Asianet Suvarna News Asianet Suvarna News

BBMP Election: ಡಿ.31ರೊಳಗೆ ಪಾಲಿಕೆ ಎಲೆಕ್ಷನ್‌ ನಡೆಸಲು ಹೈಕೋರ್ಟ್‌ ಆದೇಶ

ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ರದ್ದುಪಡಿಸಿರುವ ಹೈಕೋರ್ಟ್‌, ಬರುವ ನವೆಂಬರ್‌ 30ರೊಳಗಾಗಿ ಹೊಸದಾಗಿ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಪ್ರಕಟಿಸಬೇಕು, ಡಿ.31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.

Karnataka High Court Directed State To Conduct Bbmp Election Before December 31 gvd
Author
First Published Oct 1, 2022, 5:36 AM IST

ಬೆಂಗಳೂರು (ಅ.01): ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ರದ್ದುಪಡಿಸಿರುವ ಹೈಕೋರ್ಟ್‌, ಬರುವ ನವೆಂಬರ್‌ 30ರೊಳಗಾಗಿ ಹೊಸದಾಗಿ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಪ್ರಕಟಿಸಬೇಕು, ಡಿ.31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಮೀಸಲು ನಿಗದಿಪಡಿಸಿ ಸರ್ಕಾರ ಆ.16ರಂದು ಹೊರಡಿಸಿದ ಅಧಿಸೂಚನೆ ರದ್ದುಪಡಿಸಲು ಕೋರಿ ಬೆಂಗಳೂರಿನ ಈಜಿಪುರದ ಕೆ.ಮಹದೇವ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಪೀಠ ಈ ಆದೇಶ ಮಾಡಿದೆ.

ರ್ಯಾಂಡಮ್‌ ಆಧಾರದ ಮೇಲೆ ಮಹಿಳೆಯರು ಮತ್ತು ಒಬಿಸಿಗೆ ಮೀಸಲು ನಿಗದಿಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ ಮೀಸಲಾತಿ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನಿಗದಿ ಮಾಡಿರುವುದರಿಂದ ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ನ್ಯಾಯಪೀಠ ಇದೇ ವೇಳೆ ತಿಳಿಸಿದೆ.

ಅ.3ರಿಂದ ಕರ್ನಾಟಕ ಹೈಕೋರ್ಟ್‌ಗೆ 5 ದಿನಗಳ ದಸರಾ ರಜೆ

16 ವಾರ ಕಾಲಾವಕಾಶ: ನೀಡಲು ಕೋರ್ಟ್‌ ನಕಾರ: ಅರ್ಜಿಯ ಹಿಂದಿನ ವಿಚಾರಣೆ ವೇಳೆ, ಕೆಲ ವಿಧಾನಸಭಾ ಕ್ಷೇತ್ರಗಳ ಎಲ್ಲ ವಾರ್ಡ್‌ ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಒಬಿಸಿ ಸೂಕ್ತ ಮೀಸಲು ನಿಗದಿ ಮಾಡಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಸರ್ಕಾರ ಸಹ ಹೊಸದಾಗಿ ಒಬಿಸಿಗೆ ಮೀಸಲು ನಿಗದಿಪಡಿಸಲು ಸಿದ್ಧವಿರುವುದಾಗಿ ತಿಳಿಸಿತ್ತು. ಅದನ್ನು ಪರಿಗಣಿಸಿದ್ದ ಹೈಕೋರ್ಟ್‌, ಹಾಲಿ ಮೀಸಲು ಅಧಿಸೂಚನೆ ರದ್ದುಪಡಿಸಿದರೆ, ಎಷ್ಟುದಿನದಲ್ಲಿ ಹೊಸದಾಗಿ ಮೀಸಲು ನಿಗದಿಪಡಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸೆ.28ರಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.

