ಗುಜರಾತ್‌ನ 'ವಂತಾರಾ' ವನ್ಯಜೀವಿ ಕೇಂದ್ರಕ್ಕೆ ಕರ್ನಾಟಕದ ಅರಣ್ಯಾಧಿಕಾರಿಗಳು ಭೇಟಿ ನೀಡುತ್ತಿರುವುದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಭೇಟಿಗಳ ಬಗ್ಗೆ 7 ದಿನಗಳಲ್ಲಿ ವರದಿ ನೀಡಲು ಆದೇಶಿಸಿದೆ.

ಬೆಂಗಳೂರು (ಮಾ.27): ಕರ್ನಾಟಕದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಶುವೈದ್ಯರು ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್‌ ಅಧ್ಯಕ್ಷ ಮುಖೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಅವರ 'ವಂತಾರಾ' (Vantara) ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡುತ್ತಿರುವುದನ್ನು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಭೇಟಿಗಳ ಔಚಿತ್ಯದ ಬಗ್ಗೆ ಪ್ರಶ್ನಿಸಿರುವ ಸಚಿವರು, 7 ದಿನಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಖಡಕ್ ಆದೇಶ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸಚಿವರು, ವನ್ಯಜೀವಿ ನಿರ್ವಹಣೆಯಲ್ಲಿ ಕರ್ನಾಟಕಕ್ಕಿರುವ ನೂರು ವರ್ಷಗಳ ಭವ್ಯ ಇತಿಹಾಸವನ್ನು ನೆನಪಿಸಿದ್ದಾರೆ. 1909ರಲ್ಲಿಯೇ ಅಂದಿನ ಮೈಸೂರು ಮಹಾರಾಜರಾದ ಶ್ರೀ ಚಾಮರಾಜೇಂದ್ರ ಒಡೆಯರ್ ಅವರು 'ಶ್ರೀ ಚಾಮರಾಜೇಂದ್ರ ಪ್ರಾಣಿಶಾಸ್ತ್ರದ ಉದ್ಯಾನ' (ಮೈಸೂರು ಮೃಗಾಲಯ) ಆರಂಭಿಸುವ ಮೂಲಕ ಸಂರಕ್ಷಣಾ ಕಾರ್ಯಕ್ಕೆ ನಾಂದಿ ಹಾಡಿದ್ದರು. ಬೆಂಗಳೂರು ಸಮೀಪದ ಬನ್ನೇರುಘಟ್ಟ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ ಮತ್ತು ಗದಗ ಸೇರಿದಂತೆ ರಾಜ್ಯದಾದ್ಯಂತ ಅತ್ಯುತ್ತಮ ಮೃಗಾಲಯಗಳ ಜಾಲವಿದೆ. ನರಿಗೆ ಉಪಟಳ ನೀಡುವ ವನ್ಯಜೀವಿಗಳ ಸೆರೆ, ಸ್ಥಳಾಂತರ ಮತ್ತು ಗಾಯಗೊಂಡ ಪ್ರಾಣಿಗಳ ಆರೈಕೆ ಹಾಗೂ ಪುನರ್ವಸತಿ ಕಲ್ಪಿಸುವಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಸಚಿವರು ಹೆಮ್ಮೆಯಿಂದ ಹೇಳಿದ್ದಾರೆ.

ತನಿಖೆಗೆ ಕಾರಣವಾದ ಭೇಟಿ

ಇಂತಹ ಸಮರ್ಥ ಪರಂಪರೆ ಹೊಂದಿರುವ ರಾಜ್ಯದ ಪಶುವೈದ್ಯರು, ಅರಣ್ಯ ಅಧಿಕಾರಿಗಳು ಮತ್ತು ಮೃಗಾಲಯದ ನಿರ್ದೇಶಕರು ಗುಜರಾತ್‌ನ ಖಾಸಗಿ ವನ್ಯಜೀವಿ ಸಂರಕ್ಷಣೆ ಕೇಂದ್ರವಾದ 'ವಂತಾರಾ'ಗೆ ಭೇಟಿ ನೀಡುತ್ತಿರುವುದು ಸಚಿವರ ಕೆಂಗಣ್ಣಿಗೆ ಗುರಿಯಾಗಿದೆ. ಅಧಿಕಾರಿಗಳು ಅಲ್ಲಿ ಉಳಿದುಕೊಳ್ಳುತ್ತಿರುವುದು ಮಾತ್ರವಲ್ಲದೆ, ಅಲ್ಲಿನ ಸಂಶೋಧಕರು ಮತ್ತು ವೈದ್ಯರೊಂದಿಗೆ ಸತತ ಸಂಪರ್ಕದಲ್ಲಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

7 ದಿನಗಳಲ್ಲಿ ವರದಿ ನೀಡಲು ಸೂಚನೆ

ಇಲಾಖೆಯ ಯಾವ ಅಧಿಕಾರಿಗಳು ಮತ್ತು ನಿಯೋಜನೆ ಅಥವಾ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಯಾವ ಪಶುವೈದ್ಯರು 'ವಂತಾರಾ'ಗೆ ಹೋಗಿ ಬಂದಿದ್ದಾರೆ? ಇವರಿಗೆ ಈ ಭೇಟಿಗೆ ಅನುಮತಿ ನೀಡಿದ ಮೇಲಧಿಕಾರಿಗಳು ಯಾರು? ಈ ಭೇಟಿಯ ಹಿಂದಿರುವ ನಿಖರ ಉದ್ದೇಶವೇನು? ಎನ್ನುವ ವಿವರಗಳನ್ನು ಒಳಗೊಂಡ ವರದಿಯನ್ನು 7 ದಿನಗಳ ಒಳಗಾಗಿ ನೀಡುವಂತೆ ಸೂಚಿಸಲಾಗಿದೆ.

ಇನ್ಮುಂದೆ ಸಚಿವರ ಅನುಮತಿ ಕಡ್ಡಾಯ

ಈ ಬೆಳವಣಿಗೆಯ ಬೆನ್ನಲ್ಲೇ ಸಚಿವರು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಇನ್ನು ಮುಂದೆ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಖಾಸಗಿ ಮೃಗಾಲಯಗಳಿಗೆ ಅಥವಾ ವನ್ಯಜೀವಿ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡುವ ಮೊದಲು ಅರಣ್ಯ ಸಚಿವರ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ತಕ್ಷಣವೇ ಸುತ್ತೋಲೆ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Scroll to load tweet…