Asianet Suvarna News Asianet Suvarna News

ಚೆಕ್‌ಗಳಿಗೆ ಸಹಿ ಹಾಕಲು ಮುರುಘಾ ಶ್ರೀಗೆ ಷರತ್ತುಬದ್ಧ ಅನುಮತಿ

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಜೈಲುಪಾಲಾಗಿರುವ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀಗಳಿಗೆ ಶುಕ್ರವಾರ ಹೈಕೋರ್ಟ್‌ಗೆ ಚೆಕ್‌ಗಳಿಗೆ ಸಹಿ ಹಾಕಲು ಷರತ್ತು ಬದ್ಧ ಅನುಮತಿ ನೀಡಿದೆ. ಈ ಅನುಮತಿ ಅಕ್ಟೋಬರ್‌ ತಿಂಗಳಿಗೆ ಸಂಬಂಧಪಟ್ಟ ಚೆಕ್‌ಗಳಿಗೆ ಮಾತ್ರವೇ ಅನ್ವಯಿಸಲಿದೆ ಎಂದು ತಿಳಿಸಿದೆ.

Conditional permission to Murugha Shree to sign cheques san
Author
First Published Sep 30, 2022, 6:45 PM IST

ಬೆಂಗಳೂರು(ಸೆ. 30): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೋ ಪ್ರಕರಣದಡಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀಗಳ ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ. ಮಠಕ್ಕೆ ಸಂಬಂಧಪಟ್ಟ ಚೆಕ್‌ಗಳಿಗೆ ಸಹಿ ಹಾಕಲು ಕೋರ್ಟ್‌ನ ಅನುಮತಿಯನ್ನು ಮುರುಘಾ ಶ್ರೀಗಳು ತಮ್ಮ ವಕೀಲರ ಮೂಲಕ ಕೇಳಿದ್ದರು. ಅದರಂತೆ ವಿಚಾರಣೆ ನಡೆಸಿದ ಕೋರ್ಟ್‌, ಚೆಕ್‌ಗಳಿಗೆ ಸಹಿ ಹಾಕಲು ಮುರುಘಾ ಶ್ರೀಗೆ ಷರತ್ತುಬದ್ಧ ಅನುಮತಿ ನೀಡಿದೆ. ಆರೋಪಿ ಡಾ. ಶಿವಮೂರ್ತಿ ಮುರುಘಾ ಶರಣರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್‌, ಅಕ್ಟೋಬರ್ ತಿಂಗಳ ಚೆಕ್ ಗಳಿಗೆ ಸಹಿ ಹಾಕಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಅದಲ್ಲದೆ, ವೇತನಕ್ಕೆ ಸಂಬಂಧಿಸಿದ ಚೆಕ್‌ಗಳಿಗೆ ಮಾತ್ರವೇ ಸಹಿ ಹಾಕಬೇಕು. ಅದರ ಹೊರತಾದ ಯಾವುದೇ ಚೆಕ್‌ಗಳಿಗೆ ಸಹಿ ಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. ಇನ್ನು ಸಹಿ ಪಡೆಯಲು ಸಂಬಂಧಪಟ್ಟವರಿಗೆ ಜೈಲು ಅಧಿಕಾರಿಗಳು ಅನುಮತಿ ನೀಡಬೇಕು ಎಂದು ತಿಳಿಸಿದೆ. ಇನ್ನು ಮುರುಘಾಶ್ರೀ ಚೆಕ್‌ಗೆ ಸಹಿ ಹಾಕುವ ವೇಳೆ ತನಿಖಾಧಿಕಾರಿ, ಜೈಲು ಅಧೀಕ್ಷಕರು ಉಪಸ್ಥಿತರಿರಬೇಕು ಹಾಗೂ ಈಗ ನೀಡಿರುವ ಆದೇಶ ಅಕ್ಟೋಬರ್ ತಿಂಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಹೇಳಿದೆ.

ವೇತನವಿಲ್ಲದೆ  ವಿದ್ಯಾಪೀಠದ ಸಿಬ್ಬಂದಿ ಉಪವಾಸ ಇರಬಾರದು ಆ ಕಾರಣದಿಂದಾಗಿ ಅವರ ಮನವಿಯನ್ನು ಪುರಸ್ಕರಿಸಲಾಗಿದೆ. ಇನ್ನಿತರ ಮನವಿಗಳ ಬಗ್ಗೆ ವಿಚಾರಣಾ ನ್ಯಾಯಾಲಯ ನಿರ್ಧರಿಸಬೇಕು ಎಂದು  ನ್ಯಾ. ಎಂ. ನಾಗಪ್ರಸನ್ನ(Justice Nagaprasanna) ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.

