ಕೊಡಗಿನಲ್ಲಿ ಏರ್ ಸ್ಟ್ರಿಪ್ ನಿರ್ಮಾಣದ ಕನಸು ಮತ್ತೆ ಚಿಗುರೊಡೆದಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.11) : ಮೂವತ್ತಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿ, ಪ್ರಾಕೃತಿಕ ಸೌಂದರ್ಯದಿಂದಲೇ ಇಡೀ ಪ್ರಕೃತಿಯೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಕೊಡಗಿನ ಸಹಜ ಸುಂದರ ಪ್ರಕೃತಿ ತಾಣಗಳಿಗೆ ಮನಸೋಲದವರಿಲ್ಲ. ಇಲ್ಲಿನ ಪರಿಸರವನ್ನು ನೋಡುವುದಕ್ಕೆ ಹೊರ ಜಿಲ್ಲೆಗಳ ಪ್ರವಾಸಿಗರ ಜೊತೆಗೆ ಹೊರ ರಾಜ್ಯ ಮತ್ತು ಹೊರ ದೇಶಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
ಪ್ರವಾಸೋದ್ಯಮ ಇಲಾಖೆ ಮಾಹಿತಿ ಪ್ರಕಾರವೇ ಜಿಲ್ಲೆಗೆ ವಾರ್ಷಿಕ 15 ರಿಂದ 20 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ವರ್ಷದ ಕೊನೆ ಮತ್ತು ವರ್ಷದ ಆರಂಭದ ದಿನಗಳಲ್ಲಂತೂ ಒಂದೇ ತಿಂಗಳ ಅಂತರದಲ್ಲಿ ಕನಿಷ್ಠ 5 ರಿಂದ 6 ಲಕ್ಷ ಪ್ರವಾಸಿಗರು ಜಿಲ್ಲೆಗೆ ಬಂದು ಹೋಗುತ್ತಾರೆ. ಎಷ್ಟು ದೊಡ್ಡ ಪ್ರಮಾಣದ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ ಆದರೂ ಸಾರಿಗೆ ಸಂಪರ್ಕದ ವ್ಯವಸ್ಥೆ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿ ಇಲ್ಲ. ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಬರುವ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬರುವುದರಿಂದ ಅದರಲ್ಲಿ ಬಹುತೇಕರಿಗೆ ವಿಮಾನ ಯಾನದ ಸೌಲಭ್ಯವಿದೆಯೇ ಎಂದು ಗಮನಿಸುತ್ತಾರೆ. ವಿಪರ್ಯಾಸವೆಂದರೆ ಈ ಜಿಲ್ಲೆಗೆ ವಿಮಾನಯಾನದ ಸೌಲಭ್ಯವೇ ಇಲ್ಲ. ವಿಮಾನಯಾನದ ಸೌಲಭ್ಯದ ಮಾತಿರಲಿ, ಕನಿಷ್ಠ ರೈಲು ಸಂಪರ್ಕದ ಸೌಲಭ್ಯವೂ ಇಲ್ಲ. ರಾಜ್ಯದಲ್ಲಿ ರೈಲು ಸಂಪರ್ಕವೇ ಇಲ್ಲದ ಏಕೈಕ ಜಿಲ್ಲೆಯೆಂದರೆ ಅದು ಕೊಡಗು ಜಿಲ್ಲೆ ಮಾತ್ರ.
