Asianet Suvarna News Asianet Suvarna News

ಹಲಾಲ್‌ ಉದ್ದೇಶವೇ ಆರ್ಥಿಕ ಜಿಹಾದ್‌, ಹಿಂದೂ ಸಂಘಟನೆಗಳ ಅಭಿಯಾನ ಸಮರ್ಥಿಸಿಕೊಂಡ ಸಿ ಟಿ ರವಿ

ರಾಜ್ಯದಲ್ಲಿ ಹಲಾಲ್‌ (Halal) ಅನ್ನುವುದು ಈಗ ಚರ್ಚಾ ವಸ್ತುವಿಷಯವಾಗಿದೆ. ಹಲಾಲ್‌ ಮಾರ್ಕ್ನ ವಸ್ತುಗಳನ್ನು ಬಹಿಷ್ಕಾರ ಹಾಕಬೇಕು ಎಂದು ಹಿಂದು ಸಂಘಟನೆಗಳು ಒತ್ತಾಯಿಸುತ್ತಿವೆ. ಹಾಗಾದರೆ ಹಲಾಲ್‌ ಎಂಬ ಟ್ರೇಡ್‌ಮಾರ್ಕ್ ನಮ್ಮ ದೇಶ ದಲ್ಲಿ ಪ್ರಮಾಣೀಕೃತ ಮಾಂಸವೇ? ಅಷ್ಟಕ್ಕೂ ಹಲಾಲ್‌ ಅಂದರೆ ಏನು?

Halal meat sale is Economic Jihad CT Ravi hls
Author
Bengaluru, First Published Apr 7, 2022, 11:35 AM IST

ಭಾರತೀಯ ಜನತಾ ಪಕ್ಷ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಆಶಯಗಳಿಗೆ ಬದ್ಧವಾಗಿದೆ. ಸಮಾನತೆ, ಭ್ರಾತೃತ್ವ, ಮುಕ್ತ ಸ್ವಾತಂತ್ರ ಎಲ್ಲವೂ ಸಮಾನವಾಗಿ ಇಡೀ ಭಾರತೀಯ ಜನತೆಗೆ ಸಿಗಬೇಕು ಎಂಬುದೇ ಪ್ರಧಾನಿ ಮೋದಿ ಅವರ ಆಶಯ. ಆ ನಿಟ್ಟಿನಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ನೇತೃತ್ವ, ಕತೃತ್ವದ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಮಾರ್ಗದಲ್ಲೇ ಹೆಜ್ಜೆ ಹಾಕಲಾಗುತ್ತಿದೆ.

ಸರ್ವಜನಾಂಗದ ಶಾಂತಿಯ ತೋಟವಾದ ನಮ್ಮ ದೇಶದಲ್ಲಿ ನೂರಾರು ಭಾಷೆ, ಸಾವಿರಾರು ಸಂಸ್ಕೃತಿ ಇದೆ ಹೊಸತನವನ್ನು ಸ್ವೀಕರಿಸುವ ಮನೋಭಾವ ಇದೆ. ಇದನ್ನೇ ನಮ್ಮ ದೌರ್ಬಲ್ಯ ಎಂದು ತಿಳಿದ ಸಿಮೆತಿಕ್‌ ಮತ ಮತ್ತು ಆದರ ಅನುಯಾಯಿಗಳು ನಮ್ಮ ಮೇಲೆ ನಿರ್ದಿಷ್ಟಕಟ್ಟು ಹೆರುತ್ತಾ ಬಂದರು. ಪ್ರಸ್ತುತಿ ವಸ್ತ್ರಧರ್ಮ, ವ್ಯಾಪಾರ ಧರ್ಮ, ಆಹಾರ ಧರ್ಮದ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯುತ್ತಲೇ ಇದೆ.

ಈ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳು ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ಮಟ್ಟದ ಜಾಗೃತಿ ಆರಂಭವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ನರೇಂದ್ರ ಮೋದಿ ಪೂರ್ವ ಆಡಳಿತಕ್ಕೂ, ಮೋದಿ ಪ್ರಧಾನಿಯಾದ ನಂತರದ ಆಡಳಿತಕ್ಕೂ ಅಜಗಜಾಂತರ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಭಾರತದ ಭದ್ರತೆ, ಸಾಮಾಜಿಕ ವ್ಯವಸ್ಥೆ, ಕಾನೂನು ಪರಿಪಾಲನೆ, ಸಮಾನತೆ, ಸಂಪನ್ಮೂಲಗಳ ಸಮಾನ ಹಂಚಿಕೆ, ಬಹುತ್ವದ ಮೂಲ ಬೇರುಗಳನ್ನು ಸದೃಢಗೊಳಿಸಿ ಧರ್ಮದ ಆಶಯಗಳಿಗೆ ಪೂರಕವಾಗಿ ಆಡಳಿತ ವ್ಯವಸ್ಥೆ ರೂಪುಗೊಳ್ಳುತ್ತಿದೆ.

Communal Harmony ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ಪಡೆದ ಮುಸ್ಲಿಮರು, ಇದು ಭಾವೈಕ್ಯತೆ ಭಾರತ!

ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನಗೊಳಿಸುವುದಾಗಿ 2014 ಮತ್ತು 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಚನ ನೀಡಿತ್ತು. ಬಾಂಗ್ಲಾದೇಶ, ಅಷ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಜಾರಿಗೆ ತಂದಿದ್ದು ಪ್ರಧಾನಿ ಮೋದಿ ಸರ್ಕಾರದ ಮತ್ತೊಂದು ಪ್ರಮುಖ ಮೈಲಿಗಲ್ಲು. ಭಾರತೀಯರಲ್ಲದ ಅನೇಕರು ದೇಶದಲ್ಲಿ ಅಕ್ರವಾಗಿ ನೆಲೆಯೂರುತ್ತಿದ್ದಾಗ ಅವರನ್ನು ಹೊರ ಹಾಕಲು ಕಟ್ಟಿನಿಟ್ಟಿನ ಕಾನೂನು ತಂದರೆ ವಿಪಕ್ಷಗಳಿಗೇಕೆ ಅಸಮಾಧಾನ ಎಂಬುದು ಅರ್ಥವಾಗುತ್ತಿಲ್ಲ. ಇಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಎಂಬುದು ಪೌರತ್ವ ಕೊಡುವುದೇ ಹೊರತು ಕಿತ್ತುಕೊಳ್ಳುವುದಲ್ಲ ಎಂಬುದನ್ನು ಈ ದೇಶದ ಜನ ಅರ್ಥಮಾಡಿಕೊಳ್ಳಬೇಕು.

ಹಿಂದುತ್ವಕ್ಕೆ ಅಪಮಾನ ಸಹಿಸಲ್ಲ

ಭಾರತ ಪಾಕಿಸ್ತಾನ ವಿಭಜನೆಯ ನಂತರ ಈ ನೆಲ ಭಾರತೀಯರದ್ದು. ನಾಲ್ಕಾರು ಧರ್ಮ, ಸಾವಿರಾರು ಜಾತಿ, ಮೂರು ಸಾವಿರಕ್ಕೂ ಹೆಚ್ಚು ಸ್ಥಳೀಯ ಭಾಷೆಗಳನ್ನಾಡುವ ಜನರು ತಮ್ಮದೇ ಸಂಸ್ಕೃತಿಗೆ ಹೊಂದಿಕೊಂಡು ಬದುಕುತ್ತಿದ್ದಾರೆ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಈ ನೆಲದ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ಸಹಿಸಲು ಅಸಾಧ್ಯ. ಅದಕ್ಕೆ ಕಾನೂನು ಮೂಲಕವೇ ಉತ್ತರ ಕೊಡಲಾಗಿದೆ. ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರಿದ ಮೇಲೆ ದೇಶದ ಯಾವ ಮೂಲೆಯಲ್ಲಿ ಯಾವುದೇ ಧರ್ಮದ ಜನರಿಗೂ ತೊಂದರೆಯಾಗಿಲ್ಲ. ‘ಭಾರತೀಯರಾದ ನಾವು’ ಎಂಬ ಸಂವಿಧಾನದ ಪ್ರಸ್ತಾವನೆಗೆ ಬದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಆದರೆ ಅಧಿಕಾರ ಬೇಕು ಎಂಬ ಹಪಹಪಿತನದಿಂದ ಸ್ವಾತಂತ್ರ್ಯ ಬಂದು 60 ವರ್ಷಗಳ ಕಾಲ ಅಧಿಕಾರ ನಡೆಸಿದ ಐತಿಹಾಸಿಕ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಮಾಡುತ್ತಿರುವ ಧರ್ಮಾಧಾರಿತ, ಜಾತಿಯಾಧಾರಿತ ರಾಜಕೀಯವನ್ನು ಭಾರತೀಯ ಮುಕ್ತ ಮನಸ್ಸುಗಳು ಸೂಕ್ಷ್ಮವಾಗಿ ಅವಲೋಕಿಸಲಿ.

ಹಿಜಾಬ್‌ ಮತ್ತು ಶಿಕ್ಷಣ

ಉಡುಪಿ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ಸೃಷ್ಟಿಯಾದ ಹಿಜಾಬ್‌ ವಿವಾದ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿತು. ಅದೊಂದು ಹೆಣ್ಣು ಮಕ್ಕಳ ಕಾಲೇಜು. ಸಮವಸ್ತ್ರ ತೊಟ್ಟು ಪಾಠ ಕೇಳಿ ಶಿಕ್ಷಣ ನೀತಿನಿಯಮಗಳನ್ನು ಪರಿಪಾಲಿಸಿ,ಈ ನೆಲೆದ ಕಾನೂನು ಗೌರವಿಸಿ ಎಂದು ತಿಳಿ ಹೇಳಲಾಗಿತ್ತು. ಆದರೆ ಅದೇ ಶಾಲೆಯಲ್ಲಿ ನೂರಕ್ಕೂ ಹೆಚ್ಚು ಮುಸಲ್ಮಾನ ಹೆಣ್ಣು ಮಕ್ಕಳ ನಡುವೆ ಈ ಆರು ಜನ ಹಿಜಾಬ್‌ ವಿದ್ಯಾರ್ಥಿನಿಯರನ್ನು ಮುನ್ನಲೆಗೆ ತಂದು ವಿವಾದ ಕಿಡಿ ಹೊತ್ತಿಸಿದಾಗ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದವು.