ಇದಕ್ಕೂ ಮುನ್ನ 30 ಲಕ್ಷ ರೂಪಾಯಿ ಮೊತ್ತದ ಚೆಕ್‌ಅನ್ನು ಸೆಲ್ಫ್‌ ಚೆಕ್‌ ಆಗಿ ನೀಡುತ್ತಿರುವ ಬಗ್ಗೆ ನ್ಯಾಯಾಲಯ (Karnataka High Court) ಅಸಮಾಧಾನ ವ್ಯಕ್ತಪಡಿಸಿತ್ತು. ಶುಕ್ರವಾರ ಪರಿಷ್ಕೃತ ಜ್ಞಾಪನಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ ಬಳಿಕ ವಿಚಾರಣೆ ನಡೆಸಿದೆ. ಗುರುವಾರ ವಿಚಾರಣೆ ನಡೆಸಿದ್ದ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ, 14 ಲಕ್ಷ, 30 ಲಕ್ಷದ ದೊಡ್ಡ ಮೊತ್ತದ ಚೆಕ್‌ಗಳಲ್ಲಿ ಸೆಲ್ಫ್ (Lingayat Seer) ಎಂದು ನಮೂದಿಸಲಾಗಿದೆ. ಇದು ಸರಿ ಕಾಣುತ್ತಿಲ್ಲ ಎಂದು ಹೇಳಿದ್ದರು.

30 ಲಕ್ಷ ರು. ಮೊತ್ತಕ್ಕೂ ಸೆಲ್ಫ್ ಚೆಕ್‌: ಮುರುಘಾ ಶ್ರೀ ಅರ್ಜಿ ಬಗ್ಗೆ ಕೋರ್ಟ್‌ ಅತೃಪ್ತಿ

ಮಠದಲ್ಲಿ (Murugha Mutt) ಕೆಲಸಕ್ಕಿರುವ ವ್ಯಕ್ತಿಗೆ ಸಂಬಳ ನೀಡಬೇಕಾದಲ್ಲೂ ಚೆಕ್‌ಅನ್ನು ಸೆಲ್ಫ್‌ ಎಂದು ತೋರಿಸಲಾಗಿದೆ. ಇದು ಅನುಮಾನಕ್ಕೆ ಕಾರಣವಾಗುತ್ತಿದೆ. ಅರ್ಜಿದಾರರು ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ಸ್ಪಷ್ಟತೆ ಇಲ್ಲ. ಸ್ಪಷ್ಟವಾಗಿ ಇನ್ನೊಂದು ಮೆಮೋ (Memo) ಸಲ್ಲಿಸಬೇಕು ಎಂದು ಗುರುವಾರ ಕೋರ್ಟ್‌ ಹೇಳಿತ್ತು. ಶುಕ್ರವಾರ ಸಲ್ಲಿಸಿದ್ದು ಪ್ರಕರಣದಲ್ಲಿ ಮೂರನೇ ಪರಿಷ್ಕೃತ ಮೆಮೋ ಆಗಿದೆ. ಮಠದ ಅಧೀನದಲ್ಲಿ ಅಂದಾಜು 150ಕ್ಕೂ ಅಧಿಕ ವಿದ್ಯಾಸಂಸ್ಥೆಗಳಿದ್ದು, ಶಿವಮೂರ್ತಿ ಶರಣರು  ಜೈಲಿನಲ್ಲಿದ್ದಾರೆ. ಇದರಿಂದಾಗಿ 3500ಕ್ಕೂ ಅಧಿಕ ಸಿಬ್ಬಂದಿಗೆ ಅಕ್ಟೋಬರ್‌ ತಿಂಗಳಲ್ಲಿ ಸಂಬಳ ನೀಡುವುದು ಕಷ್ಟವಾಗಲಿದೆ. ನೌಕರರ ಎರಡು ತಿಂಗಳ ಸಂಬಳಕ್ಕೆ ಒಟ್ಟು 200 ಚೆಕ್‌ಗಳಿಗೆ ಸಹಿ ಹಾಕಬೇಕಿದ್ದು, ಅಕ್ಟೋಬರ್‌ 1 ರಿಂದ ಅಕ್ಟೋಬರ್‌ 5ರ ಒಳಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

'ಸರಕಾರ ಮಧ್ಯ ಪ್ರವೇಶಿಸಿ, ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರ ನೇಮಕವಾಗಲಿ'

ಮಠದ ದೈನಂದಿನ ಚಟುವಟಿಕೆ ಮತ್ತು ವ್ಯವಹಾರಗಳಿಗೆ ಹಾಗೂ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಸಂಬಂಧಿಸಿದ ಚೆಕ್‌ ಮತ್ತು ದಾಖಲೆಗಳಿಗೆ ಜೈಲಿನಿಂದಲೇ ಸಹಿ ಹಾಕಲು ಅವಕಾಶ ನೀಡಬೇಕು ಎಂದು ಶಿವಮೂರ್ತಿ ಶರಣರು (shivamurthy murugha sharanaru) ಮಾಡಿದ್ದ ಮನವಿಯನ್ನು ಚಿತ್ರದುರ್ಗ ಜೈಲು ಅಧಿಕಾರಿಗಳು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಚಿತ್ರದುರ್ಗ ಸೆಷನ್ಸ್‌ ನ್ಯಾಯಾಲಯದಲ್ಲಿ ಶಿವಮೂರ್ತಿ ಶರಣರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶೆ ಬಿ.ಕೆ. ಕೋಮಲಾ ತಿರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

Follow Us:
Download App:
  • android
  • ios