ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ಆರೋಪಿಗಳು ದೇಹದ ಖಾಸಗಿ ಭಾಗಗಳಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದರು. ಈ ಜಾಲದಲ್ಲಿ ಏರ್ಪೋರ್ಟ್ ಸಿಬ್ಬಂದಿಯ ಪಾತ್ರದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು: ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (DRI) ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ಭಾರೀ ಪ್ರಮಾಣದ ಚಿನ್ನದ ಕಳ್ಳಸಾಗಣೆ ಜಾಲವನ್ನು ಭೇದಿಸಿ, ಸುಮಾರು 5 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 356 ಗ್ರಾಂ ಶುದ್ಧ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಸೇರಿ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರನ್ಯಾ ರಾವ್ ಪ್ರಕರಣದ ಬಳಿಕ ಮತ್ತೊಂದು ದೊಡ್ಡ ಸ್ಮಗ್ಲಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, DRI ಅಧಿಕಾರಿಗಳ ಕಾರ್ಯಾಚರಣೆ ಗಮನಸೆಳೆಯುತ್ತಿದೆ. ಗುಪ್ತಚರ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಟರ್ಮಿನಲ್-2 ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.

ಚಿನ್ನ ಸಾಗಾಟದ ಹೊಸ ತಂತ್ರಗಳು ಬಯಲು

ತನಿಖೆಯಲ್ಲಿ ಆರೋಪಿಗಳು ಚಿನ್ನವನ್ನು ಕ್ಯಾಪ್ಸುಲ್ ಹಾಗೂ ಪೇಸ್ಟ್ ರೂಪದಲ್ಲಿ ಪರಿವರ್ತಿಸಿ ದೇಹದ ಖಾಸಗಿ ಭಾಗಗಳಲ್ಲಿ ಅಡಗಿಸಿಕೊಂಡು ಸಾಗಾಟ ಮಾಡುತ್ತಿದ್ದರೆಂಬ ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ವಿಮಾನ ನಿಲ್ದಾಣದ ಶೌಚಾಲಯಗಳು ಮತ್ತು ಧೂಮಪಾನ ವಲಯಗಳಲ್ಲಿ ಈ ಚಿನ್ನವನ್ನು ಪರಸ್ಪರ ಹಸ್ತಾಂತರ ಮಾಡಲಾಗುತ್ತಿತ್ತು.

ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಲು ಆರೋಪಿಗಳು ವಿಶೇಷ ಪಾಸ್‌ಕೋಡ್‌ಗಳನ್ನು ಬಳಸಿಕೊಂಡು ಸಂಪರ್ಕ ಸಾಧಿಸುತ್ತಿದ್ದರು. ಇನ್ನು ಸಂವಹನಕ್ಕಾಗಿ ಎನ್‌ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಮತ್ತು ಡಿಸಪಿಯರ್ ಚಾಟ್‌ಗಳನ್ನೂ ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಏರ್ಪೋರ್ಟ್ ಸಿಬ್ಬಂದಿಯ ಪಾತ್ರದ ಶಂಕೆ

ಈ ಕಳ್ಳಸಾಗಣೆ ಜಾಲವು ಸಿಂಡಿಕೇಟ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಧ್ಯತೆ ಇದ್ದು, ನಿರ್ಬಂಧಿತ ವಲಯಗಳಿಗೆ ಅಧಿಕೃತ ಪ್ರವೇಶ ಹೊಂದಿದ್ದ ವ್ಯಕ್ತಿಗಳ ಸಹಕಾರವೂ ಇದರಲ್ಲಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು DRI ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಬಾಂಗ್ಲಾದೇಶ ಮೂಲದ ಜಾಲದ ಸುಳಿವು

ಪ್ರಾಥಮಿಕ ತನಿಖೆಯಲ್ಲಿ ಈ ಕಳ್ಳಸಾಗಣೆ ಜಾಲದ ಹಿಂದೆ ಬಾಂಗ್ಲಾದೇಶ ಮೂಲದ ವ್ಯಕ್ತಿಗಳ ಸಂಪರ್ಕ ಇರುವುದಾಗಿ ತಿಳಿದುಬಂದಿದೆ. ಜೊತೆಗೆ ಬೆಂಗಳೂರಿನ ಕೆಲವರ ಸಹ ಭಾಗಿತ್ವವೂ ಇರುವ ಶಂಕೆ ವ್ಯಕ್ತವಾಗಿದೆ. ಆದರೆ ಈ ಜಾಲದ ಪ್ರಮುಖ ಮಾಸ್ಟರ್‌ಮೈಂಡ್‌ಗಳು (Kingpins) ಇನ್ನೂ ಪತ್ತೆಯಾಗಿಲ್ಲ.

ತನಿಖೆ ಮುಂದುವರಿಕೆ

ಪ್ರಸ್ತುತ ಪ್ರಕರಣದ ಕುರಿತು DRI ಅಧಿಕಾರಿಗಳು ಸವಿಸ್ತಾರ ತನಿಖೆ ನಡೆಸುತ್ತಿದ್ದು, ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ. ಈ ಘಟನೆ ಬೆಂಗಳೂರು ಏರ್ಪೋರ್ಟ್‌ನಲ್ಲಿ ಭದ್ರತಾ ಕ್ರಮಗಳ ಬಗ್ಗೆ ಹೊಸ ಪ್ರಶ್ನೆಗಳನ್ನು ಎಬ್ಬಿಸಿದೆ.