Azaan Row 'ಪೈಗಂಬರ್ ಕಾಲದಲ್ಲಿ ಮೈಕ್ ಇರಲಿಲ್ಲ' ಮೈಕ್ ಬ್ಯಾನನ್ ಪರ ಸಿ ಟಿ ರವಿ ಬ್ಯಾಟಿಂಗ್

ಆ ವಿಷಯವನ್ನು ಪೂರ್ವಾಗ್ರಹ ಪೀಡಿತರು ಯಾವುದೋ ದಿಕ್ಕಿಗೆ ಕೊಂಡೊಯ್ದರು. ಇಲ್ಲಿ ಪ್ರಮುಖ ವಿಷಯವೇನೆಂದರೆ ವಸ್ತ್ರ ಸಂಹಿತೆ ಎಂಬುದು ಕರ್ನಾಟಕ ಸರ್ಕಾರವು ಕರ್ನಾಟಕ ಶಿಕ್ಷಣ ಕಾಯ್ದೆ-1983ರಲ್ಲಿ ವಿವರಿಸಿದಂತೆ ವಿದ್ಯಾರ್ಥಿಗಳು ಒಂದೇ ಕುಟುಂಬದಂತೆ ನಡೆದುಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ. ಈ ವಿಚಾರದಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದವರಿಗೆ ರಾಜ್ಯ ಹೈಕೋರ್ಚ್‌ ಸರಿಯಾಗಿಯೇ ಚಾಟಿ ಬೀಸಿತು. ಈ ಮಧ್ಯೆ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹೊಡೆತ ಬೀಳುತ್ತದೆ ಎಂದು ಅಂದು ಕೊಂಡಿದ್ದ ವಿಪಕ್ಷ ನಾಯಕರಿಗೆ ಜನರು ಸ್ಪಷ್ಟಉತ್ತರ ಕೊಟ್ಟಿದ್ದಾರೆ. ಇಂತಹ ಧರ್ಮಾಧಾರಿತ ರಾಜಕೀಯ ಮಾಡುವ ದುರ್ಬುದ್ಧಿಗೆ ಮತದಾರ ಮಣೆ ಹಾಕುವುದಿಲ್ಲ ಎಂಬುದು ಸ್ಪಷ್ಟವಾಯಿತು.

ವ್ಯಾಪಾರದಲ್ಲಿ ‘ಧರ್ಮ’ಯುದ್ಧ

ಹಿಜಾಬ್ ವಿವಾದದ ಕಿಡಿ ಈಗ ಮತ್ತೊಂದು ರೂಪಕ್ಕೆ ತಿರುಗಿದೆ. ಕಳೆದ ವರ್ಷ ಗಂಗೊಳ್ಳಿ ಮೀನು ಮಾರುಕಟ್ಟೆಮತ್ತು ಸುತ್ತಮುತ್ತಲ ಮೀನು ಮಾರುಕಟ್ಟೆಗಳಲ್ಲಿ ‘ಹಿಂದೂ ಧರ್ಮದವರಿಂದ ಮೀನು ಖರೀದಿಸಬಾರದು’ಎಂದು ಫರ್ಮಾನು ಹೊರಡಿಸಿದರು. ಹೊಟ್ಟೆಪಾಡಿಗೆ, ದೈನಂದಿನ ಜೀವನ ನಡೆಸಲು ಮೀನು ಮಾರುತ್ತಿರುವ ಮೀನುಗಾರರಿಂದ ಒಂದೇ ಸಮನೆ ಮೀನು ಖರೀದಿಗೆ ಬಹಿಷ್ಕಾರ ಹಾಕುವ ಮೂಲಕ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಲಾಯಿತು. ಆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ. ಅದನ್ನು ಮಾಡದೇ ಇದ್ದಿದ್ದರೆ ಇಷ್ಟೆಲ್ಲಾ ರಾದ್ಧಾಂತ ಆಗುತ್ತಿತ್ತಾ?

ಹಾಗಾದರೆ ಹಿಂದೂಗಳ ಮಟನ್‌ ಸ್ಟಾಲ್‌ಗಳಲ್ಲಿ ಮುಸಲ್ಮಾನರು ಮಾಂಸ ಖರೀದಿಸುತ್ತಾರೆಯೇ? ‘ನಮ್ಮ ದೇವರಿಗೆ ಆಗಲ್ಲ’ ಎಂಬ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಇಸ್ಲಾಂ ಮಂತ್ರ ಹೇಳಿ ಹಲಾಲ್‌ ಮಾಡಿದ ಮಾಂಸವನ್ನು ಹಿಂದೂ ದೈವ ಭಕ್ತರಿಗೆ ಒಪ್ಪಿತವಾಗುತ್ತದೆಯೇ? ಸಮಾನತೆ ಎಂಬುದು ಏಕಪಕ್ಷೀಯವಲ್ಲ. ಎಲ್ಲರೂ ಒಂದೇ ಎನ್ನುವ ಉದಾರತೆಯ, ಜಾತ್ಯತೀತತೆಯ ಪಾಠವನ್ನು ಹಿಂದೂಗಳಿಗೆ ಯಾರೂ ಹೇಳುವ ಅಗತ್ಯವಿಲ್ಲ. ಬಹುಸಂಖ್ಯಾತ ಹಿಂದೂಗಳನ್ನು ಮೋಸ ಮಾಡುವ ಉದ್ದೇಶದಿಂದಲೇ ಜಾತ್ಯತೀತತೆ, ಉದಾರತೆಯ ಎಂಬ ಪದಗಳನ್ನು ಬಳಸಲಾಗುತ್ತಿದೆ. ಹಾಗಾದರೆ ಸ್ವಾತಂತ್ರ್ಯ ಬರುವ ಮುಂಚೆ ಈ ದೇಶ ಕೋಮುವಾದಿಯಾಗಿತ್ತಾ? ಈ ನೆಲದ ನಂಬಿಕೆಯಲ್ಲಿಯೇ ಸರ್ವಧರ್ಮ ಸಮಭಾವ ಎನ್ನುವ ನಂಬಿಕೆಯಿದೆ. ಈ ನೆಲದಲ್ಲಿ ಹುಟ್ಟಿದ ಎಲ್ಲ ಧರ್ಮಗಳು ಬಹುತತ್ವನ್ನು ಒಪ್ಪಿವೆ.

ಹಲಾಲ್- ಜಟ್ಕಾ ಮಧ್ಯೆ ಭಾವೈಕ್ಯತೆಯ ಸಂದೇಶ ಮುಸ್ಲಿಮರಿಂದಲೂ ಕೃಷ್ಣಾ ಪುಣ್ಯ ಸ್ನಾನ

ಹಿಂದೂಗಳ ಭಜನೆಯಲ್ಲಿಯೇ ‘ರಘುಪತಿ ರಾಘವ ರಾಜಾ ರಾಮ್‌.. ಪತಿತ ಪಾವನ ಸೀತಾ ರಾಮ್‌, ಈಶ್ವರ ಅಲ್ಲಾ ತೇರೇಹ ನಾಮ್‌ ಸಬ್ಕೋ ಸಂಮತೀ ಹೇ ಭಗವಾನ್‌’ ಎಂದು ಹೇಳಲಾಗುತ್ತಿದೆ. ನಾವೆಲ್ಲಾ ಹಿಂದೂಗಳು ಸಂಕೋಚವಿಲ್ಲದೇ ದೇವಸ್ಥಾನಗಳಲ್ಲಿ ಈ ಭಜನೆ ಹಾಡುತ್ತೇವೆ. ಆದರೆ ಈ ದೇಶದ ಯಾವುದಾದರೂ ಒಂದೇ ಒಂದು ಮಸೀದಿ-ದರ್ಗಗಳಲ್ಲಿ ‘ಈಶ್ವರ ಅಲ್ಲಾ ತೇರೇಹ ನಾಮ್‌’ ಎಂದು ಹಾಡಿದ ಉದಾಹರಣೆಯನ್ನು ತೋರಿಸಲಿ? ಒಬ್ಬ ಮುತಾವಲ್ಲಿ, ಒಬ್ಬ ಮೌಲ್ವಿ ‘ದೇವನೊಬ್ಬ ನಾಮ ಹಲವು’‘ ಈಶ್ವರ ಮತ್ತು ಅಲ್ಲ ಒಂದೇ’ ಎಂದು ಹೇಳಿಲ್ಲ. ಅವರೇ ಬಹುತ್ವನ್ನು ಒಪ್ಪಿಕೊಳ್ಳುವುದಿಲ್ಲ ಎಂದಾದ ಮೇಲೆ ನಮಗೆæ ಜಾತ್ಯತೀತೆಯ ಪಾಠ ಬೋಧಿಸುವ ಅಗತ್ಯವಾದರೂ ಏನು?

ಸಮಾನತೆ ಪದದ ಅರ್ಥ ಗೊತ್ತಾ?

ಮುಂದುವರಿದು ಕರಾವಳಿ, ಮಲೆನಾಡು ಭಾಗಗಳಲ್ಲಿ ಪ್ರಸ್ತುತ ದೇವಸ್ಥಾನಗಳ ಜಾತ್ರೆ, ರಥೋತ್ಸವ ಸಮಯ. ಇದು ಧರ್ಮ-ಧರ್ಮಗಳ ಮಧ್ಯೆ ವ್ಯಾಪಾರ ಧರ್ಮ ಹೊಸ ಆಯಾಮಕ್ಕೆ ತಿರುಗಿದೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಶಿವಮೊಗ್ಗದ ಮಾರಿಕಾಂಬ ಜಾತ್ರೆಯಲ್ಲಿ, ಉಡುಪಿಯ ನಂದಿಕೇಶ್ವರ ಜಾತ್ರೆ, ಕಲಬುರಗಿ ದೇವಾಲಯಗಳ ಬಳಿ ಹಿಂದುಯೇತರರಿಗೆ ವ್ಯಾಪಾರ ನಡೆಸಲು ಅವಕಾಶ ಕೊಡಬಾರದು ಎಂದು ಒತ್ತಾಯ ಕೇಳಿಬಂದಿದೆ. ವ್ಯಾಪಾರಂ ದ್ರವ್ಯ ಚಿಂತನ ಎಂಬ ಮಾತು ಸುಳ್ಳಲ್ಲ. ಪ್ರತಿಯೊಬ್ಬ ವ್ಯಾಪಾರಿಯ ಉದ್ದೇಶ ಲಾಭ. ಆದರೆ ನನ್ನದೊಂದು ಪ್ರಶ್ನೆ? ಹಿಂದೂ ದೇವಸ್ಥಾನಗಳ ಸುತ್ತ ಸಂಕುಚಿತ ಮನೋಭಾವದ ವ್ಯಾಪಾರಿಗಳು ವ್ಯಾಪಾರ ಮಾಡುತ್ತಾರೆ. ಹಣ್ಣು, ಕಾಯಿ, ಕರ್ಪೂರ, ಊದುಬತ್ತಿ, ಹೂವಿನ ಹಾರ, ಬಟ್ಟೆಸೇರಿ ಪ್ರತಿಯೊಂದು ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಆದರೆ ಅವರ ಧಾರ್ಮಿಕ ಕೇಂದ್ರಗಳ ಸುತ್ತ ಅನ್ಯ ಧರ್ಮಿಯರಿಗೆ ವ್ಯವಹಾರ ಮಾಡಲು ಅವಕಾಶವಿಲ್ಲದಂತೆ ಸಂಕಿರ್ಣ ಕಾನೂನು ರೂಪಿಸಿಕೊಂಡಿರುವ ಇವರಿಗೆ ಸಮಾನತೆ ಪದದ ಅರ್ಥಗೊತ್ತಾ?

