Asianet Suvarna News Asianet Suvarna News

ಎಂಬಿಬಿಎಸ್‌ ಓದಿಲ್ಲದ ಬಾಪೂಜಿ ಸಮಾಜಕ್ಕೆ ಡಾಕ್ಟರ್, ಮನೋವಿಜ್ಞಾನಿ!

ಗಾಂಧೀಜಿ ಬರೆದ ೧೯೨೦ರಲ್ಲಿ ಪ್ರಕಟವಾದ ‘ಎ ಗೈಡ್ ಟು ಹೆಲ್ತ್’ ಪುಸ್ತಕದ ಬಗ್ಗೆ ಬಹುಶಃ ಬಹು ಜನರಿಗೆ ಗೊತ್ತಿಲ್ಲ. ಶಿಸ್ತಿನ ಜೀವನ ಶೈಲಿ, ಸರಳ ಆಹಾರ ಕ್ರಮದ ಬಗೆಗೆ, ಜೀವನದಲ್ಲಿ ನೆಮ್ಮದಿಯ ಮಹತ್ವದ ಬಗ್ಗೆ ಅವರು ಹೇಳಿರುವ ಮಾತುಗಳು, ಹಿಂದಿಗಿಂತ ಇಂದಿನ ಆಧುನಿಕ ಜೀವನ ವಿಧಾನದಲ್ಲಿ ಗಮನಾರ್ಹ ಎನ್ನಿಸುತ್ತವೆ.

Gandhi jayanti special article  written by Dr SK Pavitra shivamogga rav
Author
First Published Oct 2, 2023, 7:01 AM IST

- ಡಾ.ಕೆಎಸ್ ಪವಿತ್ರಾ, ಶಿವಮೊಗ್ಗ

ನಾನು ವೈದ್ಯಕೀಯ ಪದವಿ ಗಳಿಸಿ ಇಂಟರ್ನ್‌ಶಿಪ್ ಮಾಡುತ್ತಿದ್ದ ಹೊತ್ತು. ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆ ಬರೆಯಲು ದೆಹಲಿಯ ಏಮ್ಸ್ ಸಂಸ್ಥೆಗೆ ಹೋಗಿದ್ದೆ. ಕುತೂಹಲಕ್ಕೆ ದೊಡ್ಡ ಕ್ಯಾಂಪಸ್ ಸುತ್ತಾಡುತ್ತಿದ್ದೆ. ಆಸ್ಪತ್ರೆಯ ಒಂದು ಗೋಡೆಯ ಮೇಲೆ ಗಾಂಧೀಜಿ ಹೇಳಿದ ಮಾತುಗಳನ್ನು ಕೆತ್ತಿದ ದೊಡ್ಡ ಫಲಕ. ‘ನಮ್ಮ ರೋಗಿ ನಮ್ಮ ಮೇಲೆ ಅವಲಂಬಿತ ಎಂದು ನೀವು ಭಾವಿಸಿದರೆ ಅದು ತಪ್ಪು. ನಾವು ಅವನ ಮೇಲೆ ಅವಲಂಬನೆ ಹೊಂದಿರುವವರು. ಅವನಿಗೆ ಚಿಕಿತ್ಸೆ ನೀಡುವುದರಿಂದ, ಸೇವೆ ಮಾಡುವುದರಿಂದ ನಾವು ಅವನಿಗೆ ಉಪಕಾರ ಮಾಡುತ್ತಿಲ್ಲ. ಅದರ ಬದಲು, ನಮಗೆ ಸೇವೆ ನೀಡುವ ಅವಕಾಶ ನೀಡಿ, ನಮಗೇ ಅವನು ಉಪಕಾರ ಮಾಡುತ್ತಿದ್ದಾನೆ.’ ವೈದ್ಯಕೀಯ ಮಹಾವಿದ್ಯಾಲಯವೊಂದರ ಗೋಡೆಯ ಮೇಲೆ ಬರೆದಿದ್ದ ಈ ಮಾತುಗಳು ‘ರೋಗಿಗಳು ಅಜ್ಞಾನಿಗಳು, ಅವರಿಗೆ ಚಿಕಿತ್ಸೆ ನೀಡುವ ನಾವು -ವೈದ್ಯರು ಹಲವು ವರ್ಷಗಳು ರೋಗಗಳ ಬಗ್ಗೆ ತಿಳಿದು, ಪರೀಕ್ಷೆಗಳನ್ನು ಪಾಸು ಮಾಡಿ ಚಿಕಿತ್ಸೆ ನೀಡುವ ಜ್ಞಾನಿಗಳು’ ಎಂಬ ನನ್ನಲ್ಲಿದ್ದ ಸಾಮಾನ್ಯ, ಸುಭದ್ರ ಪೂರ್ವಗ್ರಹವನ್ನು ಒಂದೇ ಏಟಿಗೆ ಅಲ್ಲಾಡಿಸಿ, ಚಿಂತಿಸುವಂತೆ ಮಾಡಿದವು! ರೋಗಿಗಳು ತಮ್ಮ ದೇಹ-ಮನಸ್ಸುಗಳನ್ನು ನಮ್ಮ ಸುಪರ್ದಿಗೆ ಒಪ್ಪಿಸುವುದೇ ಒಂದು ವಿಸ್ಮಯ ಎನಿಸಿಬಿಟ್ಟಿತು!

