ಕಲಬುರಗಿಯಲ್ಲಿ ಮಾಜಿ ಸಚಿವ ರೇವೂನಾಯಕ ಬೆಳಮಗಿ ಅವರ ಸಂಬಂಧಿ, ಉದ್ಯಮಿ ಅನಿಲ್ ರಾಠೋಡ್ ಅವರನ್ನು ಅವರ ಕಚೇರಿಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಹಣಕಾಸಿನ ವೈಷಮ್ಯವೇ ಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವರದಿ: ಶರಣಯ್ಯ ಎಸ್‌ ಹೀರೇಮಠ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕಲಬುರಗಿ ಪ್ರತಿನಿಧಿ

ಕಲಬುರಗಿ (ಏ.3): ನಗರದ ಹೃದಯಭಾಗದಲ್ಲಿರುವ ಪಿ ಆಂಡ್ ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿ ತಡರಾತ್ರಿ ಮಾಜಿ ಸಚಿವ ರೇವೂನಾಯಕ ಬೆಳಮಗಿ ಅವರ ಅಳಿಯನ ಸಹೋದರ ಅನಿಲ್ ರಾಠೋಡ್ (45) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯು ಕಲಬುರಗಿ ನಗರದಲ್ಲಿ ಭಾರಿ ಆತಂಕ ಮತ್ತು ಸಂಚಲನ ಮೂಡಿಸಿದೆ.

ಅನಿಲ್ ರಾಠೋಡ್ ಅವರು ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ತಮ್ಮ ಕಚೇರಿಯಲ್ಲಿದ್ದಾಗ, ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ನೇರವಾಗಿ ಕಚೇರಿ ಒಳಗೆ ನುಗ್ಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಮಾರಕಾಸ್ತ್ರಗಳಿಂದ ಅನಿಲ್ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಹಂತಕರು ಅದೇ ಆಟೋದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.

ವ್ಯಾಪಾರ ಮತ್ತು ಆರ್ಥಿಕ ವೈಷಮ್ಯದ ಶಂಕೆ

ಮೃತ ಅನಿಲ್ ರಾಠೋಡ್ ಅವರು ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ವ್ಯವಹಾರದಲ್ಲಿ ಸಕ್ರಿಯರಾಗಿದ್ದರು. ಅವರ ಹತ್ಯೆಗೆ ಹಣಕಾಸಿನ ವಿಚಾರವೇ ಪ್ರಮುಖ ಕಾರಣವಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕಿಸಿದ್ದಾರೆ. ವೈಯಕ್ತಿಕ ಅಥವಾ ವ್ಯವಹಾರಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೇ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಆಯುಕ್ತ ಡಾ. ಶರಣಪ್ಪ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳಿವುಗಳನ್ನು ಪತ್ತೆ ಹಚ್ಚಲು ಶ್ವಾನ ದಳ (Dog Squad) ಮತ್ತು ಫಿಂಗರ್ ಪ್ರಿಂಟ್ ತಜ್ಞರ ತಂಡ ಸ್ಥಳದಲ್ಲಿ ತೀವ್ರ ತಪಾಸಣೆ ನಡೆಸಿದೆ.

ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳು ಆಟೋದಲ್ಲಿ ಬಂದಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿರುವುದರಿಂದ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರವೇ ಹಂತಕರನ್ನು ಸೆರೆ ಹಿಡಿಯುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.