Naxal Surrender ತಮಿಳುನಾಡು ಪೊಲೀಸರಿಗೆ ಶರಣಾದ ನಕ್ಸಲ್ ಆಗಂಬೆಯ ಹೊಸಗದ್ದೆ ಪ್ರಭಾ ಯಾರು?

  • ಕೃಷ್ಣಮೂರ್ತಿ ಬಳಿಕ ಈಗ ಪತ್ನಿಯೂ ಪೊಲೀಸರಿಗೆ ಶರಣು
  • 40ಕ್ಕೂ ಅಧಿಕ ಪ್ರಕರಣಗಳಿರುವ ಮಾವೋವಾದಿ ಹೋರಾಟಗಾರ್ತಿ
  • ತಮಿಳುನಾಡು ಪೊಲೀಸರಿಗೆ ಶರಣಾದ ಪ್ರಭಾ
     
Karnataka Naxalite leader hosagadde prabha surrender to Tamil nadu police ckm

ಬೆಂಗಳೂರು(ಡಿ.20):  ಕಳೆದ 20 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಾಡುಮೇಡು ಅಲೆಯುತ್ತ ನಕ್ಸಲ್‌ (Naxal)ಸಂಘಟನೆಯನ್ನು ಬಲಗೊಳಿಸುತ್ತಿದ್ದ ಬಿ.ಜಿ.ಕೃಷ್ಣಮೂರ್ತಿ ಕೇರಳ ಪೊಲೀಸರ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದಿದ್ದ. ಅದರ ಬೆನ್ನಲ್ಲೇ ಈಗ ಕೃಷ್ಣಮೂರ್ತಿ ಪತ್ನಿ ಎನ್ನಲಾದ ಹೊಸಗದ್ದೆ ಪ್ರಭಾ(hosagadde prabha) ಅಲಿಯಾಸ್‌ ಸಂಧ್ಯಾ ತಮಿಳುನಾಡಿನ ಪೊಲೀಸರಿಗೆ(Tamil Nadu police) ಶರಣಾಗಿದ್ದಾಳೆ. ಈ ಮೂಲಕ ಮಲೆನಾಡಿನ ನಕ್ಸಲ್‌ನ ಕೊನೆಯ ಕೊಂಡಿ ಕಳಚಿಬಿದ್ದಂತಾಗಿದೆ.

ಹೊಸಗದ್ದೆ ಪ್ರಭಾ ಯಾರು?
ಆಗುಂಬೆ ಸಮೀಪದ ಹೊಸಗೆದ್ದೆಯ(Hosagadee,Agumbe) ಪ್ರಭಾ ಬಡಕುಟುಂಬದಿಂದ ಬಂದವಳು. ಸಮಾಜದಲ್ಲಿ ನಡೆಯುತ್ತಿದ್ದ ಅಸಮಾನತೆ, ಶೋಷಣೆ ನೋಡುತ್ತ ಎಡಪಂಥೀಯ ಚಳವಳಿಯತ್ತ ಸೆಳೆಯಲ್ಪಟ್ಟಳು.ಬಳಿಕ ವಿವಿಧ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಪ್ರಭಾ ನಿಧಾನವಾಗಿ ನಕ್ಸಲ್‌ ಪ್ರಭಾವಕ್ಕೆ ಒಳಗಾದಳು. ಇದ್ದಕ್ಕಿದ್ದಂತೆ ಮುಖ್ಯವಾಹಿನಿಯಿಂದ ಮಾಯವಾದ ಈಕೆ ಬಳಿಕ ಕಾಣಿಸಿಕೊಂಡಿದ್ದು ಮಲೆನಾಡಿನ ಕಾಡುಗಳಲ್ಲಿನ ನಕ್ಸಲ್‌ ಹೋರಾಟದಲ್ಲಿ. ಅಲ್ಲಿ ಪ್ರಭಾವಿ ನಾಯಕಿಯಾಗಿ ಬೆಳೆದ ಪ್ರಭಾ ಅಲ್ಲಿದ್ದಾಗಲೇ ನಕ್ಸಲ್‌ ಹೋರಾಟದ ಮುಂಚೂಣಿಯಲ್ಲಿದ್ದ ಬಿ.ಜಿ. ಕೃಷ್ಣಮೂರ್ತಿ(bg krishnamurthy) ಅವರನ್ನು ಮದುವೆಯಾಗುತ್ತಾರೆ.