ಗಾಂಧೀಜಿ ಮನೋವಿಜ್ಞಾನಿ

ಅಲ್ಲಿಯವರೆಗೆ ಮಹಾತ್ಮಾ ಗಾಂಧಿಗೂ, ವಿಜ್ಞಾನಕ್ಕೂ ಏನು ಸಂಬಂಧ ಎಂದು ಯೋಚಿಸಿರದ ನನಗೆ ಗಾಂಧೀಜಿಗೂ, ವೈದ್ಯಕೀಯಕ್ಕೂ ಎಷ್ಟು ಕೊಂಡಿಗಳಿವೆ ಎಂಬುದರ ಬಗ್ಗೆ ಅಚ್ಚರಿ ಮೊದಲಾಯಿತು. ಗಾಂಧೀಜಿಯ ಆತ್ಮಕಥೆಯಲ್ಲಿ ಮೊದಲ ಪುಟಗಳಲ್ಲಿಯೇ ಹೀಗೆ ಹೇಳುತ್ತಾರೆ- ‘ಈ ಪ್ರಯೋಗಗಳು ಯಾವುದೇ ರೀತಿಯಲ್ಲಿ ಪೂರ್ಣವಾಗಿವೆಯೆಂದು ನಾನು ಎಂದಿಗೂ ಹೇಳಿಕೊಳ್ಳಲಾರೆ. ವಿಜ್ಞಾನಿಯೊಬ್ಬ ತನ್ನ ಪ್ರಯೋಗಗಳ ವಿಷಯದಲ್ಲಿ ಹೇಳುವುದಕ್ಕಿಂತ ಹೆಚ್ಚಾಗಿ ನಾನೂ ನನ್ನ ಈ ಪ್ರಯೋಗಗಳ ವಿಷಯದಲ್ಲಿ ಏನನ್ನೂ ಹೇಳಿಕೊಳ್ಳಲಾರೆ. ಅವನು ತನ್ನ ಪ್ರಯೋಗಗಳನ್ನು ಅತ್ಯಂತ ಎಚ್ಚರಿಕೆ, ಮುಂದಾಲೋಚನೆ, ಮತ್ತು ಸೂಕ್ತ ವಿಧಾನದಿಂದ ನಡೆಸಿದರೂ ತನ್ನ ತೀರ್ಮಾನಗಳೇ ಕೊನೆಯ ನಿರ್ಧಾರಗಳೆಂದು ಎಂದಿಗೂ ಹೇಳದೆ ಅವುಗಳ ವಿಷಯದಲ್ಲಿ ತೆರೆದ ಮನಸ್ಸನ್ನುಳ್ಳವನಾಗಿರುತ್ತಾನೆ.’ ಅಂದರೆ ವಿಜ್ಞಾನದ ಪ್ರಯೋಗಗಳಂತೆ, ಸತ್ಯದ ಪ್ರಯೋಗಗಳನ್ನೂ ಗಾಂಧೀಜಿ ಮಾಡುತ್ತಾರೆ! ಮಕ್ಕಳ ಮನೋವೈದ್ಯಕೀಯದ ಎಷ್ಟೋ ವಿಚಾರಗಳನ್ನು ತಂದೆ- ತಾಯಿ-ಮಕ್ಕಳ ಸಂಬಂಧ, ಬಾಲ್ಯದ ಪ್ರಭಾವ, ಗೆಳೆಯರ ಪ್ರಭಾವ, ವ್ಯಕ್ತಿತ್ವದಲ್ಲಿ ಪರಿವರ್ತನೆಗೆ ಕಾರಣವಾಗುವ ಹಲವು ಅನುಭವಗಳು, ಪತಿ-ಪತ್ನಿಯರ ನಡುವಣ ಸಂಬಂಧದ ಹಲವು ಆಯಾಮಗಳು ಇವೆಲ್ಲವನ್ನೂ ಗಾಂಧೀಜಿಯ ಆತ್ಮಕಥೆಯಲ್ಲಿ ವಿಶ್ಲೇಷಣಾತ್ಮಕವಾಗಿ ಕಾಣಬಹುದು.

