ಚಿಕ್ಕನಾಯಕನಹಳ್ಳಿಯ ಬೋರನಕಣಿವೆ ಜಲಾಶಯ ನೀರನ್ನು ಬೇರೆ ಕಡೆ ಹರಿಸುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ರಾಜ್ಯ ಸರ್ಕಾರಕ್ಕೆ  ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರು (ಜು.2): ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಬೋರನಕಣಿವೆ ಜಲಾಶಯ ನೀರನ್ನು ಬೇರೆ ಕಡೆ ಹರಿಸುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

Add Asianetnews Kannada as a Preferred SourcegooglePreferred

ಈ ಕುರಿತಂತೆ ಎಲ್‌.ರಮೇಶ್‌ ಸೇರಿದಂತೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಮನಹಳ್ಳಿ ಗ್ರಾಮದ ಎಂಟು ಮಂದಿ ಗ್ರಾಮಸ್ಥರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಜಯಪುರದಲ್ಲಿ ಒಂಟಿ ಎತ್ತು ದಾಖಲೆಯ ಮಾರಾಟ, 18 ಲಕ್ಷ 1 ಸಾವಿರಕ್ಕೆ ಸೋಲ್ಡ್‌!

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ನೀರು ಅಭಿವೃದ್ಧಿ ಇಲಾಖೆ ಮತ್ತದರ ಸಹಾಯಕ ಕಾರ್ಯಕಾರಿ ಎಂಜಿನಿಯರ್‌, ತುಮಕೂರು ಜಿಲ್ಲಾಧಿಕಾರಿ, ತಿಪಟೂರು ಉಪ ವಿಭಾಗದ ಉಪ ವಿಭಾಗಾಧಿಕಾರಿ ಮತ್ತು ಚಿಕ್ಕನಾಯಕನಹಳ್ಳಿ ತಹಸೀಲ್ದಾರ್‌ಗೆ ನೋಟಿಸ್‌ ಜಾರಿ ಮಾಡಿತು.

ಪ್ರೀತಿಸಿ ಮದುವೆಯಾದವಳನ್ನು ಕೊಂದ ಪೇದೆಗೆ ಅಕ್ರಮ ಸಂಬಂಧ, ಹಾಸನದಲ್ಲಿ ಶವವಿಟ್ಟು ಪ್ರತಿಭಟನೆ

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಎಸ್‌.ತ್ಯಾಗರಾಜ ವಾದ ಮಂಡಿಸಿ, ಚಿಕ್ಕನಾಯಕನಹಳ್ಳಿಯಲ್ಲಿ ಬೋರನಕಣಿವೆ ಜಲಾಶಯವನ್ನು 1892ರಲ್ಲಿ ಮೈಸೂರು ಮಹಾರಾಜರು ಕಟ್ಟಿಸಿದ್ದರು. 2,269 ದಶ ಲಕ್ಷ ಘನ ಅಡಿ ನೀರಿನ ಸಂಗ್ರಹ ಸಾರ್ಮಥ್ಯವಿರುವ ಈ ಜಲಾಶಯ 330 ಚದರ ಮೈಲಿ ಜಲಾಯನ ಪ್ರದೇಶವನ್ನು ಹೊಂದಿದೆ. ಈ ಜಲಾಶಯ ಮುಂಗಾರು ಮಳೆಯನ್ನು ಆಧರಿಸಿದೆ. ಮಳೆಯ ಕೊರತೆಯಿಂದ ಕಳೆದ 20 ವರ್ಷಗಳಿಂದ ಈ ಜಲಾಶಯವು ಭರ್ತಿಯಾಗಿಲ್ಲ. ಸ್ಥಳೀಯ ಜನ‌ ಹಾಗೂ ಜಾನುವಾರು ಕುಡಿಯುವ ನೀರಿಗೆ ಈ ಜಲಾಶಯವು ಏಕಮಾತ್ರ ಮೂಲವಾಗಿದೆ. ಜಲಾಶಯದಿಂದ ಬೇರೆ ಕಡೆಗೆ ನೀರು ಹರಿಸಲಾಗುತ್ತಿದೆ. ಇದರಿಂದ ಸ್ಥಳೀಯ ಜನ‌ ಜಾನುವಾರುಗಳಿಗೆ ತೊಂದರೆ ಉಂಟಾಗಲಿದೆ. ಜಲಾಶಯದಿಂದ ಹೊರಗಡೆಗೆ ನೀರು ಹರಿಸದಂತೆ ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರಗಳಿಗೆ ಸ್ಥಳೀಯರು ಮನವಿ ನೀಡಿದ್ದರೂ ಅದನ್ನು ಪರಿಗಣಿಸಿಲ್ಲ. ಆದ್ದರಿಂದ ಜಲಾಶಯದ ನೀರನ್ನು ಬೇರೆ ಕಡೆಗೆ ಹರಿಸುವುದಕ್ಕೆ ತಕ್ಷಣ ಸ್ಥಗಿತಗೊಳಿಸಲು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿದರು.