ಕೊಡಗು ಜಿಲ್ಲೆಯಲ್ಲಿ ಮದ್ಯಪಾನದಿಂದ ಮೂತ್ರಪಿಂಡ ವೈಫಲ್ಯ ಹೆಚ್ಚಾಗುತ್ತಿದೆ. 199 ಜನ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ತಜ್ಞ ವೈದ್ಯರಿಲ್ಲ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.14): ಕೊಡಗು ಜಿಲ್ಲೆಯಲ್ಲಿ ಯಾವುದೇ ಹಬ್ಬ, ಸಭೆ ಸಮಾರಂಭ ನಡೆದರೂ ಮದ್ಯ ಸಮಾರಾಧನೆ ಇರಲೇಬೇಕು. ಆದರೆ ಕೊಡಗಿನಲ್ಲಿ ಎಣ್ಣೆ ಹೊಡೆಯುವುದರಿಂದ ಮೂತ್ರಪಿಂಡ ವೈಫಲ್ಯಕ್ಕೆ ದೊಡ್ಡ ಕಾರಣವಾಗುತ್ತಿದೆ ಎನ್ನುವ ಸತ್ಯ ಬಹಿರಂಗವಾಗಿದೆ.
ಮದ್ಯಪಾನ ಸೇವನೆ, ಧೂಮಪಾನ ಸೇವನೆಯು ಕೂಡ ಜಿಲ್ಲೆಯಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತಿದೆ ಎನ್ನುವುದನ್ನು ಆರೋಗ್ಯ ಇಲಾಖೆ ಬಹಿರಂಗಗೊಳಿಸಿದೆ. ವೈದ್ಯರ ಈ ಮಾತನ್ನು ಅರ್ಥ ಮಾಡಿಕೊಳ್ಳದೆ ನೀವೇನಾದರೂ ನಿತ್ಯ ಕಂಠಪೂರ್ತಿ ಕುಡಿದು ನಿಮ್ಮ ಕಿಡ್ನಿ ವೈಫಲ್ಯವಾದರೆ ಚಿಕಿತ್ಸೆ ಮಾಡುವುದಕ್ಕೆ ಮೂತ್ರಪಿಂಡ ತಜ್ಞ ವೈದ್ಯರು ಇಲ್ಲ ಎನ್ನುವ ಎಚ್ಚರವೂ ಇರಲಿ.
199 ಜನರಿಗೆ ಕಿಡ್ನಿ ವೈಫಲ್ಯ!
ಹೌದು ಪುಟ್ಟ ಜಿಲ್ಲೆಯಾಗಿರುವ ಕೊಡಗಿನಲ್ಲಿ ವರ್ಷದಿಂದ ವರ್ಷಕ್ಕೆ ಕಿಡ್ನಿ ವೈಫಲ್ಯವಾಗಿರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದೆ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಬರೋಬ್ಬರಿ 199 ಜನರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಅಷ್ಟು ಜನರು ಜಿಲ್ಲೆಯ ನಾಲ್ಕು ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ 138 ಪುರುಷರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದಾರೆ. ಇವರಲ್ಲಿ ಹೆಚ್ಚಿನ ಪುರುಷರು ಮದ್ಯ ಮತ್ತು ಧೂಮಪಾನ ಸೇವನೆಯಿಂದ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದಾರೆ ಎನ್ನುವುದು ಗೊತ್ತಾಗಿದೆ. ಉಳಿದ 61 ಮಹಿಳೆಯರು ಕೂಡ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದಾರೆ.
ಒಬ್ಬೇ ಒಬ್ಬರು ಮೂತ್ರಪಿಂಡ ತಜ್ಞವೈದ್ಯರಿಲ್ಲ!
ಸದ್ಯ ಮಡಿಕೇರಿಯಲ್ಲಿ ಇರುವ ಕೊಡಗು ಜಿಲ್ಲಾಸ್ಪತ್ರೆ, ವಿರಾಜಪೇಟೆಯ ತಾಲ್ಲೂಕು ಆಸ್ಪತ್ರೆ, ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರ ಮತ್ತು ಸೋಮವಾರಪೇಟೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದೆ. ನಿತ್ಯ ಮೂರು ಪಾಳಿಯಲ್ಲಿ ಕಿಡ್ನಿ ವೈಫಲ್ಯ ಆಗಿರುವವರಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಆದರೆ ಆಗಿಂದಾಗ್ಗೆ ಅವರ ಆರೋಗ್ಯ ತಪಾಸಣೆ ಮಾಡುವುದಕ್ಕೆ ಮೂತ್ರಪಿಂಡ ವೈದ್ಯರು ಜಿಲ್ಲೆಯಲ್ಲಿ ಒಬ್ಬರೇ ಒಬ್ಬರು ಇಲ್ಲ ಎನ್ನುವುದು ವಿಪರ್ಯಾಸದ ಸಂಗತಿ.