Chikkamagaluru : ಮುಖ್ಯವಾಹಿಯತ್ತ ಬರಲು ನಕ್ಸಲರ ಒಲವು, ವೇದಿಕೆಯೇ ಇಲ್ಲವಾಗಿದೆ

ನಕ್ಸಲ್‌ ಹೋರಾಟದಲ್ಲಿ ಗುರುತಿಸಿಕೊಂಡ ಅನೇಕ ಘಟಾನುಘಟಿಗಳೇ ಶರಣಾದರೂ ಈಕೆ ಮಾತ್ರ ಶರಣಾಗಿರಲಿಲ್ಲ. ಪತಿ ಬಿ.ಜಿ. ಕೃಷ್ಣಮೂರ್ತಿ ಹಾದಿಯಲ್ಲಿಯೇ ಸಾಗಿದ್ದ ಈಕೆ ನಕ್ಸಲ್‌ ಹೋರಾಟವನ್ನು ಮುಂದುವರಿಸಿದ್ದರು. ಆದರೆ, ಯಾವಾಗ ಕೇರಳದ ವಯನಾಡು ಪೊಲೀಸರು ಬಿ.ಜಿ. ಕೃಷ್ಣಮೂರ್ತಿಯನ್ನು ಬಂಧಿಸಿದರೋ ಆಗ ಈಕೆ ನಿಜಕ್ಕೂ ಕುಸಿದು ಹೋಗಿದ್ದಳು. ತನ್ನ ಪತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಈಕೆ ಇದೊಂದು ವಿಚಾರದಲ್ಲಿ ನಕ್ಸಲ್‌ ಸಿದ್ಧಾಂತದಿಂದ ದೂರವಾಗಿದ್ದಳು ಎನ್ನಲಾಗುತ್ತಿದೆ.

ಪತಿ ನಕ್ಸಲ್‌ ಮುಖಂಡ ಬಿ.ಜಿ. ಕೃಷ್ಣಮೂರ್ತಿ ಬಂಧನದ ಬೆನ್ನಲ್ಲೇ ಪತ್ನಿ ಹೊಸಗದ್ದೆ ಪ್ರಭಾ ತಮಿಳುನಾಡು ವೆಲ್ಲೂರು ಪೊಲೀಸರಿಗೆ ಶರಣಾಗತಿ ಆಗಿದ್ದಾಳೆ. ಪತಿ ಬಂಧನದ ನಂತರ ಮಾನಸಿಕ ಖಿನ್ನತೆಗೊಳಗಾಗಿದ್ದ ಹೊಸಗದ್ದೆ ಪ್ರಭಾ ಅನಾರೋಗ್ಯದಿಂದ ಬಳಲುತ್ತಿದ್ದಳು. ಪತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರಭಾ, ಕೃಷ್ಣಮೂರ್ತಿ ಬಂಧನದ ಬೆನ್ನಲ್ಲೆ ತಾನೂ ಪೊಲೀಸರಿಗೆ ಶರಣಾಗಿದ್ದಾಳೆ ಎಂಬುದು ಕೇಳಿಬರುತ್ತಿರುವ ಮಾತುಗಳು.

ಕಾಸರಗೋಡಿನ ಮಧೂರಲ್ಲಿ ಸೆರೆಸಿಕ್ಕ ನಕ್ಸಲ್‌ ಕೃಷ್ಣಮೂರ್ತಿ!

2010ರಲ್ಲಿ ಪ್ರಭಾ ಸಾವೆಂಬ ಸುದ್ದಿ:
2010 ರಲ್ಲಿ ನಕ್ಸಲ್‌ ಪ್ರಭಾ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಗ್ರಾಮದ ಮುಖಂಡರೊಬ್ಬರಿಗೆ ಪ್ರಭಾ ಸಾವನ್ನಪ್ಪಿದ್ದಾಳೆ. ಈಕೆಗೆ ಶ್ರದ್ಧಾಂಜಲಿ ಅರ್ಪಿಸಿ ಎಂದು ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆ ಮಾಡಿದ್ದರು. ಹೀಗಾಗಿ, ಅಂದು ಗ್ರಾಮಸ್ಥರೆಲ್ಲಾ ಪ್ರಭಾ ಮನೆ ಮುಂದೆ ಜಮಾಯಿಸಿದ್ದರು. ಪೊಲೀಸರು ಕೂಡ ಪ್ರಭಾ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಏಕೆಂದರೆ ಆಕೆ ಎಲ್ಲಿಯೂ ಕಾಣಸಿಕ್ಕಿರಲಿಲ್ಲ. ಆದರೆ, ಆಕೆಯ ಶವ ಸಿಗದೇ ಸಾವನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಆಗಿನ ಎಸ್‌ಪಿ ಮುರುಗನ್‌ ಹೇಳಿದ್ದರು.