ಯಾದಗಿರಿ ಜಿಲ್ಲೆಯಲ್ಲಿ ಗಾಂಧೀಜಿ ದೇಗುಲ, ನ್ಯಾಯ ಅರಸಿ ಬಂದವರಿಗೆ ಇಲ್ಲಿನ ಗಾಂಧಿ ಕಟ್ಟೆಯಲ್ಲೇ ಪಂಚಾಯಿತಿ!

ಮನೋವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ‘ಗಾಂಧಿ-ಒಂದು ಕೇಸ್ ಸ್ಟಡಿ’, ‘ಬ್ರಿಟಿಷ್ ವೈದ್ಯಕೀಯ-ಎನ್‌ಎಚ್‌ಎಸ್ ಗಾಂಧಿಯಿಂದ ಕಲಿಯಬೇಕಾದ್ದೇನು?’ ಎಂಬ ಅಧ್ಯಯನಗಳು, ಸಮ್ಮೇಳನಗಳೂ ನಡೆದಿವೆ. ಲಂಡನ್ನಿನ ನರೀಂದರ್ ಕಪೂರ್ ಎಂಬ ಮನೋವಿಜ್ಞಾನಿ ಗಾಂಧೀಜಿಯ ತತ್ತ್ವಗಳ ಮನೋವೈಜ್ಞಾನಿಕ ವಿಶ್ಲೇಷಣೆ-ಪ್ರಸ್ತುತತೆ ಬಗ್ಗೆ ಸುದೀರ್ಘ ಅಧ್ಯಯನಗಳನ್ನು ನಡೆಸಿದ್ದಾರೆ. ಅವರ ಒಂದು ಸ್ವಾರಸ್ಯಕರ ಬರಹ ಬ್ರಿಟಿಷ್ ಮನೋವಿಜ್ಞಾನ ಸೊಸೈಟಿಯಲ್ಲಿ ಈಗ ಗಾಂಧೀಜಿಯಿದ್ದಿದ್ದರೆ ನೀಡಬಹುದಾದ ಉಪನ್ಯಾಸ. ೧೯೬೭ರ ಸೆಪ್ಟೆಂಬರ್ ೧ರಂದು, ತಾನು ಕೊಲೆಯಾಗುವ ೬ ತಿಂಗಳ ಮೊದಲು ಮಾರ್ಟಿನ್ ಲೂಥರ್ ಕಿಂಗ್ ಅಮೇರಿಕನ್ ಮನೋವಿಜ್ಞಾನ ಸೊಸೈಟಿಯಲ್ಲಿ ಉಪನ್ಯಾಸ ನೀಡಿ ವರ್ತನಾ ವಿಜ್ಞಾನಿಗಳ ಜವಾಬ್ದಾರಿ - ಸಾಮಾಜಿಕ ಪಾತ್ರಗಳನ್ನು ವಿವರಿಸಿದನಂತೆ. ಮಾರ್ಟಿನ್ ಲೂಥರ್ ಕಿಂಗ್‌ಗೆ ಸ್ಫೂರ್ತಿಯಾಗಿದ್ದ ಗಾಂಧೀಜಿ ತನ್ನ ತತ್ತ್ವಗಳ ಪ್ರಸ್ತುತತೆಯ ಬಗ್ಗೆ ಈಗ ಹೇಗೆ ಉಪನ್ಯಾಸ ನೀಡುತ್ತಿದ್ದಿರಬಹುದು ಎಂಬುದನ್ನು ನರೀಂದರ್ ಕಪೂರ್ ಇಲ್ಲಿ ಊಹಿಸುತ್ತಾರೆ. ಅಹಿಂಸೆ-ಸತ್ಯ-ರಾಜಕೀಯ ನಡವಳಿಕೆಗಳ ಬಗ್ಗೆ ಗಾಂಧೀಜಿ ಈಗ ಇದ್ದಿದ್ದರೆ ಹೇಳುವ ಮಾತುಗಳನ್ನು ಅರ್ಥಪೂರ್ಣವಾಗಿ ಧ್ವನಿಸುತ್ತಾರೆ.

ಆರೋಗ್ಯಕ್ಕೆ ಗಾಂಧೀಜಿ ಮಾರ್ಗದರ್ಶಿ

ಗಾಂಧೀಜಿಯವರು ಬರೆದಿರುವ ೧೯೨೦ರಲ್ಲಿ ಪ್ರಕಟವಾದ ‘ಎ ಗೈಡ್ ಟು ಹೆಲ್ತ್’ ಪುಸ್ತಕದ ಬಗ್ಗೆ ಬಹುಶಃ ಬಹು ಜನರಿಗೆ ಗೊತ್ತಿಲ್ಲ. ಶಿಸ್ತಿನ ಜೀವನ ಶೈಲಿ, ಸರಳ ಆಹಾರ ಕ್ರಮದ ಬಗೆಗೆ, ಜೀವನದಲ್ಲಿ ನೆಮ್ಮದಿಯ ಮಹತ್ವದ ಬಗ್ಗೆ ಗಾಂಧೀಜಿ ಹೇಳಿರುವ ಮಾತುಗಳು, ಹಿಂದಿಗಿಂತ ಇಂದಿನ ಆಧುನಿಕ ಜೀವನ ವಿಧಾನದಲ್ಲಿ ಗಮನಾರ್ಹ ಎನ್ನಿಸುತ್ತವೆ. ೧೦೦ ವರ್ಷಗಳಷ್ಟು ಹಳೆಯ ಈ ಪುಸ್ತಕದಲ್ಲಿ ಚರ್ಚೆ ಮಾಡಲಾದ ಸಂಗತಿಗಳು ಇಂದಿಗೂ ಚರ್ಚಿತವೇ! ಹಾಗಾಗಿಯೇ ‘ಬಾಪೂ ಡಾಕ್ಟರ್’ ಇವತ್ತಿಗೂ ಬೇಕು ಅನ್ನಿಸುತ್ತದೆ.

