- Home
- News
- State
- ಡಿ.ಕೆ. ಶಿವಕುಮಾರ್ ಸಿಎಂ ಆದ ಮರುಕ್ಷಣವೇ ರಾಹುಲ್ ಗಾಂಧಿಗೆ ‘ಬಿಗ್ ಗಿಫ್ಟ್’: ಕಾಂಗ್ರೆಸ್ ಋಣ ತೀರಿಸಲು ಮಾಸ್ಟರ್ ಪ್ಲಾನ್
ಡಿ.ಕೆ. ಶಿವಕುಮಾರ್ ಸಿಎಂ ಆದ ಮರುಕ್ಷಣವೇ ರಾಹುಲ್ ಗಾಂಧಿಗೆ ‘ಬಿಗ್ ಗಿಫ್ಟ್’: ಕಾಂಗ್ರೆಸ್ ಋಣ ತೀರಿಸಲು ಮಾಸ್ಟರ್ ಪ್ಲಾನ್
ಕರ್ನಾಟಕ ರಾಜಕಾರಣದ 'ಟ್ರಬಲ್ ಶೂಟರ್', ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುಕ್ಷಣವೇ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ಕುಟುಂಬಕ್ಕೆ ಒಂದು ಐತಿಹಾಸಿಕ ಉಡುಗೊರೆ ನೀಡಲು ಸಜ್ಜಾಗಿದ್ದಾರೆ.

ಸಿಎಂ ಆದ ಮರುಕ್ಷಣವೇ ರಾಹುಲ್ ಗಾಂಧಿಗೆ ಡಿಕೆಶಿ ಗಿಫ್ಟ್
ಬೆಂಗಳೂರು (ಮೇ 31): ಕರ್ನಾಟಕ ರಾಜಕಾರಣದ 'ಟ್ರಬಲ್ ಶೂಟರ್', ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಜೂನ್ 3ರ ಬುಧವಾರ ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್, ಅಧಿಕಾರ ಸ್ವೀಕರಿಸಿದ ಮರುಕ್ಷಣವೇ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ಕುಟುಂಬಕ್ಕೆ ಒಂದು ಐತಿಹಾಸಿಕ ಉಡುಗೊರೆ ನೀಡಲು ಸಜ್ಜಾಗಿದ್ದಾರೆ.
ಕಾಂಗ್ರೆಸ್ ಕಚೇರಿ ಮೂಲಕ ಕೃತಜ್ಞತೆ:
ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ಸೇರಿ ಇಂದು ರಾಜ್ಯದ ಅತ್ಯುನ್ನತ ಹುದ್ದೆಗೇರುತ್ತಿರುವ ಡಿ.ಕೆ. ಶಿವಕುಮಾರ್, ತಮ್ಮ ಈ ಯಶಸ್ಸಿಗೆ ಕಾರಣವಾದ ಕಾಂಗ್ರೆಸ್ ಪಕ್ಷದ ಋಣ ತೀರಿಸಲು ನಿರ್ಧರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ನೂತನ 'ಕಾಂಗ್ರೆಸ್ ಭವನ' ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮೂಲಕ ಪಕ್ಷಕ್ಕೆ ಗಟ್ಟಿ ತಳಹದಿ ಹಾಕುವ ಸಂಕಲ್ಪವನ್ನು ಮಾಡಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿದ ನಿಯೋಜಿತ ಸಿಎಂ:
ಭಾನುವಾರ ಕಾಂಗ್ರೆಸ್ ಮುಖಂಡರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಆನಂದ್ ರಾವ್ ಸರ್ಕಲ್ ಬಳಿಯ ಜಾಗಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಸ್ಥಳ ಪರಿಶೀಲನೆ ನಡೆಸಿದರು. ಅಲ್ಲಿರುವ ಹಳೆಯ ಕಟ್ಟಡವನ್ನು ಈಗಾಗಲೇ ತೆರವುಗೊಳಿಸಲಾಗಿದ್ದು, ಹೊಸ ಕಚೇರಿಯ ಭೂಮಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 'ಇದು ಐತಿಹಾಸಿಕ ಕ್ಷಣ. ಪ್ರಮಾಣವಚನ ಮುಗಿದ ಬೆನ್ನಲ್ಲೇ ನಾವು ಪಕ್ಷದ ಕಚೇರಿ ನಿರ್ಮಾಣಕ್ಕೆ ಚಾಲನೆ ನೀಡಲಿದ್ದೇವೆ' ಎಂದು ತಿಳಿಸಿದರು.
ರಾಹುಲ್ ಗಾಂಧಿಯೇ ಅತಿಥಿ:
ಈ ವಿಶೇಷ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. 'ರಾಹುಲ್ ಗಾಂಧಿಯವರಿಂದಲೇ ಶಂಕುಸ್ಥಾಪನೆ ನೆರವೇರಿಸಲು ನಾವು ಆಸೆ ಹೊಂದಿದ್ದೇವೆ. ಈಗಾಗಲೇ ಅವರಿಗೆ ಆಹ್ವಾನ ಕಳುಹಿಸಿಕೊಡಲಾಗಿದೆ' ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕಾರ್ಯಕರ್ತರಿಗೆ ವಿಶೇಷ ವ್ಯವಸ್ಥೆ:
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸೀಮಿತ ಜನರಿಗೆ (600-700 ಮಂದಿ) ಮಾತ್ರ ಅವಕಾಶ ಇರುವುದರಿಂದ, ಈ ನೂತನ ಕಚೇರಿಯ ಭೂಮಿ ಪೂಜೆ ನಡೆಯುವ ಸ್ಥಳದಲ್ಲೇ ಬೃಹತ್ ಪರದೆಗಳನ್ನು ಅಳವಡಿಸಿ ಪ್ರಮಾಣವಚನವನ್ನು ಲೈವ್ ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹಾಗೂ ಶಾಸಕರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.
ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ನವೀಕರಣ
ಇದಲ್ಲದೆ, ರಾಮಲಿಂಗಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ನವೀಕರಣಕ್ಕೂ ಭೂಮಿ ಪೂಜೆ ನಡೆಯಲಿದೆ. ರಾಜ್ಯದ ವಿವಿಧೆಡೆ ಸುಮಾರು 100ಕ್ಕೂ ಹೆಚ್ಚು ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸುವ ಕನಸನ್ನು ಡಿ.ಕೆ. ಶಿವಕುಮಾರ್ ಹೊಂದಿದ್ದು, ಅದರ ಮೊದಲ ಹೆಜ್ಜೆಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಸ್ವತಃ ಡಿಕೆಶಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