ಆದರೆ, ನಕ್ಸಲ್‌ ಪ್ರಭಾ ಕೇರಳದಲ್ಲಿ ನಕ್ಸಲ್‌ ಸಂಘಟನೆಯಲ್ಲಿ ಸಕ್ರಿಯಳಾಗಿರುವ ಬಗ್ಗೆ ಇತ್ತೀಚೆಗೆ ಪೊಲೀಸರಿಗೆ ಮಾಹಿತಿ ದಟ್ಟವಾಗಿ ಸಿಕ್ಕಿತ್ತು. ಪತಿ ಬಿ.ಜಿ. ಕೃಷ್ಣಮೂರ್ತಿ, ಪ್ರಭಾ, ಸಾವಿತ್ರಿ, ವಿಕ್ರಂ ಗೌಡ ಸೇರಿದಂತೆ ಮಲೆನಾಡಿನ ನಕ್ಸಲರೆಲ್ಲರೂ ಕೇರಳದಲ್ಲಿ ಆಶ್ರಯ ಪಡೆದಿದ್ದರು.

ಹತ ನಕ್ಸಲ್ ನಾಯಕ ತೇಲ್ತುಂಬ್ಡೆ ತಲೆಗಿತ್ತು 50 ಲಕ್ಷ ರೂಪಾಯಿ ಮೌಲ್ಯ

40ಕ್ಕೂ ಅಧಿಕ ಕೇಸ್‌:
ಹೊಸಗದ್ದೆ ಪ್ರಭಾ ವಿರುದ್ಧ ರಾಜ್ಯದಲ್ಲಿ 40ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಶಿವಮೊಗ್ಗದಲ್ಲಿ ತಲ್ಲೂರು ಅಂಗಡಿ ಬಸ್‌ ಸುಟ್ಟಪ್ರಕರಣ ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿದೆ. ಆಕೆಯನ್ನು ಹುಡುಕಿಕೊಟ್ಟವರಿಗೆ ಐದು ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಈ ಮೂಲಕ ಪ್ರಭಾ ಶರಣಾಗತಿಯ ಮೂಲಕ ಕಟ್ಟರ್‌ ನಕ್ಸಲರು ಕೂಡ ತಮ್ಮ ಹಾದಿಯಲ್ಲಿ ಯಶಸ್ಸು ಸಿಗದು ಎಂಬುದನ್ನು ಸ್ಪಷ್ಟವಾಗಿ ಮನಗಂಡಂತೆ ಕಾಣುತ್ತಿದೆ. ಅಥವಾ ಕೃಷ್ಣಮೂರ್ತಿಯ ಬಂಧನದ ನಂತರ ಹೋರಾಟದಲ್ಲಿ ಗಟ್ಟಿತನ ಸಿಗುವುದು ಸಾಧ್ಯವೇ ಇಲ್ಲ ಎಂದು ಖಚಿತ ನಿಲುವಿಗೆ ಬಂದಂತೆ ತೋರುತ್ತಿದೆ.

ಬಹುತೇಕ ಫುಲ್‌ಸ್ಟಾಪ್‌?:
ಹೊಸಗದ್ದೆ ಪ್ರಭಾ ಶರಣಾಗತಿಯ ಮೂಲಕ ಮಲೆನಾಡಿನ ನಕ್ಸಲ್‌ ಚಟುವಟಿಕೆಗೆ ಬಹುತೇಕ ಫುಲ್‌ಸ್ಟಾಪ್‌ ಬಿದ್ದಂತಾಗಿದೆ. ಆದರೆ ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ನಕ್ಸಲ್‌ ಬಿ.ಜಿ.ಕೃಷ್ಣಮೂರ್ತಿ ಕೇರಳದ ವæೖನಾಡು ಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆಯ ವೇಳೆ ಸೆರೆ ಸಿಕ್ಕರೆ, ಇತ್ತ ಆತನ ಸಂಗಾತಿ ಪ್ರಭಾ ತಮಿಳುನಾಡಿನ ಪೊಲೀಸರಿಗೆ ಶರಣಾಗಿದ್ದಾಳೆಂದರೆ ಈ ಇಬ್ಬರು ತಮ್ಮ ಸಂಗಾತಿಗಳೊಂದಿಗೆ ಕರ್ನಾಟಕ ತೊರೆದು ಬೇರೆ ಕಡೆ ಬೇರೂರಿ ಬಹಳ ಸಮಯವಾಗಿದೆ ಎಂಬುದು ಕೂಡ ಬೆಳಕಿಗೆ ಬಂದಂತಾಗಿದೆ.

