ಕೌಟುಂಬಿಕ ಕಲಹದ ದೂರು ನೀಡಲು ಬಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ರಾಜ್ಯ ಮಹಿಳಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿದೆ. ಸಂತ್ರಸ್ತೆಯರಿಗೆ ರಕ್ಷಣೆ ನೀಡಲು ಸೂಚಿಸಲಾಗಿದ್ದು, ಆರೋಪಿ ಇನ್ಸ್‌ಪೆಕ್ಟರ್‌ನ ಅಮಾನತಿಗೆ ಆಯೋಗ ಆಗ್ರಹಿಸಿದೆ.

ಬೆಂಗಳೂರು/ದಕ್ಷಿಣ ಕನ್ನಡ (ಮಾ.17): ಕೌಟುಂಬಿಕ ಕಲಹದ ವಿಚಾರಕ್ಕೆ ದೂರು ನೀಡಲು ಬಂದ ಮಹಿಳೆಯರನ್ನು ಅಸಭ್ಯವಾಗಿ ಮಂಚಕ್ಕೆ ಕರೆಯುತ್ತಿದ್ದ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಈಗ ರಾಜ್ಯ ಮಹಿಳಾ ಆಯೋಗವು ಸಿಡಿದೆದ್ದಿದೆ. 'ಸಂತ್ರಸ್ತೆಯರು ಈಗ ನನಗೂ ದೂರು ನೀಡಿದ್ದಾರೆ. ಈ ಪ್ರಕರಣವನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದೇವೆ. ಮಂಗಳೂರು ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡಿದ್ದು, ತಕ್ಷಣವೇ ಕ್ರಮ ಕೈಗೊಳ್ಳಲು ಪತ್ರ ಬರೆದಿದ್ದೇನೆ' ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದರು.

Add Asianetnews Kannada as a Preferred SourcegooglePreferred

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ, ಇಂದು ಬೆಳಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಈ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ್ದೇನೆ. ಗೃಹ ಸಚಿವರು ಈ ಬಗ್ಗೆ ತಕ್ಷಣ ತನಿಖಾ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪೊಲೀಸರೇ ಸುಮೋಟೋ ಕೇಸ್ ದಾಖಲಿಸಿಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೂ ಅರೋಪಿ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಬೇಕು ಅಥವಾ ಅಲ್ಲಿಂದ ವರ್ಗಾವಣೆ ಮಾಡಬೇಕು' ಎಂದು ಆಗ್ರಹಿಸಲಾಗಿದೆ ಎಮದು ತಿಳಿಸಿದರು.

ಸಂತ್ರಸ್ತೆಯರಿಗೆ ರಕ್ಷಣೆ:

ಸದ್ಯ ಸಂತ್ರಸ್ತ ಮಹಿಳೆಯರು ಜೀವ ಭಯದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಲು ಮಂಗಳೂರು ಕಮಿಷನರ್‌ಗೆ ಸೂಚನೆ ನೀಡಲಾಗಿದೆ. 'ಸಂತ್ರಸ್ತೆಯ ಮಗನ ಮೇಲೆ ಹಲ್ಲೆ ಮಾಡಲು ಪೊಲೀಸ್ ಅಧಿಕಾರಿಗೆ ಯಾವುದೇ ಹಕ್ಕಿಲ್ಲ. ಈ ಪ್ರಕರಣದ ಬಗ್ಗೆ ಎರಡು ವಾರದೊಳಗೆ ಸಂಪೂರ್ಣ ವರದಿ ನೀಡುವಂತೆ ಕಮಿಷನರ್ ಅವರಿಗೆ ತಿಳಿಸಿದ್ದೇನೆ. ನಾನು ಸದಾ ಸಂತ್ರಸ್ತೆಯರ ಪರವಾಗಿರುತ್ತೇನೆ. ಇನ್ಸ್‌ಪೆಕ್ಟರ್ ಸಂದೇಶ್‌ರಿಂದ ಬೇರೆ ಯಾರಾದರೂ ಶೋಷಣೆಗೆ ಒಳಗಾಗಿದ್ದರೆ ಅವರು ಧೈರ್ಯವಾಗಿ ಬಂದು ದೂರು ನೀಡಲಿ' ಎಂದು ನಾಗಲಕ್ಷ್ಮೀ ಚೌಧರಿ ಕರೆ ನೀಡಿದ್ದಾರೆ.

ಗಂಭೀರ ಆರೋಪಗಳ ಸುರಿಮಳೆ:

ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಸಂತ್ರಸ್ತ ಮಹಿಳೆಯರು ಅತ್ಯಂತ ಭೀಕರ ಆರೋಪಗಳನ್ನು ಮಾಡಿದ್ದಾರೆ. ಕೌಟುಂಬಿಕ ಸಮಸ್ಯೆಗೆ ನ್ಯಾಯ ಕೇಳಲು ಹೋದರೆ, ಅದಕ್ಕೆ ಪ್ರತಿಯಾಗಿ ಲೈಂಗಿಕ ಸುಖಕ್ಕೆ ಬೇಡಿಕೆ ಇಡುತ್ತಿದ್ದರು ಎಂಬುದು ಪ್ರಮುಖ ಆರೋಪ. ಅಷ್ಟೇ ಅಲ್ಲದೆ, ಗಂಡನನ್ನು ಬಂಧಿಸಿ ಬಳಿಕ ಅವರನ್ನು ಬಿಡುಗಡೆ ಮಾಡಲು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಸಂತ್ರಸ್ತೆಯ ಮಗನ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂಬ ದೂರು ಕೇಳಿಬಂದಿದೆ. ಈ ಪ್ರಕರಣವು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ಉನ್ನತ ಅಧಿಕಾರಿಗಳ ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಬರಬೇಕಿದೆ.