ಮೊಟ್ಟೆಗಳಲ್ಲಿ ಕ್ಯಾನ್ಸರ್-ಕಾರಕ ಅಂಶವಿದೆ ಎಂಬ ವೈರಲ್ ವಿಡಿಯೋ ಹಿನ್ನೆಲೆಯಲ್ಲಿ, ರಾಜ್ಯ ಆರೋಗ್ಯ ಇಲಾಖೆಯು 200ಕ್ಕೂ ಹೆಚ್ಚು ಮೊಟ್ಟೆ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ. ಸಚಿವ ದಿನೇಶ್ ಗುಂಡೂರಾವ್ ಅವರು ವರದಿ ಬರುವವರೆಗೆ ಸಾರ್ವಜನಿಕರು ಆತಂಕಪಡಬೇಕಾಗಿಲ್ಲ ಎಂದು ಭರವಸೆ ನೀಡಿದ್ದಾರೆ.
ಬೆಂಗಳೂರು (ಡಿ.15): ರಾಜ್ಯದಲ್ಲಿ ಮೊಟ್ಟೆಗಳ ಕುರಿತಂತೆ ಹಬ್ಬಿರುವ ಆತಂಕದ ನಡುವೆ, ಆರೋಗ್ಯ ಮತ್ತು ಆಹಾರ ಗುಣಮಟ್ಟ ಇಲಾಖೆಯು ಸತ್ಯಾಂಶವನ್ನು ಹೊರತರಲು ಕಾರ್ಯಪ್ರವೃತ್ತವಾಗಿದೆ. ಮೊಟ್ಟೆಗಳಲ್ಲಿ 'ಕ್ಯಾನ್ಸರ್-ಕಾರಕ ಜಿನೋಟಾಕ್ಸಿಕ್' ಅಂಶವಿದೆ ಎಂದು ಪ್ರತಿಪಾದಿಸುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಬೇರೆ ಬೇರೆ ಬ್ರ್ಯಾಂಡ್‌ಗಳ 200ಕ್ಕೂ ಹೆಚ್ಚು ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ರಾಜ್ಯ ಸರ್ಕಾರದ ಆಹಾರ ಮತ್ತು ಗುಣಮಟ್ಟ ಇಲಾಖೆಯು ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಅರಿಯಲು ತಕ್ಷಣವೇ ಕ್ರಮಕ್ಕೆ ಮುಂದಾಯಿತು. ರಾಜ್ಯಾದ್ಯಂತ ಸ್ಯಾಂಪಲ್ ಕಲೆಕ್ಷನ್ ಕಾರ್ಯ ಶುರುವಾಗಿದ್ದು, ಒಟ್ಟು 200ಕ್ಕೂ ಅಧಿಕ ಮೊಟ್ಟೆ ಮಾದರಿಗಳನ್ನು ಸಂಗ್ರಹಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ 50ಕ್ಕೂ ಹೆಚ್ಚು ಸ್ಯಾಂಪಲ್‌ಗಳನ್ನು ಕಲೆಕ್ಟ್ ಮಾಡಲಾಗಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.
ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ:
ವಿಷಯದ ಗಂಭೀರತೆಯನ್ನು ಅರಿತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಮೊಟ್ಟೆಯಲ್ಲಿನ ಕ್ಯಾನ್ಸರ್-ಕಾರಕ ಅಂಶದ ಬಗ್ಗೆ ಹರಡಿದ ಸುದ್ದಿ ಹಾಗೂ ನಿರ್ದಿಷ್ಟವಾಗಿ 'ಎಗ್ಗೋಜ್' (Eggoz) ಕಂಪನಿಯ ಮೊಟ್ಟೆಗಳ ಕುರಿತ ವೈರಲ್ ವಿಡಿಯೋ ಕುರಿತು ಸ್ಪಷ್ಟನೆ ನೀಡಿದ್ದಾರೆ. ಮೊನ್ನೆ 'ಎಗ್ಗೋಜ್' ಕಂಪನಿ ಮೊಟ್ಟೆಯ ಉಪಯೋಗ ಮಾಡಬಾರದು ಅಂತ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಸ್ಪಷ್ಟವಾದ ವಿಚಾರ ತಿಳಿದುಕೊಳ್ಳಲು ನಮ್ಮ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈಗಾಗಲೇ ಸ್ಯಾಂಪಲ್‌ಗಳನ್ನ ತೆಗೆದುಕೊಂಡಿದ್ದೇವೆ. ಟೆಸ್ಟ್ ಮಾಡಿದ ಬಳಿಕ ವಿಚಾರ ತಿಳಿಸುತ್ತೇನೆ. ಸದ್ಯಕ್ಕೆ ಸಾರ್ವಜನಿಕರು ಆತಂಕ ಪಡೆಯಬೇಕಾಗಿಲ್ಲ' ಎಂದು ಸಚಿವರು ಭರವಸೆ ನೀಡಿದ್ದಾರೆ.
ಹಿಂದಿನ ಪರೀಕ್ಷಾ ವರದಿಗಳು:
ಇದೇ ವೇಳೆ, ಮೊಟ್ಟೆಗಳ ಗುಣಮಟ್ಟ ಪರೀಕ್ಷೆಯ ಹಿಂದಿನ ಪ್ರಯತ್ನಗಳ ಕುರಿತು ಸಚಿವರು ಮಾಹಿತಿ ನೀಡಿದರು. 'ಈ ಹಿಂದೆ ನಾವು 124 ಮೊಟ್ಟೆ ಸ್ಯಾಂಪಲ್‌ಗಳನ್ನು ತೆಗೆದುಕೊಂಡು ಟೆಸ್ಟ್ ಮಾಡಿದ್ದೆವು. ಆ 124ರಲ್ಲಿ 123 ಮೊಟ್ಟೆಗಳ ಗುಣಮಟ್ಟ ಚೆನ್ನಾಗಿತ್ತು. ಒಂದು ಮೊಟ್ಟೆಯ ಗುಣಮಟ್ಟ ಮಾತ್ರ ಚೆನ್ನಾಗಿರಲಿಲ್ಲ. ಆದರೆ, ಈಗಿನ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಮತ್ತೊಮ್ಮೆ ಎಚ್ಚೆತ್ತುಕೊಂಡಿದ್ದೇವೆ. ವಿಶೇಷವಾಗಿ ವೈರಲ್ ವಿಡಿಯೋದಲ್ಲಿ ಉಲ್ಲೇಖಿಸಲಾದ 'ಎಗ್ಗೋಜ್' ಕಂಪನಿಯ ಮೊಟ್ಟೆಗಳ ಮಾದರಿಗಳನ್ನು ಸಹ ಪಡೆದು ಟೆಸ್ಟಿಂಗ್‌ಗೆ ಕಳುಹಿಸಲಾಗಿದೆ' ಎಂದು ತಿಳಿಸಿದರು.
ಸದ್ಯ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಇಲಾಖೆಯು ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಿದೆ. ಆವರೆಗೆ ಸಾರ್ವಜನಿಕರು ಆತಂಕಪಡದೆ ವರದಿಗಾಗಿ ಕಾಯುವಂತೆ ಸಚಿವರು ಮನವಿ ಮಾಡಿದ್ದಾರೆ. ಆಹಾರ ಸುರಕ್ಷತೆಯ ವಿಚಾರದಲ್ಲಿ ಇಲಾಖೆಯು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.



