ಹೆಣ್ಣು ಮಕ್ಕಳೇ ಸೋಷಿಯಲ್ ಮೀಡಿಯಾದಲ್ಲಿ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನ ಎಚ್ಚರ. ಅದರಲ್ಲೂ ಅಪರಿಚಿತ ಹುಡುಗ ಹ್ಯಾಂಡ್ಸಮ್ ಆಗಿದ್ದಾನೆ ಅಂತಾ ಮರುಳಾದ್ರೆ ನಿಮ್ಮ ಕಥೆ ಗೋವಿಂದ.
ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಏ.07): ಹೆಣ್ಣು ಮಕ್ಕಳೇ ಸೋಷಿಯಲ್ ಮೀಡಿಯಾದಲ್ಲಿ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನ ಎಚ್ಚರ. ಅದರಲ್ಲೂ ಅಪರಿಚಿತ ಹುಡುಗ ಹ್ಯಾಂಡ್ಸಮ್ ಆಗಿದ್ದಾನೆ ಅಂತಾ ಮರುಳಾದ್ರೆ ನಿಮ್ಮ ಕಥೆ ಗೋವಿಂದ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಸ್ನ್ಯಾಪ್ ಚಾಟ್ ಮೂಲಕ ಪರಿಚಯವಾದವರು ಮಹಿಳೆಯನ್ನು ಹೇಗೆಲ್ಲಾ ಆಟ ಆಡಿಸಿದ್ರು ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಡ್ತೀವಿ ನೋಡಿ.
ಈತನ ಹೆಸರು ಚೆನ್ನೂರು ಮಹೇಶ್ ಅಂತಾ. ಈತನ ಲುಕ್ ಗೆ ಎಂತವರು ಫಿದಾ ಆಗೋದು ಗ್ಯಾರಂಟಿ. ಈಗ ಮತ್ತೊಂದು ಫೋಟೋ ತೋರುಸ್ತೀವಿ ನೋಡಿ. ಈ ಫೋಟೋದಲ್ಲಿರೋದು ಇದೇ ಮಹೇಶ. ಅರೇ ಇದೇನ್ನಪ್ಪ ಒಂದೇ ಹೆಸರು ಬೇರೆ ಬೇರೆ ವ್ಯಕ್ತಿಗಳು ಅಂತಾ ಕನ್ಫ್ಯೂಸ್ ಆಗಬೇಡಿ. ಇಂಗು ತಿಂದ ಮಂಗನಂತಿರುವ ಇವನು ಹೆಣ್ ಮಕ್ಕಳನ್ನು ಪಟಾಯಿಸೋಕೆ ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡಿದ್ದಾನೆ.
ಸೋಷಿಯಲ್ ಮೀಡಿಯಾ ಅನ್ನೋದು ಎಷ್ಟು ಉಪಯೋಗವೋ. ಅಷ್ಟೇ ಅಪಾಯಕಾರಿ ಅನ್ನೋದಕ್ಕೆ ಈ ಕೇಸ್ ಉತ್ತಮ ಉದಾಹರಣೆ. ಸುಮಾರು ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್ ಚಾಟ್‌ನಲ್ಲಿ ಮಹಿಳೆಯೊಬ್ಬರಿಗೆ ಪರಿಚಯವಾಗಿದ್ದ ಆರೋಪಿಗಳು, ಮೆಲ್ಲಗೆ ಆಕೆಯ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಿದ್ದರು. ನಂತರ ವಾಟ್ಸ್ ಆ್ಯಪ್ ವಿಡಿಯೋ ಕಾಲ್ ಮಾಡುವಾಗ ಮಹಿಳೆಗೆ ತಿಳಿಯದಂತೆ ಸ್ಕ್ರೀನ್ ಶಾಟ್ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡು ಅಸಲಿ ಆಟ ಶುರು ಮಾಡಿದ್ದರು.