ಅದರಂತೆ ಶುಕ್ರವಾರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು, ಮೀಸಲಾತಿ ಮರು ನಿಗದಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎಚ್‌.ಎಸ್‌.ಶಿವಕುಮಾರ್‌ ಅವರು ಸಿದ್ಧಪಡಿಸಿದ್ದ ಪ್ರಮಾಣ ಪತ್ರವನ್ನು ಸಲ್ಲಿಸಿ, ಮೀಸಲಾತಿ ಮರು ನಿಗದಿಗೆ 16 ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಈ ಮನವಿಯನ್ನು ಒಪ್ಪದ ನ್ಯಾಯಪೀಠ, ಎಂಟು ವಾರ ಕಾಲಾವಕಾಶ ನೀಡಲಾಗುವುದು. ಒಂದು ತಿಂಗಳಲ್ಲಿ ನಿವೃತ್ತ ನ್ಯಾ.ಭಕ್ತವತ್ಸಲ ಆಯೋಗಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಕಲ್ಪಿಸಲು ಅಗತ್ಯವಾದ ನೈಜ ದತ್ತಾಂಶ ಒದಗಿಸಬೇಕು. ಆ ನಂತರ ಒಂದು ತಿಂಗಳ ಒಳಗೆ ಮೀಸಲಾತಿ ನಿಗದಿಪಡಿಸಿ, ಅಧಿಸೂಚನೆ ಪ್ರಕಟಿಸಬೇಕು. ಡಿ.31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ನಿರ್ದೇಶಿಸಿತು. ಜತೆಗೆ, ಈ ಆದೇಶ ಪಾಲನೆ ಕುರಿತು ತಿಳಿದುಕೊಳ್ಳಲು ನ.30ಕ್ಕೆ ಅರ್ಜಿಯನ್ನು ನ್ಯಾಯಾಲಯದ ಮುಂದೆ ನಿಗದಿಪಡಿಸಬೇಕು ಎಂದು ಸೂಚಿಸಿದೆ.

3 ವರ್ಷ ಬಳಿಕ ಪಾಲಿಕೆಗೆ ಚುನಾವಣೆಯ ಭಾಗ್ಯ: ಬಿಬಿಎಂಪಿ ಚುನಾಯಿತ ಸದಸ್ಯರ ಅವಧಿ 2019ರ ಸೆಪ್ಟೆಂಬರ್‌ಗೆ ಮುಗಿದ ನಂತರ ಚುನಾವಣೆ ನಡೆಸಲಿಲ್ಲ, ಹೀಗಾಗಿ ಕೆಲವು ಪಾಲಿಕೆ ಸದಸ್ಯರು ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ 2020ರ ಡಿ.4ರಂದು ಹೈಕೋರ್ಟ್‌ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿ 2020ರ ಡಿ.18ರಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ಚೆಕ್‌ಗಳಿಗೆ ಸಹಿ ಹಾಕಲು ಮುರುಘಾ ಶ್ರೀಗೆ ಷರತ್ತುಬದ್ಧ ಅನುಮತಿ

ಈ ನಡುವೆ ಒಬಿಸಿ ವರ್ಗಕ್ಕೆ ಮೀಸಲು ಕಲ್ಪಿಸುವ ಸಂಬಂಧ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿತ್ತು. ಮೀಸಲು ಮತ್ತು ವಾರ್ಡ್‌ ಮರು ವಿಂಗಡಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ಕೆಲವೊಂದು ಸ್ಪಷ್ಟನೆ ಪಡೆದುಕೊಂಡ ರಾಜ್ಯ ಸರ್ಕಾರ, ಬಿಬಿಎಂಪಿ 243 ವಾರ್ಡ್‌ಗಳ ಮರು ವಿಂಗಡಣೆ ಹಾಗೂ ಮೀಸಲು ಅಧಿಸೂಚನೆ ಹೊರಡಿಸಿತ್ತು. ಆದರೆ ವಾರ್ಡ್‌ ಮರು ವಿಂಗಡಣೆ ಹಾಗೂ ಮೀಸಲು ಅಧಿಸೂಚನೆಯನ್ನು ಪ್ರಶ್ನಿಸಿ ಪ್ರತ್ಯೇಕವಾಗಿ ಹಲವು ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನಂತರ ವಾರ್ಡ್‌ ಮರು ವಿಂಗಡಣೆ ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಸೆ.16ರಂದು ಹೈಕೋರ್ಟ್‌ ಆದೇಶಿಸಿತ್ತು. ಈಗ ಮೀಸಲು ಅಧಿಸೂಚನೆ ರದ್ದುಪಡಿಸಿದೆ.

Follow Us:
Download App:
  • android
  • ios