ಇದನ್ನೂ ಓದಿ: Kodagu News: ಹೆದ್ದಾರಿ ಕುಸಿತಕ್ಕೆ ಬ್ರೇಕ್, 94 ಕೋಟಿ ವೆಚ್ಚದಲ್ಲಿ 21 ಕಡೆ ತಡೆಗೋಡೆ!
ನಿಯಮ ಗಾಳಿಗೆ ತೂರಿದ ಆರೋಗ್ಯ ಇಲಾಖೆ:
ಪ್ರತೀ ಡಯಾಲಿಸಿಸ್ ಕೇಂದ್ರದಲ್ಲಿ ಒಬ್ಬರು ವೈದ್ಯರು ಇರಲೇಬೇಕೆಂಬ ನಿಯಮವಿದೆ. ಆದರೆ ಇಲ್ಲಿ ನಿಯಮ ಸಂಪೂರ್ಣ ಗಾಳಿಗೆ ತೂರಲ್ಪಟ್ಟಿದೆ. ಈ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ್ ಕುಮಾರ್ ಅವರನ್ನು ಕೇಳಿದರೆ, ಜಿಲ್ಲೆಗೆ ಒಬ್ಬರು ಮೂತ್ರಪಿಂಡ ತಜ್ಞ ವೈದ್ಯರ ಹುದ್ದೆ ಇದ್ದು, ನೇಮಕಾತಿ ನಡೆದಿಲ್ಲ. ಡಯಾಲಿಸಿಸ್ ಕೇಂದ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿಭಾಯಿಸುತ್ತಿದ್ದು ಅವರು ವಾರದಲ್ಲಿ ಎರಡು ದಿನ ಒಂದು ಕೇಂದ್ರಕ್ಕೆ ಬಂದು ಹೋಗುತ್ತಿದ್ದಾರೆ ಎನ್ನುತ್ತಿದ್ದಾರೆ. ಆದರೆ ನಮಗೆ ಅದು ಮಾಹಿತಿ ಇಲ್ಲ ಎನ್ನುತ್ತಿದ್ದಾರೆ.
ಇದನ್ನೂ ಓದಿ: Kodagu News: ಕೊಡಗಿನಲ್ಲಿ ಮತ್ತೆ ಚಿಗುರಿದ 'ಏರ್ ಸ್ಟ್ರಿಪ್' ಕನಸು; ಕಾಮಗಾರಿ ಶೀಘ್ರ ಎಂದ ಸಂಸದ ಯದುವೀರ್ ಒಡೆಯರ್!
ಬಡವರು ಏನು ಮಾಡಬೇಕು?
ಡಯಾಲಿಸಿಸ್ ಮಾಡಿಸಿದ ಮೇಲೂ ಆರೋಗ್ಯದಲ್ಲಿ ಸಮಸ್ಯೆ ಎದುರಾದಾಗಲೆಲ್ಲಾ ಮೈಸೂರು ಅಥವಾ ಮಂಗಳೂರಿಗೆ ಹೋಗಿ ಬರುತ್ತಿರುವ ರೋಗಿಗಳ ಪರವಾಗಿ ಮಾತನಾಡಿರುವ ಲೀಲಾ ಶೇಷಮ್ಮ ಎಂಬುವವರು ಶ್ರೀಮಂತರಾದರೆ ಹೇಗೆ ನಿಭಾಯಿಸುತ್ತಾರೆ. ನಮ್ಮಂತಹ ಬಡವರು ಏನು ಮಾಡಬೇಕು. ಒಮ್ಮೆ ಮೈಸೂರು ಅಥವಾ ಮಂಗಳೂರಿಗೆ ಹೋಗಿ ಬರಬೇಕೆಂದರೆ ಕನಿಷ್ಠ ಐದರಿಂದ 10 ಸಾವಿರ ಖರ್ಚು ಮಾಡಬೇಕಾಗಿದೆ. ಈ ವೆಚ್ಚವನ್ನು ಬರಿಸುವುದು ನಮಗೆ ತೀವ್ರ ಕಷ್ಟದ ಪರಿಸ್ಥಿತಿ. ಹೀಗಾಗಿ ಸರ್ಕಾರ ಜಿಲ್ಲೆಗೆ ಒಬ್ಬರನ್ನಾದರೂ ಮೂತ್ರಪಿಂಡ ತಜ್ಞ ವೈದ್ಯರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಹಲವು ಕಾರಣಗಳಿಂದ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗಿದ್ದು ಅದಕ್ಕೆ ಮದ್ಯ ಹಾಗೂ ಧೂಮಪಾನ ಸೇವನೆಗಳೂ ಕಾರಣವಾಗಿವೆ. ಹೀಗಾಗಿ ಜನರು ಒಂದಿಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
