ಹುಬ್ಬಳ್ಳಿಯ ನೇಕಾರ ನಗರದಲ್ಲಿ ವಸತಿ ಉದ್ದೇಶಕ್ಕೆ ಅನುಮತಿ ಪಡೆದ ಕಟ್ಟಡವನ್ನು ಅಕ್ರಮವಾಗಿ ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೆರವಿಗೆ ಗಡುವು

ಹುಬ್ಬಳ್ಳಿ (ಜ. 2): ವಾಣಿಜ್ಯ ನಗರಿ ಹುಬ್ಬಳ್ಳಿಯ ನೇಕಾರ ನಗರದಲ್ಲಿ ವಸತಿ ಉದ್ದೇಶಕ್ಕೆಂದು ಅನುಮತಿ ಪಡೆದು ನಿರ್ಮಿಸಿದ ಕಟ್ಟಡವೊಂದು ಈಗ ಪ್ರಾರ್ಥನಾ ಮಂದಿರವಾಗಿ ಮಾರ್ಪಟ್ಟಿದೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳೀಯ ನಿವಾಸಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಅನುಮತಿ ಮನೆಗೆ, ಬಳಕೆ ಮಸೀದಿಗೆ?

ನೇಕಾರ ನಗರದ ಶಿವನಾಗರ ಬಡಾವಣೆಯಲ್ಲಿ ಜಹೀರ್ ಮತ್ತು ಜಾಕೀರ್ ಎಂಬ ಸಹೋದರರು ಮನೆ ನಿರ್ಮಿಸಲು ಮಹಾನಗರ ಪಾಲಿಕೆಯಿಂದ ಪರವಾನಗಿ ಪಡೆದಿದ್ದರು. ಶೇ. 95ರಷ್ಟು ಹಿಂದೂಗಳೇ ಇರುವ ಈ ಬಡಾವಣೆಯಲ್ಲಿ ಮುಸ್ಲಿಂ ಕುಟುಂಬವೊಂದು ನೆಲೆಸಲು ಬರುತ್ತಿದೆ ಎಂದು ಯಾರೂ ವಿರೋಧಿಸಿರಲಿಲ್ಲ. ಆದರೆ, ಮನೆ ಕಟ್ಟಿದವರು ಅಲ್ಲಿ ವಾಸ ಮಾಡುವ ಬದಲು, ಆ ಕಟ್ಟಡವನ್ನು ಮಸೀದಿಯಾಗಿ ಪರಿವರ್ತಿಸಿದ್ದಾರೆ ಎನ್ನಲಾಗಿದೆ. ಪ್ರತಿನಿತ್ಯ ನೂರಾರು ಜನರು ಬಂದು ನಮಾಜ್ ಮಾಡಲು ಶುರು ಮಾಡಿದ್ದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಪೊಲೀಸ್ ಮೆಟ್ಟಿಲೇರಿದ 'ಪ್ರಾರ್ಥನೆ' ವಿವಾದ

ಕಳೆದ ಐದಾರು ತಿಂಗಳಿಂದ ಈ ವಿಚಾರವಾಗಿ ಸ್ಥಳೀಯರು ಮತ್ತು ಸಾರವಾಡ್ ಕುಟುಂಬದ ನಡುವೆ ಶೀತಲ ಸಮರ ನಡೆಯುತ್ತಲೇ ಇತ್ತು. ವಿಷಯ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ, ಶಾಂತಿ ಕಾಪಾಡುವಂತೆ ಪೊಲೀಸರು ಉಭಯ ಪಂಗಡಗಳಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಅನುಮತಿ ಇಲ್ಲದಿದ್ದರೂ ನಮಾಜ್ ಮುಂದುವರಿದ ಹಿನ್ನೆಲೆಯಲ್ಲಿ ಸಿಡಿದೆದ್ದ ಹಿಂದೂ ಸಂಘಟನೆಗಳು ಮತ್ತು ಬಡಾವಣೆ ನಿವಾಸಿಗಳು ಇಂದು ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅಕ್ರಮ ಮಸೀದಿ ತೆರವಿಗೆ ಆಗ್ರಹಿಸಿದರು.

ಶ್ರೀರಾಮಸೇನೆ ಎಂಟ್ರಿ: ಗಡುವು ನೀಡಿದ ಮುತಾಲಿಕ್

ಪ್ರತಿಭಟನೆಯಲ್ಲಿ ಭಾಗಿಯಾದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ನಾವೆಲ್ಲಾದರೂ ದೇವಸ್ಥಾನ ಕಟ್ಟಿದರೆ ಕೇಸ್ ಹಾಕುವ ಅಧಿಕಾರಿಗಳು, ಮನೆ ಎಂದು ಹೇಳಿ ಮಸೀದಿ ನಿರ್ಮಿಸಿದರೂ ಸುಮ್ಮನಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಸುತ್ತಮುತ್ತ ಮೂರು ಮಸೀದಿಗಳಿದ್ದರೂ ಉದ್ದೇಶಪೂರ್ವಕವಾಗಿ ಇಲ್ಲಿ ಹೊಸ ಕೇಂದ್ರ ತೆರೆಯಲಾಗಿದೆ ಎಂದು ಆರೋಪಿಸಿದ ಅವರು, ಒಂದು ವಾರದೊಳಗೆ ಇದನ್ನು ತೆರವುಗೊಳಿಸದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಗಡುವು ನೀಡಿದ್ದಾರೆ.

ಮೇಯರ್ ಭೇಟಿ: ಪಾಲಿಕೆಯಿಂದ ತನಿಖೆ ಚುರುಕು

ಘಟನಾ ಸ್ಥಳಕ್ಕೆ ಗುರುವಾರ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ನಕ್ಷೆ ಮತ್ತು ಸದ್ಯದ ಬಳಕೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ನಿಯಮ ಉಲ್ಲಂಘನೆಯಾಗಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಹಿತಕರ ಘಟನೆ ನಡೆಯದಂತೆ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಇಡೀ ಬಡಾವಣೆಯನ್ನು ಬ್ಯಾರಿಕೇಡ್‌ಗಳ ಮೂಲಕ ಬಂದೋಬಸ್ತ್ ಮಾಡಲಾಗಿದೆ.