ವ್ಯಾಜ್ಯವೊಂದರ ಸಂಬಂಧ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲರ ಸಹಿ ಫೋರ್ಜರಿ ಮಾಡಿ ಆಕ್ಷೇಪಣೆ ಪ್ರತಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವ್ಯಕ್ತಿಗೆ ನ್ಯಾಯಾಂಗ ನಿಂದನೆ ಆಪರಾಧದಡಿ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್‌ ಆದೇಶಿಸಿದೆ.

ವಿಶೇಷ ವರದಿ

ಬೆಂಗಳೂರು (ಡಿ.15): ವ್ಯಾಜ್ಯವೊಂದರ ಸಂಬಂಧ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲರ ಸಹಿ ಫೋರ್ಜರಿ ಮಾಡಿ ಆಕ್ಷೇಪಣೆ ಪ್ರತಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವ್ಯಕ್ತಿಗೆ ನ್ಯಾಯಾಂಗ ನಿಂದನೆ ಆಪರಾಧದಡಿ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್‌ ಆದೇಶಿಸಿದೆ. ಕೋರಮಂಗಲದ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್‌ ಸಂಸ್ಥೆಯ (ಐಐಎ) 2ನೇ ಬ್ಲಾಕ್‌ ನಿವಾಸಿ ಕೆ.ಧನಂಜಯ (48) ಶಿಕ್ಷೆಗೆ ಗುರಿಯಾದ ಅಪರಾಧಿ.

ಪ್ರಕರಣ ಸಂಬಂಧ ಹೈಕೊರ್ಟ್‌ ರಿಜಿಸ್ಟ್ರಾರ್‌ ಜನರಲ್‌ ದಾಖಲಿಸಿದ್ದ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಅನು ಶಿವರಾಮನ್‌ ಮತ್ತು ನ್ಯಾಯಮೂರ್ತಿ ವಿಜಯ ಕುಮಾರ ಎ.ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಕೇಂದ್ರ ಸರ್ಕಾರದ ಪರ ಹಾಜರಾಗುತ್ತಿದ್ದ ವಕೀಲ ಎಲ್‌.ಹರೀಶ್‌ ಕುಮಾರ್‌ ಅವರ ಸಹಿಯನ್ನು ಧನಂಜಯ ಫೋರ್ಜರಿ ಮಾಡಿದ್ದಾರೆ. ಅವರ ಹೆಸರಿನಲ್ಲಿ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಕೃತ್ಯ ನ್ಯಾಯಾಂಗ ನಿಂದನೆ ಅಪರಾಧವಾಗಿದ್ದು, ದೋಷಿಗೆ ನಾಲ್ಕು ತಿಂಗಳ ಸಾಧಾರಣ ಜೈಲು ಶಿಕ್ಷೆ ಮತ್ತು 2 ಸಾವಿರ ರು. ದಂಡ ವಿಧಿಸಲಾಗುತ್ತಿದೆ ಎಂದು ಆದೇಶಿಸಿತು. ಇದರಿಂದ ಧನಂಜಯ ಜೈಲು ಪಾಲಾಗಿದ್ದಾರೆ.

ಪ್ರಕರಣವೇನು?

ವ್ಯಾಜ್ಯವೊಂದರ ಸಂಬಂಧ ಧನಂಜಯ ಸಲ್ಲಿಸಿದ್ದ ಅರ್ಜಿ ಕುರಿತು 2014ರ ಜ.21ರಂದು ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಮೂಲ ಅರ್ಜಿಯಲ್ಲಿ ಪ್ರತಿವಾದಿಯಾಗಿದ್ದ ಸರ್ಜಾಪುರದ ಐಐಎ ಸಂಸ್ಥೆಯ ಆಡಳಿತಾಧಿಕಾರಿ, ಹೈಕೋರ್ಟ್‌ಗೆ 2014ರಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಧನಂಜಯ ಮೊದಲ ಪ್ರತಿವಾದಿಯಾಗಿದ್ದರೆ, ಐಐಎ ಅಧ್ಯಕ್ಷರು ಮತ್ತು ಕೇಂದ್ರ ಸರ್ಕಾರದ ವಿಜ್ಞಾನ, ತಂತ್ರಜ್ಞಾನ ಇಲಾಖೆ 2, 3ನೇ ಪ್ರತಿವಾದಿಗಳಾಗಿದ್ದರು.

2019ರ ಮಾರ್ಚ್‌ನಲ್ಲಿ ಧನಂಜಯ, ಅರ್ಜಿ ಸಂಬಂಧ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಎಲ್‌.ಹರೀಶ್‌ ಕುಮಾರ್‌ ಅವರ ಹೆಸರು ಮತ್ತು ಫೋರ್ಜರಿ ಮಾಡಿ, ತಾವೇ ಕೇಂದ್ರ ಸರ್ಕಾರದ ಪರ ಆಕ್ಷೇಪಣೆ ಸಿದ್ಧಪಡಿಸಿದ್ದರು. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ವಿಚಾರ ಕೋರ್ಟ್‌ ಗಮನಕ್ಕೆ ಬಂದಿತ್ತು. ಆಗ ಹರೀಶ್‌ ಕುಮಾರ್‌, ತಾವು ಕೇಂದ್ರ ಸರ್ಕಾರದ ಪರ ಯಾವುದೇ ಆಕ್ಷೇಪಣೆ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ತಿಳಿಸಿದ್ದರು. ಇದರಿಂದ ಹೈಕೋರ್ಟ್‌ ಸೂಚನೆಯಂತೆ ರಿಜಿಸ್ಟ್ರಾರ್‌ ಜನರಲ್‌ ಧನಂಜಯ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ರಿಜಿಸ್ಟ್ರಾರ್‌ ಜನರಲ್‌ ಪರ ಸರ್ಕಾರಿ ಅಭಿಯೋಜಕ ಪಿ.ತೇಜೇಶ್‌, ಧನಂಜಯ ಕೃತ್ಯವನ್ನು ದಾಖಲೆ ಸಹಿತ ಸಾಬೀತುಪಡಿಸಿದ್ದರು.