- Home
- News
- State
- ರಾಜ್ಯದ 'ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್' ಅಧಿಕೃತ ಆದೇಶ! ಡಿಪೋದಿಂದ ಉಚಿತ ಪಾಸ್ ಪಡೆಯೋದು ಹೇಗೆ? ಇಲ್ಲಿದೆ ವಿವರ
ರಾಜ್ಯದ 'ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್' ಅಧಿಕೃತ ಆದೇಶ! ಡಿಪೋದಿಂದ ಉಚಿತ ಪಾಸ್ ಪಡೆಯೋದು ಹೇಗೆ? ಇಲ್ಲಿದೆ ವಿವರ
ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ 'ಉಚಿತ ಬಸ್ ಪಾಸ್' (Students Free Bus Pass) ಯೋಜನೆಗೆ ಆದೇಶ ಹೊರಡಿಸಿದೆ. KSRTC, BMTC ಬಸ್‌ಗಳ ಉಚಿತ ಪಾಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಹಣ ಮರುಪಾವತಿ ಯಾವಾಗ? ತಿಳಿಯಲು ಕ್ಲಿಕ್ ಮಾಡಿ.

ಬೆಂಗಳೂರು (ಜೂ.11): ಕರ್ನಾಟಕದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಸಂಚರಿಸುವ ಎಲ್ಲಾ ವಿದ್ಯಾರ್ಥಿಗಳಿಗೆ 'ಉಚಿತ ಬಸ್ ಪಾಸ್' ವಿತರಿಸಲು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಈ ಯೋಜನೆಯು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಏನಿದೆ ಸರ್ಕಾರದ ಆದೇಶದಲ್ಲಿ?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (KKRTC) ಬಸ್‌ಗಳಲ್ಲಿ ಪ್ರಯಾಣಿಸುವ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಈ ಉಚಿತ ಪಾಸ್ ಅನ್ವಯವಾಗಲಿದೆ.
ಈ ಹಿಂದೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಬಸ್ ಪಾಸ್ ದರದ ಶೇ. 25 ರಷ್ಟು ಮೊತ್ತವನ್ನು ಪಾವತಿಸಬೇಕಿತ್ತು. ಆದರೆ ಈಗ ಸಚಿವ ಸಂಪುಟದ ತೀರ್ಮಾನದಂತೆ ವಿದ್ಯಾರ್ಥಿಗಳು ಯಾವುದೇ ಹಣ ಪಾವತಿಸುವಂತಿಲ್ಲ. ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಹಣ ಪಾವತಿಸಿದವರಿಗೆ 15 ದಿನಗಳಲ್ಲಿ ಹಣ ವಾಪಸ್:
2026-27ನೇ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ (ದಿನಾಂಕ 30.05.2026 ರಿಂದ 09.06.2026 ರವರೆಗೆ) ಹಣ ಪಾವತಿಸಿ ಬಸ್ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಸರ್ಕಾರವು ಬಂಪರ್ ಆಫರ್ ನೀಡಿದೆ. ಅಂತಹ ವಿದ್ಯಾರ್ಥಿಗಳು ಪಾವತಿಸಿರುವ ಮೊತ್ತವನ್ನು ಮುಂದಿನ 15 ದಿನಗಳ ಒಳಗಾಗಿ ಮರುಪಾವತಿ (Refund) ಮಾಡಲು ಆದೇಶದಲ್ಲಿ ಸೂಚಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳು ಸರ್ಕಾರದ 'ಸೇವಾ ಸಿಂಧು' ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಶೈಕ್ಷಣಿಕ ವ್ಯಾಸಂಗದ ಅರ್ಹತಾ ಮಾನದಂಡಗಳು, ದೂರದ ಮಿತಿ ಮತ್ತು ಪಾಸ್‌ನ ಕಾಲಾವಧಿಗೆ ಸಂಬಂಧಿಸಿದಂತೆ ಸಾರಿಗೆ ನಿಗಮಗಳ ಪ್ರಸ್ತುತ ನಿಯಮಾವಳಿಗಳೇ ಮುಂದುವರಿಯಲಿವೆ.
ಗಡಿ ಭಾಗದ ವಿದ್ಯಾರ್ಥಿಗಳಿಗೂ ಅನ್ವಯ:
ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯಗಳ ಗಡಿ ಭಾಗದಲ್ಲಿರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳಿಗೂ ಈ ಉಚಿತ ಬಸ್ ಪಾಸ್ ಸೌಲಭ್ಯ ದೊರೆಯಲಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಸರ್ಕಾರವು ಅಂದಾಜು 286.08 ಕೋಟಿ ರೂ.ಗಳ ಕಾರ್ಯಾಚರಣೆ ವೆಚ್ಚ ಹಾಗೂ 15 ಕೋಟಿ ರೂ.ಗಳ ಸಂಸ್ಕರಣಾ ಶುಲ್ಕವನ್ನು ಭರಿಸಲಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗಿದ್ದು, ಸಾರಿಗೆ ವೆಚ್ಚದ ಹೊರೆ ತಪ್ಪಿದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