2002ರಲ್ಲಿ ರೂಪಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ನಿಯಮದಲ್ಲಿ (ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ಪುಸ್ತಕದ ಪುಟ ಸಂಖ್ಯೆ 446ರಲ್ಲಿರುವ 12 ನಿಯಮದಲ್ಲಿದೆ) ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಮತ್ತು ನಿವೇಶನಗಳೂ ಸೇರಿದಂತೆ ಯಾವುದೇ ಸವಲತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದಲ್ಲ ಎಂದು ಉಲ್ಲೇಖಿಸಲಾಗಿದೆ. ಆಗ ಇದ್ದದ್ದು ಯಾವ ಸರ್ಕಾರ? ಈ ಇಬ್ಭಾಗದ ನೀತಿ, ಸಮಾಜ ಒಡೆಯುವ ಕಾರ್ಯದಿಂದಲೇ ಭಾರತೀಯರ ಐಕ್ಯತೆಗೆ ಧಕ್ಕೆಯಾಗುತ್ತಿದೆ.

ತುಷ್ಟೀಕರಣ, ಸ್ವಜನ ಪಕ್ಷಪಾತ ಪರಿಭಾಷೆಯನ್ನು ಬೆಳೆಸಿದ್ದು, ಜಾತಿ ರಾಜಕಾರಣವನ್ನು ಬಿತ್ತಿದ್ದು ಬೆಳೆಸಿದ್ದು ಕಾಂಗ್ರೆಸ್‌ ಆಡಳಿತ ವ್ಯವಸ್ಥೆಯ ಅವಧಿಯಲ್ಲಿ. ಪ್ರಜಾಪ್ರಭುತ್ವದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ತುಳಿದು ವಂಶರಾಜಕಾರಣ ಬೆಳೆಸುತ್ತಾ ಒಳಗೊಂದು ಹೊರಗೊಂದು ಮುಖವಾಡದ ಬದುಕು ಹಾಕಿಕೊಂಡು ನಾವು ಜಾತ್ಯತೀತ ವಾದಿಗಳು ಎಂದು ರಾಜಕೀಯ ಮಾಡುವವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ಬಿಜೆಪಿ ನಾಯಕರಿಗಿಲ್ಲ.

ಹಲಾಲ್‌ ಆರ್ಥಿಕ ಜಿಹಾದ್‌?

ರಾಜ್ಯದಲ್ಲಿ ಹಲಾಲ್‌ ಅನ್ನುವುದು ಈಗ ಚರ್ಚಾ ವಸ್ತುವಿಷಯವಾಗಿದೆ. ಹಲಾಲ್‌ ಮಾರ್ಕ್ನ ವಸ್ತುಗಳನ್ನು ಬಹಿಷ್ಕಾರ ಹಾಕಬೇಕು ಎಂದು ಹಿಂದು ಸಂಘಟನೆಗಳು ಒತ್ತಾಯಿಸುತ್ತಿವೆ. ಹಾಗಾದರೆ ಹಲಾಲ್‌ ಎಂಬ ಟ್ರೇಡ್‌ಮಾರ್ಕ್ ನಮ್ಮ ದೇಶ ದಲ್ಲಿ  ಪ್ರಮಾಣೀಕೃತ ಮಾಂಸವೇ? ಅಷ್ಟಕ್ಕೂ ಹಲಾಲ್‌ ಅಂದರೆ ಏನು? ಅದರ ಉದ್ದೇಶವೇನು? ಏತಕ್ಕಾಗಿ ಪ್ರಾರಂಭಿಸಿದರು ಎಂಬುದಕ್ಕೆ ನಾನಾ ಆಯಾಮಗಳಲ್ಲಿ ಯೋಚಿಸಿದರೆ ವ್ಯಾಪ್ತಿ ಮತ್ತು ವಿಶಾಲ ದೊಡ್ಡದಾಗಿದೆ.

ಮೂಲತಃ ಹಲಾಲ್‌ ಮತ್ತು ಹರಾಮ್‌ ಅನ್ನುವುದು ಅರಬ್ಬೀ ಪದಗಳು. ಮುಸ್ಲಿಮರ ಆಹಾರದ ವಿಷಯದಲ್ಲಿ ಚಾಲ್ತಿಗೆ ಬಂದಿರುವಂಥದ್ದು. ಹಲಾಲ್‌ ಅಂದರೆ ಧರ್ಮ ಸಮ್ಮತ ಎನ್ನುವುದಷ್ಟೇ ಅರ್ಥ. ಹರಾಮ್‌ ಎಂದರೆ ಧರ್ಮ ನಿಷೇಧಿತ ಎಂದರ್ಥ. ಹಲಾಲ್‌ ಹೆಸರಿನಲ್ಲಿ ಕೋಳಿ ಇನ್ನಿತರ ಮಾಂಸದಂಗಡಿಗಳು ಚಾಲ್ತಿಗೆ ಬಂದಿದ್ದವು. ಕಳೆದ ಹತ್ತು ವರ್ಷಗಳಲ್ಲಿ ಕರಾವಳಿ ಭಾಗದಲ್ಲಿ ಹಲಾಲ್‌ ಚಿಕನ್‌ ಸೆಂಟರ್‌ ಇನ್ನಿತರ ಅಂಗಡಿಗಳು ಶುರುವಾಗಿವೆ. ಅದಕ್ಕೂ ಹಿಂದೆ ಇರಲಿಲ್ಲ. ಆದರೆ ಇದೇ ಹೊತ್ತಿಗೆ ಹಲಾಲ್‌ ಅನ್ನುವುದು ಗಲ್‌್ಫ ಮಾರುಕಟ್ಟೆಯಲ್ಲಿ ಟ್ರೇಡ್‌ ಮಾರ್ಕ್ ಆಗಿ ಬೆಳೆದು ಬಂತು.

ಮೇಲುಕೋಟೆ ಚೆಲುವನಾರಾಯಣನಿಗೂ ತಟ್ಟಿದ ಧರ್ಮಸಂಕಟ

ಮುಸ್ಲಿಂ ಕೇಂದ್ರಿತವಾಗಿ ವ್ಯಾಪಾರ, ವಹಿವಾಟು ಬೆಳೆಸುವ ಹಿಡನ್‌ ಅಜೆಂಡವನ್ನು ಈ ರೀತಿಯ ಟ್ರೇಡ್‌ ಮಾರ್ಕ್ ಎನ್ನಬಹುದು. ಅನಂತರ ಇತರೆ ವಸ್ತುಗಳನ್ನು ಕೊಳ್ಳಲು ಹಲಾಲ್‌ ಮಾರ್ಕ್ ಇದ್ದರಷ್ಟೇ ಖರೀದಿಸಿ ಎಂದು ಮುಸ್ಲಿಮರಿಗೆ ಪರೋಕ್ಷವಾಗಿ ಸೂಚನೆ ನೀಡಿದ್ದರಿಂದ ಹಲಾಲ್‌ ಮಾರುಕಟ್ಟೆಟ್ರೆಂಡ್‌ ಸೃಷ್ಟಿಯಾಗಿ ಅದು ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಮುಂಬೈನಂತಹ ಪ್ರಮುಖ ನಗರಗಳಲ್ಲಿ ಕಾಣಿಸಿಕೊಂಡು ಹೈಪರ್‌ ಮಾರ್ಕೆಟ್‌ ಆಗಿದೆ.

ಆದರೆ ಈ ಹಲಾಲ್‌ ಮಾರ್ಕಿಂಗ್‌ ಹಿನ್ನೆಲೆಯೇನು? ಆ ಸಾಮಾಗ್ರಿಗೂ ಹಲಾಲ್‌ಗೂ ಏನು ಸಂಬಂಧ ಎನ್ನುವುದು ಜನರಿಗೆ ತಿಳಿದಿರಲಿಕ್ಕಿಲ್ಲ. ಮೂಲತಃ ಹಲಾಲ್‌ ಅನ್ನವುದು ಮುಸ್ಲಿಮರ ಪಾಲಿಗೆ ಸ್ವೀಕಾರಾರ್ಹ ಪದ. ಆದರೆ ಅದೇ ಪದವನ್ನು ಎಲ್ಲ ವಸ್ತುಗಳಿಗೂ ಹಲಾಲ್‌ ಅನ್ನೋದನ್ನು ಟ್ರೇಡ್‌ ಮಾರ್ಕ್ ಮಾಡಲಾಗುತ್ತಿದೆ. ಹಲಾಲ್ ಪದ್ಧತಿ ಬಗ್ಗೆ ವಿಸೃತವಾದ ಚರ್ಚೆಯನ್ನು ಸಾರ್ವಜನಿಕರಿಗೆ ಬಿಡೋಣ. ಹಲಾಲ್‌ ಅಂದರೆ ಏನು? ಯಾರು ಪ್ರಾರಂಭಿಸಿದರು. ಏತಕ್ಕಾಗಿ ಪ್ರಾರಂಭಿಸಿದರು. ಅದಕ್ಕೊಂದು ಉದ್ದೇಶವಿರಬೇಕಲ್ಲವೇ?

