ಧಾರವಾಡದ ರಾಮಾಪುರ ಗ್ರಾಮದ ಬಳಿ ಬೈಲಹೊಂಗಲ ಮಾಜಿ ಶಾಸಕರ ಪುತ್ರ ರಾಜು ಬೋಳಶೆಟ್ಟಿ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಧಾರವಾಡ (ಮಾ.24): ಜಿಲ್ಲೆಯ ರಾಮಾಪುರ ಗ್ರಾಮದ ಸಮೀಪದ ನಿರ್ಜನ ಪ್ರದೇಶದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕರ ಪುತ್ರನೊಬ್ಬರು ಕಾರಿನಲ್ಲೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ಕೊಲೆ ಎಂದು ಶಂಕಿಸಲಾಗಿದ್ದು, ಇಡೀ ಜಿಲ್ಲೆಯನ್ನು ಈ ಘಟನೆ ಬೆಚ್ಚಿಬೀಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಮೃತಪಟ್ಟ ದುರ್ದೈವಿ. ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ಬಳಿಯಿರುವ ರೈಲ್ವೆ ಟ್ರ್ಯಾಕ್ ಪಕ್ಕದ ದಟ್ಟಾರಣ್ಯದಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ರಾಜು ಬೋಳಶೆಟ್ಟಿ ಅವರು ತಮ್ಮದೇ ಆದ ವ್ಯಾಗನರ್ ಕಾರಿನಲ್ಲಿ ಸುಟ್ಟು ಬೂದಿಯಾಗಿದ್ದಾರೆ.

ಕೊಲೆ ಮಾಡಿ ಬೆಂಕಿ ಹಚ್ಚಿದ ಶಂಕೆ

ದುಷ್ಕರ್ಮಿಗಳು ರಾಜು ಬೋಳಶೆಟ್ಟಿ ಅವರನ್ನು ಮೊದಲು ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ನಿರ್ಜನ ಪ್ರದೇಶಕ್ಕೆ ತಂದು ಅವರದೇ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ. ಕಾರು ಮತ್ತು ದೇಹ ಎರಡೂ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಗುರುತು ಹಿಡಿಯಲಾಗದ ಸ್ಥಿತಿಯಲ್ಲಿವೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ

ಘಟನಾ ಸ್ಥಳಕ್ಕೆ ಧಾರವಾಡ ಎಸ್‌ಪಿ ಗುಂಜನ್ ಆರ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ತಂಡ ಹಾಗೂ ಶ್ವಾನದಳ ಕೂಡ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿವೆ. ಪ್ರಸ್ತುತ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಂತಕರ ಪತ್ತೆಗಾಗಿ ತೀವ್ರ ತನಿಖೆ ಆರಂಭಿಸಿದ್ದಾರೆ. ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದ ವ್ಯಕ್ತಿಯ ಈ ನಿಗೂಢ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.