ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ರಾಜ್ಯದ ವಿಮಾನ ನಿಲ್ದಾಣಗಳಿಗೆ ಕನ್ನಡಿಗ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಲು ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಟಿ ಪೂಜಾ ಗಾಂಧಿ ಹಾಗೂ ಶಾಸಕ ಕೋನರೆಡ್ಡಿ ನೇತೃತ್ವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಗೆ ಮುತ್ತಿಗೆ ಹಾಕಿದರು.

ಹುಬ್ಬಳ್ಳಿ (ಡಿ.27): ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಿಗೆ ನಾಡಿನ ಮಹಾನ್ ಪುರುಷರ ಹೆಸರನ್ನು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಇಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. 'ವಿಮಾನ ನಿಲ್ದಾಣಗಳ ಕನ್ನಡಿಗರ ನಾಮಕರಣ ಸಮಿತಿ' ವತಿಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೃಹತ್ ಮೆರವಣಿಗೆ

ನಟಿ ಪೂಜಾ ಗಾಂಧಿ ಹಾಗೂ ಶಾಸಕ ಎನ್ಎಚ್ ಕೋನರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಯಿತು. ನೂರಾರು ಹೋರಾಟಗಾರರು ಮೆರವಣಿಗೆಯ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿವರೆಗೆ ತೆರಳಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕರ್ನಾಟಕದ ಅಸ್ಮಿತೆಯನ್ನು ಎತ್ತಿಹಿಡಿಯಲು ವಿಮಾನ ನಿಲ್ದಾಣಗಳಿಗೆ ಸ್ಥಳೀಯ ಸಾಧಕರ ಹೆಸರೇ ಇಡಬೇಕೆಂದು ಪಟ್ಟು ಹಿಡಿದರು.

ಯಾವ ನಿಲ್ದಾಣಕ್ಕೆ ಯಾರ ಹೆಸರು? ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳೇನು?

ಪ್ರತಿಭಟನಾಕಾರರು ಪ್ರಮುಖವಾಗಿ ನಾಲ್ಕು ವಿಮಾನ ನಿಲ್ದಾಣಗಳಿಗೆ ಈ ಕೆಳಗಿನಂತೆ ನಾಮಕರಣ ಮಾಡಬೇಕೆಂದು ಆಗ್ರಹಿಸಿದ್ದಾರೆ:

  • ಹುಬ್ಬಳ್ಳಿ ವಿಮಾನ ನಿಲ್ದಾಣ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರು.
  • ಬೆಳಗಾವಿ ವಿಮಾನ ನಿಲ್ದಾಣ: ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರು.
  • ವಿಜಯಪುರ ವಿಮಾನ ನಿಲ್ದಾಣ: ಜಗದ್ಜ್ಯೋತಿ ಬಸವೇಶ್ವರರ ಹೆಸರು.
  • ಶಿವಮೊಗ್ಗ ವಿಮಾನ ನಿಲ್ದಾಣ: ರಾಷ್ಟ್ರಕವಿ ಕುವೆಂಪು ಅವರ ಹೆಸರು.

ಕೇಂದ್ರ ಸರ್ಕಾರಕ್ಕೆ ಗಡುವು: ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

ಈ ವೇಳೆ ಮಾತನಾಡಿದ ನಟಿ ಪೂಜಾ ಗಾಂಧಿ ಮತ್ತು ಶಾಸಕ ಕೋನರೆಡ್ಡಿ, ರಾಜ್ಯ ಸರ್ಕಾರವು ಈಗಾಗಲೇ ಈ ಹೆಸರುಗಳನ್ನು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಕೇಂದ್ರ ಸರ್ಕಾರವು ಅನುಮತಿ ನೀಡುವಲ್ಲಿ ವಿಳಂಬ ಮಾಡುತ್ತಿದೆ, ಎಂದು ಆರೋಪಿಸಿದರು. ಕರ್ನಾಟಕದಲ್ಲಿರುವ ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರಿಡಲು ತಡ ಮಾಡಬಾರದು. ಒಂದು ವೇಳೆ ವಿಳಂಬ ಧೋರಣೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.