ರಾಜ್ಯ ಹೈಕೋರ್ಟ್‌ಗೆ ಅಕ್ಟೋಬರ್‌ 3 ರಿಂದ 7ರವರೆಗೆ ದಸರಾ ರಜೆ ಇರಲಿದ್ದು, ರಜಾಕಾಲದಲ್ಲಿ ಕಾರ್ಯನಿರ್ವಹಿಸುವ ನ್ಯಾಯಪೀಠಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ರಚಿಸಿದ್ದಾರೆ.

ಬೆಂಗಳೂರು (ಸೆ.30): ರಾಜ್ಯ ಹೈಕೋರ್ಟ್‌ಗೆ ಅಕ್ಟೋಬರ್‌ 3 ರಿಂದ 7ರವರೆಗೆ ದಸರಾ ರಜೆ ಇರಲಿದ್ದು, ರಜಾಕಾಲದಲ್ಲಿ ಕಾರ್ಯನಿರ್ವಹಿಸುವ ನ್ಯಾಯಪೀಠಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ರಚಿಸಿದ್ದಾರೆ. ರಜಾ ಕಾಲದಲ್ಲಿ ನ್ಯಾಯಮೂರ್ತಿಗಳಾದ ಎಸ್‌. ಸುನೀಲ್‌ ದತ್‌ ಯಾದವ್‌ ಮತ್ತು ಟಿ.ಜಿ. ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು 8ನೇ ಕೋರ್ಟ್‌ ಹಾಲ್‌ನಲ್ಲಿ ವಿಚಾರಣೆ ನಡೆಸಲಿದೆ. ಉಳಿದಂತೆ ನ್ಯಾಯಮೂರ್ತಿಗಳಾದ ಎನ್‌.ಎಸ್‌. ಸಂಜಯ್‌ ಗೌಡ (ಕೋರ್ಟ್‌ ಹಾಲ್‌ ಸಂಖ್ಯೆ 9), ಎಂ.ಜಿ.ಎಸ್‌ ಕಮಲ್‌ (ಕೋರ್ಟ್‌ ಹಾಲ್‌ ಸಂಖ್ಯೆ 10) ಮತ್ತು ಸಿ.ಎಂ.ಪೂಣಚ್ಚ ಅವರು (ಕೋರ್ಟ್‌ ಹಾಲ್‌ ನಂ. 11) ಏಕ ಸದಸ್ಯ ಪೀಠಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

ಧಾರವಾಡ ಮತ್ತು ಕಲಬುರಗಿ ಪೀಠದಲ್ಲಿ ಭೌತಿಕ ವಿಚಾರಣೆ ಇರುವುದಿಲ್ಲ. ತುರ್ತು ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲಿ ವರ್ಚುವಲ್‌ ವಿಧಾನದಲ್ಲಿ ನಡೆಸಲಾಗುತ್ತದೆ. ಬೆಂಗಳೂರು ಪೀಠದಲ್ಲಿ ಹೈಬ್ರಿಡ್‌ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿದೆ. ತುರ್ತು ಮಧ್ಯಂತರ ಆದೇಶ, ತಡೆಯಾಜ್ಞೆ ಮತ್ತು ಮಧ್ಯಂತರ ನಿರ್ದೇಶನಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಮಾತ್ರ ನಡೆಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅಕ್ಟೋಬರ್‌ 3ರಂದು ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠದಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ದಾಖಲು ಮಾಡಬಹುದಾಗಿದೆ. ಇ-ಫೈಲಿಂಗ್‌ ಪೋರ್ಟಲ್‌ ಮೂಲಕವು ಅರ್ಜಿ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಭಾರಿ ನ್ಯಾಯಿಕ ರಿಜಿಸ್ಟ್ರಾರ್‌ ಕೆ. ಎಸ್‌. ಭರತ್‌ಕುಮಾರ್‌ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿಗೆ ಹೊಸ ಮೀಸಲು ನಿಗದಿ ಸಾಧ್ಯವೇ: ಹೈಕೋರ್ಟ್‌

ಲೋಕಾಯುಕ್ತ ವಿರುದ್ಧ ಹೈಕೋರ್ಟ್‌ ಅಸಮಾಧಾನ: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಬಾಗ್ಮನೆ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಬಾಗ್ಮನೆ ಟೆಕ್‌ಪಾರ್ಕ್) ಸಲ್ಲಿಸಿದ್ದ ದೂರು ಆಧರಿಸಿ ಲೋಕಾಯುಕ್ತರು ನಡೆಸಿದ್ದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಲೋಕಾಯುಕ್ತ ಪ್ರಕ್ರಿಯೆ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಆದೇಶ ಮಾಡಿದೆ.

ಬಾಗ್ಮನೆ ಟೆಕ್‌ಪಾರ್ಕ್ ಸಲ್ಲಿಸಿದ್ದ ದೂರು ಸಂಬಂಧ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್‌ 18 (ಬಿ) ಮೀರಿ ಲೋಕಾಯುಕ್ತರು ನಿರ್ಧಾರ ಕೈಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ, ಬಾಗ್ಮನೆ ಟೆಕ್‌ಪಾರ್ಕ್ಗೆ ಸಂಬಂಧಿಸಿದಂತೆ ಲೋಕಾಯುಕ್ತರ ಮುಂದೆ ಬಾಕಿಯಿರುವ ಪ್ರಕರಣದ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ. ಅಲ್ಲದೆ, ಪ್ರತಿವಾದಿಗಳಾದ ಲೋಕಾಯುಕ್ತ ರೆಜಿಸ್ಟ್ರಾರ್‌, ಬಿಬಿಎಂಪಿ ಆಯುಕ್ತರು, ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಹಾಗೂ ಬಾಗ್ಮನೆ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ರಮೇಶ್‌ ಜಾರಕಿಹೊಳಿ ಕೇಸ್‌ ಸಾರಾಂಶ ಸಲ್ಲಿಸದಕ್ಕೆ ಹೈಕೋರ್ಟ್‌ ಅತೃಪ್ತಿ

ಹೈಕೋರ್ಟ್‌ ಅಸಮಾಧಾನ: ಬಾಗ್ಮನೆ ಟೆಕ್‌ ಪಾರ್ಕ್ ಬಳಿಯ ಒತ್ತುವರಿ ತೆರವು ಮಾಡಲು ಬಿಬಿಎಂಪಿ ಮುಂದಾಗಿತ್ತು. ಆ ಕುರಿತು ಭಾನುವಾರ ಅರ್ಜಿ ಸಲ್ಲಿಸಲಾಗುತ್ತದೆ. ಅಂದೇ ಲೋಕಾಯುಕ್ತರು ವಿಚಾರಣೆ ನಡೆಸಿ ತಡೆ ನೀಡುತ್ತಾರೆ. ಏನಿದು? ಪ್ರಕರಣ ಹೇಗೆ ಲೋಕಾಯುಕ್ತದ ವ್ಯಾಪ್ತಿಗೆ ಬರುತ್ತದೆ? ತೆರವು ಕಾರ್ಯಾರಣೆಗೆ ಲೋಕಾಯುಕ್ತವೇ ತಡೆ ನೀಡುವುದಾದರೆ, ಜನರು ಏಕೆ ನ್ಯಾಯಾಲಯಕ್ಕೆ ಬರಬೇಕು ಎಂದು ಹೈಕೋರ್ಟ್‌ ಇದೇ ವೇಳೆ ಪ್ರಶ್ನಿಸುವ ಮೂಲಕ ಅಸಮಾಧಾನ ಹೊರ ಹಾಕಿದೆ.