ಹಲಾಲ್‌ ಉದ್ದೇಶ ಆರ್ಥಿಕ ಜಿಹಾದ್‌ ಎಂಬ ಪದ ಸರಿ ಹೊಂದಬಹುದು. ಒಂದು ವಸ್ತುವಿನ ಗುಣಮಟ್ಟಪರೀಕ್ಷೆಗೆ ಬಿಐಎಸ್‌ ಸರ್ಟಿಫಿಕೇಟ್‌ ಇರುತ್ತದೆ. ಈ ಹಲಾಲ್‌ ಮಾಂಸಕ್ಕೆ ಸರ್ಟಿಫಿಕೇಟ್‌ ಕೊಡುವವರು ಯಾರು? ನಮ್ಮದೇ ದೇಶದಲ್ಲಿ ಉತ್ಪಾದನೆಯಾಗುವ ಮಾಂಸಕ್ಕೆ ನಮ್ಮ ಭಾರತ ಸರ್ಕಾರ ಬಿಐಎಸ್‌ ಸರ್ಟಿಫಿಕೇಟ್‌ ಕೊಟ್ಟರೆ ನಮ್ಮದೇನು ತಕರಾರು ಇಲ್ಲ. ನಾವೇ ಜನರಿಗೆ ಮನವಿ ಮಾಡಿ ಬಿಐಎಸ್‌ ಮಾರ್ಕ್ನ ಮಾಂಸ ಖರೀದಿಸಿ ಎನ್ನುತ್ತೇವೆ. ಆದರೆ ಹಲಾಲ್‌ ಮಾರ್ಕ್ನ ಪ್ಯಾಕೆಟ್‌ ಮಾಂಸ ಮತ್ತು ಅದರ ಹೆಸರಿನಲ್ಲಿ ಪ್ರಾಣಿ ವಧೆ ಮಾಡುವ ಹಿಂದಿನ ಉದ್ದೇಶ ಜನರಿಗೆ ತಿಳಿಯ ಬೇಕಲ್ಲವೇ?

ಒಂದು ಕಡೆ ಜಾತ್ಯತೀತ ಎಂದು ಹೇಳಿಕೊಳ್ಳುವ ಅನೇಕ ನಾಯಕರು ಮತ, ಧರ್ಮದ ಐಡೆಂಟಿಟಿ ಆಧಾರ ಮೇಲೆ ನಡೆಯಬಾರದು ಎಂದು ಹೇಳಿಕೊಳ್ಳುವ ನಾಯಕರು ಹಲಾಲ್‌ ಸೀಲ್‌ ಹಾಕುವುದನ್ನು ವಿರೋಧಿಸುವುದಿಲ್ಲ. ಒಂದು ಧರ್ಮದ ಆಧಾರ ಮೇಲೆ ಹಲಾಲ್‌ ಸೀಲ್‌ ಹಾಕುವುದು ಎಷ್ಟರ ಮಟ್ಟಿಗೆ ಸರಿ. ಅದನ್ನು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಾ. ಹಲಾಲ್‌ ಅನ್ನು ಮನೆಯಲ್ಲಿ ಇಟ್ಟುಕೊಳ್ಳಲಿ. ವಿದೇಶಗಳಿಗೆ ಹೋಗುವ ಮಾಂಸದ ವಸ್ತುಗಳಿಗೆ ‘ಹಲಾಲ್‌ ಬ್ರಾಂಡ್‌’ ಹೆಸರಿನಲ್ಲಿ ಹೋಗುವ ಮನಸ್ಥಿತಿಯೇ ಆರ್ಥಿಕ ಜಿಹಾದ್‌.

ಅಂದರೆ ಮುಸಲ್ಮಾನರು ತಯಾರಿಸಿದ ಪ್ರವೃತ್ತಿಗೆ ನೀವು ಮಾರುಕಟ್ಟೆಕೊಡುವುದೆಂದಾದರೆ ಇದನ್ನು ಮಾಡಿದ್ದು ಯಾವ ಉದ್ದೇಶಕ್ಕಾಗಿ. ವಿದೇಶದಲ್ಲಿ ಹೇಗೋ ಅದನ್ನು ಮಾರಾಟ ಮಾಡುತ್ತಿದ್ದೀರಿ. ವಿದೇಶದಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿ ಬೇಕಾದರೆ ಅದು ನಡೆಯಲಿ. ಆದರೆ ಭಾರತ ಬಹುತ್ವದ ದೇಶ. ಇಲ್ಲಿ ಹಲಾಲ್‌ ಅನ್ನು ಬ್ರಾಂಡ್‌ ಮಾಡಲು ಹೊರಟಿದ್ದೀರಲ್ಲ ಇದರ ಹಿಂದಿನ ಉದ್ದೇಶವಾದರೂ ಏನು? ಮೊದಲೆಲ್ಲಾ ಹೋಟೆಲುಗಳ ಬೋರ್ಡುಗಳಲ್ಲಿ ಹಲಾಲ್ ಚಿಕನ್‌/ಮಟನ್‌ ದೊರೆಯುತ್ತದೆ ಎನ್ನುವುದಕ್ಕೆ ಸೀಮಿತವಾಗಿತ್ತು. ಆ ನಂತರ ದೊಡ್ಡ ಮಟ್ಟದಲ್ಲಿ ಹಲಾಲ್ ಸರ್ಟಿಫಿಕೇಟ್ ಉದ್ಯಮ ಆರಂಭವಾಗಿ ಇವತ್ತಿಗೆ ಆ ಸರ್ಟಿಫಿಕೇಟಿನ ಕಬಂಧಬಾಹು ವ್ಯಾಪಿಸಿದೆ. ಇದರ ಉದ್ದೇಶ ಮಾಂಸ ವ್ಯಾಪಾರ ತಮ್ಮ ಜಗುಲಿಯಲ್ಲೇ ನಡೆಯಬೇಕು. ತಮ್ಮವರಿಗೆ ಮಾತ್ರ ಉದ್ಯೋಗ ದಕ್ಕಿಸಿಕೊಂಡು ಇತರರ ಉದ್ಯೋಗವನ್ನು ಕಸಿದುಕೊಳ್ಳುವ ನೀತಿಯ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿ.