ಪ್ರಭಾ 2010ರಿಂದ ಎಲ್ಲಿಯೂ ಪೊಲೀಸರಿಗೆ ಕಾಣಿಸಿರಲಿಲ್ಲ. ಹೀಗಾಗಿ, ಈಕೆ ಮೃತಳಾಗಿರಬೇಕು ಎಂದು ಭಾವಿಸಲಾಗಿತ್ತು. ಬಿ.ಜಿ.ಕೃಷ್ಣಮೂರ್ತಿಯ ಸೆರೆಯ ಬಳಿಕ ಸಾವಿತ್ರಿ ಎಂಬಾಕೆ ಇದ್ದುದನ್ನು ನೋಡಿದ ಹೊರಜಗತ್ತು ಈಕೆ ನಿಜಕ್ಕೂ ಇಲ್ಲ ಎಂದೇ ಭಾವಿಸಿತ್ತು. ಮಲೆನಾಡಿನ ಆರಂಭಿಕ ನಕ್ಸಲ್‌ ಚಳವಳಿಯಲ್ಲಿ ಕಾಣಿಸಿಕೊಂಡ ಸಿರಿಮನೆ ನಾಗರಾಜ್‌ ಮತ್ತಿತರರು ಶರಣಾಗತಿಯ ಮೂಲಕ ಮುಖ್ಯವಾಹಿನಿಗೆ ಬಂದ ಬಳಿಕವೂ ಬಿ.ಜಿ. ಕೃಷ್ಣಮೂರ್ತಿಯಾಗಲೀ ಅಥವಾ ಈತನ ಪತ್ನಿ ಎನ್ನಲಾದ ಹೊಸಗದ್ದೆ ಪ್ರಭಾ ಮತ್ತವರ ತಂಡವಾಗಲೀ ಶರಣಾಗತಿಗೆ ನಿರಾಕರಣೆ ಮಾಡಿ ತಮ್ಮ ನಕ್ಸಲ್‌ ಹಾದಿಯಲ್ಲಿಯೇ ಸಾಗಿತ್ತು. ಆದರೆ, ಏಕಾಏಕಿಯಾಗಿ ಈ ಹೊತ್ತಿನಲ್ಲಿ ಶರಣಾಗತಿ ಆಗುತ್ತಿದ್ದಾರೆಂದರೆ ಇದಕ್ಕೆ ನೇರವಾಗಿ ನಕ್ಸಲ್‌ ಬಿ.ಜಿ.ಕೃಷ್ಣಮೂರ್ತಿಯ ಬಂಧನವೇ ಕಾರಣ ಎನ್ನಲಾಗುತ್ತಿದೆ.

ಇನ್ನೊಂದೆಡೆ ಬಿ.ಜಿ.ಕೃಷ್ಣಮೂರ್ತಿಯ ಆರೋಗ್ಯದ ಕುರಿತು ಸಾಕಷ್ಟುವಿಷಯ ಹರಿದಾಡುತ್ತಿತ್ತು. ಆತ ತೀವ್ರ ಅಸ್ವಸ್ಥನಾಗಿದ್ದಾನೆ ಎಂಬ ಮಾತು ಕೇಳಿಬರುತ್ತಿತ್ತು. ಈತ ಮೃತಪಟ್ಟಿರಬಹುದು ಎಂಬ ಸುದ್ದಿಯೂ ಇತ್ತು. ಆದರೆ ಕೇರಳದಲ್ಲಿ ಆತ ಸೆರೆ ಸಿಕ್ಕಾಗಿನ ಫೋಟೋ ನೋಡಿದರೆ ಆರೋಗ್ಯವಾಗಿಯೇ ಇದ್ದಂತಿದೆ.

Latest Videos
Follow Us:
Download App:
  • android
  • ios