ಇದನ್ನೂ ಓದಿ: ಸಿದ್ದರಾಮಯ್ಯನವರು ಮಂಡಿಸಿದ್ದು ಅಲ್ಪಸಂಖ್ಯಾತರ ಓಲೈಕೆಯ ಬಜೆಟ್: ಸಂಸದ ಯದುವೀರ್ ಒಡೆಯರ್ ಟೀಕೆ
ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆಯಾದರೂ ಸಾರಿಗೆ ಸಂಪರ್ಕದ ಸೌಲಭ್ಯ ಅಷ್ಟರ ಮಟ್ಟಿಗೆ ಇಲ್ಲದ ಕಾರಣ ಅಂತರಾಜ್ಯ ಮತ್ತು ವಿದೇಶಿ ಪ್ರವಾಸಿಗರು ಒಂದಿಷ್ಟು ಸಮಸ್ಯೆ ಅನುಭವಿಸುತ್ತಿರುವುದಂತು ಸತ್ಯ. ಇದು ಕೊಡಗಿನ ಪ್ರವಾಸೋದ್ಯಮದ ಬೆಳವಣಿಗೆಯ ಮೇಲೆ ಒಂದಿಷ್ಟು ದುಷ್ಪರಿಣಾಮ ಬೀರುತ್ತಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಕಳೆದ 12 ರಿಂದ 15 ವರ್ಷಗಳ ಹಿಂದಿನಿಂದಲೂ ಕೊಡಗು ಜಿಲ್ಲೆಗೆ ಮಿನಿ ಏರ್ಪೋರ್ಟ್ ಬೇಕೆಂಬ ದೊಡ್ಡ ಬೇಡಿಕೆ ಇದೆ. ಹೀಗಾಗಿ ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡಿಗೆ ಬಳಿ ಇರುವ ಕೃಷಿ ಫಾರಂಗೆ ಸೇರಿದ ಜಾಗದಲ್ಲಿ ಮಿನಿ ಏರ್ಪೋರ್ಟ್ ಅಥವಾ ಏರ್ ಸ್ಟ್ರಿಪ್ ಮಾಡಲು ಚಿಂತಿಸಲಾಗಿತ್ತು. ಕೇಂದ್ರ ವಿಮಾನ ಸಚಿವಾಲಯದ ಕೆಲವು ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಅದಾದ ಬಳಿಕ ದಶಕಗಳ ಕಾಲ ನನೆಗುದಿಗೆ ಬಿದ್ದಿತ್ತು.
ಇದೀಗ ಕೇಂದ್ರ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹಲ್ ಅವರು ಕುಶಾಲನಗರದಲ್ಲಿ ಏರ್ ಸ್ಟ್ರಿಪ್ ಮಾಡಲು ಚಿಂತಿಸಲಾಗಿದೆ ಎಂದು ಅಧಿಕೃತವಾಗಿ ಲೋಕಸಭಾ ಅಧಿವೇಶನದಲ್ಲಿಯೇ ಮಾಹಿತಿ ನೀಡಿದ್ದಾರೆ. ಹೀಗಾಗಿ ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ಏರ್ ಸ್ಟ್ರಿಪ್ ಕನಸು ಸಾಕಾರಗೊಳ್ಳುವ ಸಾಧ್ಯತೆ ಇದೆ. ಈ ಕುರಿತು ಮಾತನಾಡಿರುವ ಸಂಸದ ಯದುವೀರ್ ಒಡೆಯರ್ ಕೂಡ ಉಡಾನ್ ಯೋಜನೆ ಅಡಿಯಲ್ಲಿ ಕಾಮಗಾರಿ ಮಾಡುವುದಕ್ಕೆ ಈಗಾಗಲೇ ನಿರ್ಧರಿಸಲಾಗಿದೆ. ಆದರೆ ಸ್ಥಳ ಯಾವುದು ಎನ್ನುವ ಒಂದಿಷ್ಟು ಗೊಂದಲವಿದೆ. ಇದಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾಡಳಿತ ಅಂತಿಮ ನಿರ್ಧಾರ ಮಾಡಲಿದೆ ಎಂದಿದ್ದಾರೆ.
ಇದನ್ನೂ ಓದಿ: 'ಸಿನಿಮಾ ನಟರು ಯಾವ ಪಕ್ಷಕ್ಕೂ ಸೇರಿದವರಲ್ಲ..'; ಡಿಕೆ ಶಿವಕುಮಾರ ಅವರ ಹೇಳಿಕೆಗೆ ಸಂಸದ ಯದುವೀರ್ ಒಡೆಯರ್ ಖಂಡನೆ
ಕೂಡಿಗೆ ಸಮೀಪದಲ್ಲಿ ಗುರುತ್ತಿಸಿರುವ ಜಾಗವನ್ನು ಈಗಾಗಲೇ ಗುರುತ್ತಿಸಿದ್ದು, ಇದು ಸೂಕ್ತವಲ್ಲದಿದ್ದರೆ ಕೊಡಗು ವಿಶ್ವ ವಿದ್ಯಾಲಯ ಇರುವ ಅಳುವಾರದ ಪಕ್ಕದಲ್ಲಿ 130 ಎಕರೆ ಜಾಗವಿದ್ದು ಅದರಲ್ಲಾದರೂ ಏರ್ ಸ್ಟ್ರಿಪ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಹಲವು ವರ್ಷಗಳ ಕನಸು ಕೊನೆಗೂ ಸಾಕಾರಗೊಳ್ಳುವ ಸಂದರ್ಭ ಎದುರಾಗುತ್ತಿದೆ. ಒಂದು ವೇಳೆ ಏರ್ ಸ್ಟ್ರಿಪ್ ಆಗಿದ್ದೇ ಆದಲ್ಲಿ ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗುವುದಂತು ಸತ್ಯ.