ನಿನ್ನ ಖಾಸಗಿ ಫೋಟೋಗಳನ್ನು ಗಂಡನಿಗೆ ಕಳಿಸುತ್ತೇವೆ. ಸೋಶಿಯಲ್ ಮೀಡಿಯಾದಲ್ಲಿ ಹಾಕ್ತೇವೆ ಅಂತ ಬೆದರಿಸಿದ ಕಿರಾತಕರು, ಹಂತಹಂತವಾಗಿ ಮಹಿಳೆಯಿಂದ 40 ಲಕ್ಷ ಕ್ಯಾಶ್ ಮತ್ತು 1 ಕೆಜಿ ಚಿನ್ನಾಭರಣ ಪೀಕಿದ್ದಾರೆ. ಆರೋಪಿಗಳ ಕಾಟ ತಾಳಲಾರದೆ ಮಹಿಳೆ ಕೊನೆಗೆ ತನ್ನ ಪತಿಗೆ ವಿಷಯ ತಿಳಿಸಿದ್ದಾರೆ.ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಆಂಧ್ರಪ್ರದೇಶದ ಮೂಲದ ಚೆನ್ನೂರು ಮಹೇಶ್ ಮತ್ತು ವನ್ನೂರು ಸ್ವಾಮಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಇನ್ನೂ ಈ ವನ್ನೂರು ಸ್ವಾಮಿ ಸಹ ಮಹೇಶನ ಮುಖಾಂತರ ಮಹಿಳೆಗೆ ಪರಿಚಯವಾಗಿದ್ದನಂತೆ. ಯಾವಾಗ ಮಹೇಶನ ಬಳಿ ಫೋಟೋ,ವಿಡಿಯೋಗಳು ಇರುವ ಬಗ್ಗೆ ಗೊತ್ತಾಯ್ತು ಈತನೂ ಮಹೇಶನ ಜೊತೆ ಸೇರಿಕೊಂಡು ಮಹಿಳೆಗೆ ಬೆದರಿಸಿ ಹಣ, ಚಿನ್ನಾಭರಣ ಪೀಕಿದ್ದ. ಸದ್ಯ ಬಂಧಿತರಿಂದ ಬರೋಬ್ಬರಿ 571 ಗ್ರಾಂ ಚಿನ್ನಾಭರಣ ಹಾಗೂ 25 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನು ಆರೋಪಿಗಳು ಆನ್ಲೈನ್ ಬಟ್ಟಿಂಗ್ ಸಾಕಷ್ಟು ಹಣ ಕಳೆದುಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ.
ಪೊಲೀಸರೇ ಶಾಕ್
ಮತ್ತೊಂದು ಕಡೆ ಇಬ್ಬರ ಮೊಬೈಲ್ ಪರಿಶೀಲಿಸಿದ ಪೊಲೀಸರೇ ಶಾಕ್ ಆಗಿದ್ದಾರೆ. ಯಾಕಂದ್ರೆ ಕೇವಲ ಈ ಮಹಿಳೆ ಮಾತ್ರವಲ್ಲ, ಇನ್ನು ಅನೇಕ ಯುವತಿಯರ ಮತ್ತು ಮಹಿಳೆಯರ ಖಾಸಗಿ ಫೋಟೋಗಳು ಫೋನ್‌ನಲ್ಲಿ ಪತ್ತೆಯಾಗಿವೆ. ಸದ್ಯ ಪೊಲೀಸರು ಈ ಇಬ್ಬರು ಅಂತರ್ರಾಜ್ಯ ವಂಚಕರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಅದೆನೇ ಹೇಳಿ ಸುಂದರ ಸಂಸಾರವಿದ್ರು ಸಹ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಸಿಕ್ಕವರ ಜೊತೆ ಚಾಟ್ ಮಾಡುವ ಹೆಣ್ ಮಕ್ಕಳು ಇನ್ನಾದ್ರೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲದಿದ್ರೆ ನಿಮ್ಮ ಬದುಕು ಮೂರಾಬಟ್ಟೆಯಾಗೋದಂತೂ ಗ್ಯಾರಂಟಿ.