ಹಲಾಲ್‌ -ಜಾತ್ಯತೀತತೆ

ದೇಶದ ಯಾವ ಲ್ಯಾಬ್‌ನಲ್ಲಿ ಹಲಾಲ್‌ ಗುಣಮಟ್ಟವನ್ನು ಪ್ರಾಮಾಣಿಕರಿಸುವ ಸರ್ಟಿಫಿಕೇಟ್‌ ಕೊಡಲಾಗಿದೆ. ಸರ್ಕಾರ ಅದನ್ನು ಅಧಿಕೃತವಾಗಿ ಮಾನ್ಯ ಮಾಡಿದೆಯಾ? ಯಾವ ಪಕ್ಷ ಅಧಿಕಾರದಲ್ಲಿದ್ದಾಗ ಮಾನ್ಯ ಮಾಡಿದೆ ಹೇಳಲಿ. ‘ಹಲಾಲ್‌’ ಅರ್ಥವನ್ನಾದರೂ ಬುದ್ಧಿ ಜೀವಿಗಳು, ಮೇದಾವಿಗಳು ತಿಳಿಸಲಿ. ಮತಾಂಧತೆ ಮತ್ತು ಹಲಾಲ್‌ ಒಟ್ಟಿಗೆ ಇರಬಹುದೇನೋ. ಆದರೆ ಹಲಾಲ್‌ ಮತ್ತು ಜಾತ್ಯತೀತತೆ ಒಟ್ಟೊಟ್ಟಿಗೆ ಇರಲು ಸಾಧ್ಯವಿಲ್ಲ. ಈ ಸಮಾಜಕ್ಕೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಚರ್ಚೆಗೆ ಬಿಡೋಣ.

ಎಷ್ಟೋ ಸಂಗತಿಗಳನ್ನು ಸಮಾಜ ನಿರ್ಧಾರ ಮಾಡಿದ ಮೇಲೆ ಸರ್ಕಾರ ತೀರ್ಮಾನ ಮಾಡುತ್ತದೆ. ಇನ್ನು ಕೆಲವು ವೇಳೆ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಜನರು ಒಪ್ಪುತ್ತಾರೆ. ಹಲಾಲ್‌ ಮಾಂಸದ ದಂಧೆ ಬೇರೆಯವರ ಕೈಗೆ ಹೋಗಬಾರದು ಎಂಬುದು ಅವರ ಉದ್ದೇಶವಿರಬಹುದು. ಪಾಕಿಸ್ತಾನ, ಗಲ್‌್ಫ ರಾಷ್ಟ್ರಗಳಲ್ಲಿ ಹಲಾಲ್‌ ಬ್ರಾಂಡ್‌ ಸರಿಯಿರಬಹುದೇನೋ ಆದರೆ ಪ್ರಜಾಪ್ರಭುತ್ವದ ಭಾರತದಲ್ಲಿ ಹಲಾಲ್‌ ಹೆಸರಿನ ಬ್ರಾಂಡ್‌ ಮಾಂಸ ಮಾರಾಟ ಸರಿಯೇ?

ಒಂದು ವೇಳೆ ಹಲಾಲ್‌ ಮಾಡದ (ಜಟ್ಕಾ ಕಟ್‌)ಮಾಂಸವನ್ನು ಮುಸ್ಲಿಮರು ತಿನ್ನುತ್ತಾರೆಯೇ? ಹಾಗಾದರೆ ಹಲಾಲ್‌ ಮಾಡಿದ ಮಾಂಸವನ್ನು ಹಿಂದುಗಳು ತಿನ್ನಬಹುದಾ? ಹಲಾಲ್‌ ಮಾಂಸ ಶ್ರೇಷ್ಠ ಎಂದು ಹೇಳಲು ಅವರಿಗೆ ಹಕ್ಕನ್ನು ಕೊಟ್ಟವರು ಯಾರು? ಅವರು ಬ್ರಾಂಡ್‌ ಮಾಡಿ ಹಲಾಲ್‌ ಮಾಂಸ ಶ್ರೇಷ್ಠ ಎಂದು ಪ್ರಚಾರ ಮಾಡಬಹುದಾದರೆ, ಹಲಾಲ್‌ ಮಾಡದ ಮಾಂಸವೂ ಶ್ರೇಷ್ಠ ಎಂದು ಹೇಳುವ ಹಕ್ಕು ಹಿಂದೂಪರ ಸಂಘಟನೆಗಳಿಗೂ ಇದೆ ಅಲ್ಲವೇ? ಇದೆಲ್ಲಾ ಸೂಕ್ಷ್ಮ ವಿಚಾರವಾಗಿದ್ದು ಜನ ಇದನ್ನು ನಿರ್ಧಾರ ಮಾಡಲಿ. ಕೇಸರಿ ಬಟ್ಟೆಹಾಕಿದವರು ಎಂದೂ ಸಮಾಜವನ್ನು ಒಡೆಯುವುದಿಲ್ಲ. ದೇಶವನ್ನೂ ಒಡೆದ ಉದಾಹರಣೆ ಇಲ್ಲ. ಕೇಸರಿ ಎಂಬುದು ಶೌರ್ಯ ಮತ್ತು ತ್ಯಾಗದ ಸಂಕೇತ.

- ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Follow Us:
Download App:
  • android
  • ios