ಮಂಡ್ಯ ಶಾಸಕ ಗಣಿಗ ರವಿಕುಮಾರ್, ತಮಿಳುನಾಡಿನಲ್ಲಿ ಕಾವೇರಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ವಿಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ. ಸಾಕಷ್ಟು ನೀರು ಪೋಲಾಗುತ್ತಿದ್ದರೂ, ಕರ್ನಾಟಕದಿಂದ ನೀರು ಕೇಳುವ ತಮಿಳುನಾಡಿನ ಬೇಡಿಕೆಯನ್ನು ಅವರು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ, CWRC ಆದೇಶ ಪಾಲಿಸದೆ ನೀರು ಬಿಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಂಡ್ಯ ಬ್ರೇಕಿಂಗ್: ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಕಳ್ಳಾಟ ಬಯಲು! ಸಮುದ್ರ ಸೇರುತ್ತಿರುವ ನೀರಿನ ವೀಡಿಯೋ ಪ್ರೂಫ್ ಬಿಡುಗಡೆ ಮಾಡಿದ ಶಾಸಕ ಗಣಿಗ ರವಿ!

ಮಂಡ್ಯ (ಜು.28): ತಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC Order) ಆದೇಶ ನೀಡಿರುವ ಬೆನ್ನಲ್ಲೇ, ನೆರೆ ರಾಜ್ಯ ತಮಿಳುನಾಡಿನ ಅಸಲಿ ಬಣ್ಣವನ್ನು ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ (Mandya MLA Ganiga Ravikumar) ಬಯಲು ಮಾಡಿದ್ದಾರೆ. ತಮಿಳುನಾಡಿನಲ್ಲಿ ಕಾವೇರಿ ನೀರು ಪೋಲಾಗಿ ನೇರವಾಗಿ ಸಮುದ್ರಕ್ಕೆ ಸೇರುತ್ತಿರುವ 'ರಿಯಾಲಿಟಿ ಚೆಕ್' ವೀಡಿಯೋ (Reality Check Video) ಬಿಡುಗಡೆ ಮಾಡುವ ಮೂಲಕ ತಮಿಳುನಾಡಿನ ಡಬಲ್ ಗೇಮ್ ಅನ್ನು ಸಾಕ್ಷಿ ಸಮೇತ ಎತ್ತಿ ತೋರಿಸಿದ್ದಾರೆ.

ಚಿದಂಬರಂನಲ್ಲಿ ಸಮುದ್ರ ಪಾಲಾಗುತ್ತಿದೆ ಕಾವೇರಿ ನೀರು!

ಕಳೆದ ಮೂರು ದಿನಗಳ ಹಿಂದೆ ತಮಿಳುನಾಡು ಪ್ರವಾಸಕ್ಕೆ ಹೋಗಿದ್ದ ಶಾಸಕ ಗಣಿಗ ರವಿಕುಮಾರ್, ಚಿದಂಬರಂ (Chidambaram) ಬಳಿ ಕಾವೇರಿ ನದಿ ಹರಿಯುವ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಅಲ್ಲಿ ಅಪಾರ ಪ್ರಮಾಣದ ಕಾವೇರಿ ನೀರು ಯಾವುದೇ ಬಳಕೆಯಿಲ್ಲದೆ ನೇರವಾಗಿ ಬಂಗಾಳ ಕೊಲ್ಲಿ ಸಮುದ್ರಕ್ಕೆ ಸೇರುತ್ತಿದೆ. 'ಅವರಲ್ಲಿ ಈಗಾಗಲೇ ಸಾಕಷ್ಟಿರುವ ನೀರೇ ವ್ಯರ್ಥವಾಗಿ ಸಮುದ್ರಕ್ಕೆ ಹರಿಯುತ್ತಿದೆ. ಹೀಗಿರುವಾಗ ಮತ್ತೆ ಕರ್ನಾಟಕದಿಂದ ನೀರು ಬಿಡಿ ಎಂದು ಕ್ಯಾತೆ ತೆಗೆಯುತ್ತಿರುವುದು ಎಷ್ಟು ಸರಿ?' ಎಂದು ಗಣಿಗ ರವಿ ಖಾರವಾಗಿ ಪ್ರಶ್ನಿಸಿದ್ದಾರೆ.

'ನಮ್ಮ ಸರ್ಕಾರ ಸಿಡಬ್ಲ್ಯೂಆರ್‌ಸಿ ಆದೇಶ ಪಾಲಿಸಬಾರದು!

ವಿಡಿಯೋ ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವ ಶಾಸಕ ಗಣಿಗ ರವಿ, 'CWRC ಯಾವ ಆಧಾರದ ಮೇಲೆ ತಮಿಳುನಾಡಿಗೆ ನೀರು ಬಿಡಲು ಹೇಳಿದೆಯೋ ಗೊತ್ತಿಲ್ಲ. ನಮ್ಮ ಮಂಡ್ಯ ಹಾಗೂ ಕಾವೇರಿ ಜಲಾನಯನ ಪ್ರದೇಶದ ರೈತರ ಬೆಳೆಗಳಿಗೆ ನೀರು ಇಲ್ಲದಿರುವುದು ಒಂದೆಡೆಯಾದರೆ, ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ. ಹೀಗಾಗಿ ನಮ್ಮ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ CWRC ಆದೇಶವನ್ನು ಪಾಲಿಸಬಾರದು ಮತ್ತು ತಮಿಳುನಾಡಿಗೆ ಕಾವೇರಿ ನೀರನ್ನು (Cauvery Water) ಹರಿಸಬಾರದು' ಎಂದು ಬಹಿರಂಗವಾಗಿ ಆಗ್ರಹಿಸಿದ್ದಾರೆ.

ಮೇಕೆದಾಟು ನಿರ್ಮಾಣಕ್ಕೆ ಸಾಕ್ಷಿ; ತಮಿಳುನಾಡಿಗೂ ಉಚಿತ ಸಲಹೆ!

'ತಮಿಳುನಾಡು ನಾಯಕರು ಮೇಕೆದಾಟು ಯೋಜನೆಗೆ (Mekedatu Project) ಸುಮ್ಮನೆ ತಗಾದೆ ತೆಗೆಯುತ್ತಿದ್ದಾರೆ. ನಾವು ನಮ್ಮ ಗಡಿಯಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟೇ ಕಟ್ಟುತ್ತೇವೆ. ತಮಿಳುನಾಡಿನವರಿಗೂ ಬುದ್ಧಿ ಇದ್ದರೆ, ಅವರು ಮೆಟ್ಟೂರು ಜಲಾಶಯದ (Mettur Dam) ಕೆಳಭಾಗದಲ್ಲಿ ಇನ್ನೊಂದು ಅಣೆಕಟ್ಟು ನಿರ್ಮಿಸಿಕೊಳ್ಳಲಿ. ಇದರಿಂದ ವ್ಯರ್ಥವಾಗಿ ಸಮುದ್ರಕ್ಕೆ ಹರಿಯುವ ಕೋಟ್ಯಂತರ ಕ್ಯೂಸೆಕ್ ನೀರನ್ನು ಅವರು ಉಳಿಸಿಕೊಳ್ಳಬಹುದು. ಅದನ್ನು ಬಿಟ್ಟು ಕನ್ನಡಿಗರ ಹೊಟ್ಟೆಗೆ ಹೊಡೆಯುವ ಕೆಲಸ ನಿಲ್ಲಿಸಲಿ' ಎಂದು ಶಾಸಕ ಗಣಿಗ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.