೆ ಹಾವೇರಿ ಮೂಲದ ಕೂಲಿ ಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ. ಒಂದೇ ವಾರದಲ್ಲಿ ಎರಡನೇ ಬಲಿಯಾಗಿದೆ. ಇದರ ವಿರುದ್ಧ ಕಡಬಗೆರೆ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಸ್ಥಳದಲ್ಲೇ ಶಾಮಿಯಾನ ಹಾಕಿ ರಸ್ತೆ ತಡೆ ನಡೆಸಲಾಗುತ್ತಿದ್ದು, ಆನೆ ಹಾವಳಿಗೆ ಮುಕ್ತಿ ಸಿಗುವವರೆಗೂ ಕದಲಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆ ವೇಳೆ ಟಯರ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿದೆ.

ಪೊಲೀಸರು ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಮುಂದಾದಾಗ ಹೇ.... ಕೊಡ್ತೀನಿ ನೋಡು... ನಡಿಯೋ ನೀನು... ಬಂಧಿತ ವ್ಯಕ್ತಿಯನ್ನು ಬಿಡಿಸಲು ಹೋದ ಪ್ರವೀಣ್ ಖಾಂಡ್ಯ ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ನೂರಾರು ಜನರು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬಿಜೆಪಿ ಕಾರ್ಯಕರ್ತನ ಮೇಲೆ ಕೈ, ಶಾಸಕರನ್ನೇ ಎಳೆದಾಡಿದ ಪ್ರತಿಭಟನಕಾರರು:
ಸ್ಥಳಕ್ಕೆ ಆಗಮಿಸಿದ ಶಾಸಕ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಕಾರ್ಯಕರ್ತ ವಿನೋದ್ ಬೊಗಸೆ ಮೇಲೆ ಕೈ ಎತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ರೊಚ್ಚಿಗೆದ್ದ ಹೋರಾಟಗಾರರು ಶಾಸಕರನ್ನೇ ನೂಕಾಡಿ, ತಳ್ಳಾಡುತ್ತಾ ಸ್ಥಳಕ್ಕೆ ಎಳೆದುಕೊಂಡು ಹೋಗಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಮಲೆನಾಡಿಗರ ನ್ಯಾಯದ ಹೋರಾಟ ಈಗ ಸರ್ಕಾರದ ವಿರುದ್ಧದ ದೊಡ್ಡ ಆಕ್ರೋಶವಾಗಿ ಮಾರ್ಪಟ್ಟಿದೆ.

ಕಲ್ಲು ತೂರಾಟ ಮತ್ತು ಲಾಠಿ ಚಾರ್ಜ್: ರಣರಂಗವಾದ ಗ್ರಾಮ
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆಕ್ರೋಶಿತ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿ ಮತ್ತು ಎಸ್ಪಿ ಭೇಟಿ ನೀಡಿ ಮಾತುಕತೆ ನಡೆಸಿದರಾದರೂ, ಪ್ರತಿಭಟನಾಕಾರರು ಮಣಿಯದ ಕಾರಣ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಬಲಪ್ರಯೋಗಿಸಿ ಮೃತದೇಹ ರವಾನೆ: ನೂರಕ್ಕೂ ಹೆಚ್ಚು ಮಂದಿ ವಶಕ್ಕೆ
ಅಂತಿಮವಾಗಿ ಪೊಲೀಸರು ಬಲಪ್ರಯೋಗ ಮಾಡಿ, ಆಂಬುಲೆನ್ಸ್‌ಗೆ ಅಡ್ಡ ನಿಂತಿದ್ದ ಪ್ರತಿಭಟನಾಕಾರರನ್ನು ತಳ್ಳಿ ಮೃತದೇಹವನ್ನು ರವಾನಿಸಿದ್ದಾರೆ. ಈ ವೇಳೆ ನಡೆದ ಸಂಘರ್ಷದಲ್ಲಿ ಮಾಜಿ ಶಾಸಕ ಡಿಎನ್ ಜೀವರಾಜ್, ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ ಸೇರಿದಂತೆ 100ಕ್ಕೂ ಹೆಚ್ಚು ಪ್ರಮುಖ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಕಡಬಗೆರೆಯಲ್ಲಿ ಪೊಲೀಸ್ ಬಿಗಿ ಪಹರೆ ಮುಂದುವರಿದಿದೆ.