ಸಮಾಜಕ್ಕೂ ಗಾಂಧಿ ಡಾಕ್ಟರ್‌!

ದೆಹಲಿಯ ಸಂಗ್ರಹಾಲಯದಲ್ಲಿ ಹೊರಗಿಟ್ಟಿರುವ ಫೋನೆತ್ತಿದರೆ ಬಾಪೂ ಭಾಷಣ ಕೇಳುತ್ತದೆ; ಮದುರೈನ ಗಾಂಧೀ ಸ್ಮಾರಕದಲ್ಲಿ ೧೫ ಭಾಷೆಗಳಲ್ಲಿ ಗಾಂಧೀಜಿ ಸಹಿ ಹಾಕಿರುವ ಕಾಗದ ಜೀವಂತವಾಗಿದೆ; ಮರಣ ಹೊಂದಿದಾಗ ಮಹಾತ್ಮಾ ಗಾಂಧಿ ಉಟ್ಟಿದ್ದ ವಸ್ತ್ರವನ್ನು ರಕ್ತ ಕಲೆಯ ಸಹಿತ ಕಾಪಿಡಲಾಗಿದೆ. ಇವೆಲ್ಲದರಿಂದ ಈಗಲೂ ಮನಸ್ಸು ಮೂಕವಾಗುವುದು -ಸ್ತಬ್ಧವಾಗುವುದು. ಜನರನ್ನು ವರುಷಗಳವರೆಗೆ ಹಿಡಿದಿಡಬಲ್ಲ ಗಾಂಧಿ ಎಂಬ ವ್ಯಕ್ತಿಯ ಅಗಾಧ ಸಾಮರ್ಥ್ಯವನ್ನು ಇವು ತೋರಿಸುತ್ತವೆಯೇ? ಇಲ್ಲ, ಅವು ತೋರಿಸುವುದು ಸತ್ಯ-ಪ್ರೀತಿ-ಅಹಿಂಸೆ- ದೃಢತ್ವಗಳ ಸಾರ್ವಕಾಲಿಕತೆಯನ್ನು! ಹಾಗಾಗಿಯೇ ಇಂದಿಗೂ ಬಾಪೂ ಡಾಕ್ಟರ್ ಇಡೀ ಸಮಾಜಕ್ಕೆ ಚಿಕಿತ್ಸೆಗಾಗಿ ಪ್ರಸ್ತುತವೇ!  

ಗಾಂಧೀಜಿಯವರ ಆಹಾರ ಕ್ರಮ ಅನುಸರಿಸಿ, ವೃದ್ಧಾಪ್ಯದಲ್ಲೂ ಆರೋಗ್ಯದಿಂದಿರಿ!

ಗಾಂಧೀಜಿ ಬರೆದ ೧೯೨೦ರಲ್ಲಿ ಪ್ರಕಟವಾದ ‘ಎ ಗೈಡ್ ಟು ಹೆಲ್ತ್’ ಪುಸ್ತಕದ ಬಗ್ಗೆ ಬಹುಶಃ ಬಹು ಜನರಿಗೆ ಗೊತ್ತಿಲ್ಲ. ಶಿಸ್ತಿನ ಜೀವನ ಶೈಲಿ, ಸರಳ ಆಹಾರ ಕ್ರಮದ ಬಗೆಗೆ, ಜೀವನದಲ್ಲಿ ನೆಮ್ಮದಿಯ ಮಹತ್ವದ ಬಗ್ಗೆ ಅವರು ಹೇಳಿರುವ ಮಾತುಗಳು, ಹಿಂದಿಗಿಂತ ಇಂದಿನ ಆಧುನಿಕ ಜೀವನ ವಿಧಾನದಲ್ಲಿ ಗಮನಾರ್ಹ ಎನ್ನಿಸುತ್ತವೆ.

- ಡಾ। ಕೆ.ಎಸ್. ಪವಿತ್ರ

Follow Us:
Download App:
  • android
  • ios